ಸಾರಾಂಶ
ಕೊಪ್ಪಳ:
ಜಿಲ್ಲಾಡಳಿ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ಸೆಲ್ಕೊ ಫೌಂಡೇಶನ್ ವತಿಯಿಂದ ಜೂ. 26, 27ರಂದು ಕೊಪ್ಪಳ-ಸೌರ ಕೃಷಿ ಉದ್ಯೋಗ ಉತ್ಸವವನ್ನು ನಗರದ ಕಠಾರೆ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಉತ್ಸವದ ಕುರಿತು ಮಾಹಿತಿ ನೀಡಿದ ಅವರು, ರೈತರು ಎಸ್‌ಡಿಒ, ಎಸ್‌ಎಸ್‌ಜಿ, ಎನ್‌ಆರ್‌ಎಲ್‌ಎಂಗಳಿಗೆ ಸ್ವಯಂ ಉದ್ಯೋಗಕ್ಕಾಗಿ ರೊಟ್ಟಿ ಮತ್ತು ಹಪ್ಪಳ ತಯಾರಿಸುವ ಯಂತ್ರ ನೀಡಿದ್ದು ವಿದ್ಯುತ್ ಮೂಲಕ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ಬದಲಿಗೆ ಸೌರಶಕ್ತಿ ಮೂಲಕ ಯಾವ ರೀತಿ ಬಳಕೆ ಮಾಡಬೇಕೆಂಬುದನ್ನು 30ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆ ಹಾಗೂ ಮಳಿಗೆ ಮುಖಾಂತರ ತಿಳಿಸಲಾಗುವುದು. ಸೌರ ಶಕ್ತಿಯಿಂದ ಬಳಕೆ ಮಾಡಬಹುದಾದ ಕೃಷಿಗೆ ಸಂಬಂಧಿಸಿದ ಯಂತ್ರ, ಸ್ವ-ಉದ್ಯೋಗಕ್ಕಾಗಿ ಬೇಕಾಗುವ ಯಂತ್ರೋಪಕರಣಗಳನ್ನು ಸಹಾಯಧನ ರೂಪದಲ್ಲಿ ನೀಡಲಾಗುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಸಾಲ ಮತ್ತು ಸಹಾಯಧನ ಸೌಲಭ್ಯಕ್ಕೆ ಸಂಬಂಧಿಸಿದ ಸೂಕ್ತ ಮಾಹಿತಿ ನೀಡುವ ಜತೆಗೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಮಹಿಳಾ ಹಾಗೂ ರೈತ ಸ್ನೇಹಿ ತಂತ್ರಜ್ಞಾನ ಕುರಿತು ತಿಳಿವಳಿಕೆ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಈ ಉತ್ಸವದಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಸೆಲ್ಕೊ ಫೌಂಡೇಶನ್ ತಂತ್ರಜ್ಞರು ಪಾಲ್ಗೊಳ್ಳಲಿದ್ದು ಸ್ವ-ಸಹಾಯ ಗುಂಪುಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.ಸೆಲ್ಕೊ ಫೌಂಡೇಶನ್ ಮ್ಯಾನೇಜರ್ ಪ್ರಕಾಶ ಮೇಟಿ ಮಾತನಾಡಿ, 15 ವರ್ಷದಿಂದ ದೇಶಾದ್ಯಂತ ಸುಸ್ಥಿರ ಅಭಿವೃದ್ಧಿ ಹಾಗೂ ಸೌರ ವಿದ್ಯುತ್ ವಿಭಾಗದಲ್ಲಿ ಸೆಲ್ಕೋ ಫೌಂಡೇಶನ ಹೊಸ ಆವಿಷ್ಕಾರ ಮಾಡುತ್ತಿದೆ. ಜಿಲ್ಲೆಯಲ್ಲಿ 200 ವಿಶೇಷಚೇತನರಿಗೆ ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳಲು ಸಹಾಯ ಮಾಡಿದೆ. 200ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಗಳನ್ನು ಸೌರಯುಕ್ತಗಳನ್ನಾಗಿಸಿದೆ. ಕೃಷಿ ಹೈನುಗಾರಿಕೆ ಅವಲಂಬಿತ ರೈತರಿಗೆ 500ಕ್ಕೂ ಹೆಚ್ಚು ಸೌರ ವಿದ್ಯುತ್ ಅಳವಡಿಸಲು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
26ರಂದು ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, 27ರಂದು ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಸೌರ ಸ್ವ-ಉದ್ಯೋಗ ಮೇಳ ಏರ್ಪಡಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುರೇಶ ಜಿ., ಕೃಷಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಇತರರು ಇದ್ದರು.