ಕಾಶ್ಮೀರದಲ್ಲಿ ಕೊಪ್ಪಳ ಪ್ರವಾಸಿಗರು ಸುರಕ್ಷಿತ

| Published : Apr 24 2025, 12:02 AM IST

ಸಾರಾಂಶ

ಶಾಸಕ ರಾಘವೇಂದ್ರ ಹಿಟ್ನಾಳ ಅವರು ಸಚಿವ ಸಂತೋಷ ಲಾಡ್ ಅವರಿಗೆ ಕೊಪ್ಪಳ ಪ್ರವಾಸಿಗರ ಮಾಹಿತಿ ನೀಡಿ, ರಕ್ಷಿಸುವಂತೆ ಕೋರಿದ್ದರು. ಹೀಗಾಗಿ, ಸಚಿವ ಸಂತೋಷ ಲಾಡ್, ಪ್ರವಾಸಿಗರು ತಂಗಿದ್ದ ಹೋಟೆಲ್‌ಗೆ ತೆರಳಿ ಮಾತನಾಡಿದರು. ಯಾರೂ ಸಹ ಭಯಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ಸರ್ಕಾರವಿದೆ. ನಿಮ್ಮನ್ನು ಸುರಕ್ಷಿತವಾಗಿ ನಿಮ್ಮೂರಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕೊಪ್ಪಳ:

ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದ ಕೊಪ್ಪಳ ನಗರದ 19 ಪ್ರವಾಸಿಗರು ಸುರಕ್ಷಿತವಾಗಿದ್ದು, ಉಗ್ರರರ ದಾಳಿಯ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ಪ್ರವಾಸ ಮೊಟಕುಗೋಳಿಸಿ, ತವರಿಗೆ ಮರಳಲು ನಿರ್ಧರಿಸಿದ್ದಾರೆ.

ಮಂಗಳವಾರ ಸಂಜೆಯಷ್ಟೇ ಶ್ರೀನಗರ ತಲುಪಿರುವ ಪ್ರವಾಸಿಗರು, ಹೋಟೆಲ್ ಪ್ರವೇಶಿಸುತ್ತಿದ್ದಂತೆ ಉಗ್ರರರ ದಾಳಿಯ ಮಾಹಿತಿ ದೊರೆತಿದೆ. ಹೀಗಾಗಿ, ಹೊರಬರದೆ ಹೋಟೆಲ್‌ನಲ್ಲಿಯೇ ತಂಗಿದ್ದಾರೆ.

ಕೊಪ್ಪಳ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಶಾ, ಕಾಂಗ್ರೆಸ್ ಮುಖಂಡರಾದ ಶರಣಪ್ಪ ಸಜ್ಜನ ಹಾಗೂ ಶಿವು ಪಾವಲಿ ಸೇರಿ ನಾಲ್ಕು ಕುಟುಂಬಗಳ 19 ಜನರು ಕೊಪ್ಪಳದಿಂದ ಮಂಗಳವಾರ ಬೆಳಗ್ಗೆ ತೆರಳಿದ್ದರು. ಆದರೆ, ಘಟನೆಯಿಂದ ತಮ್ಮ ಪ್ರವಾಸ ಮೊಟಕುಗೊಳಿಸಲು ನಿರ್ಧರಿಸಿದ್ದಾರೆ.

ಸಚಿವರ ಭೇಟಿ:

ಶಾಸಕ ರಾಘವೇಂದ್ರ ಹಿಟ್ನಾಳ ಅವರು ಸಚಿವ ಸಂತೋಷ ಲಾಡ್ ಅವರಿಗೆ ಕೊಪ್ಪಳ ಪ್ರವಾಸಿಗರ ಮಾಹಿತಿ ನೀಡಿ, ರಕ್ಷಿಸುವಂತೆ ಕೋರಿದ್ದರು. ಹೀಗಾಗಿ, ಸಚಿವ ಸಂತೋಷ ಲಾಡ್, ಪ್ರವಾಸಿಗರು ತಂಗಿದ್ದ ಹೋಟೆಲ್‌ಗೆ ತೆರಳಿ ಮಾತನಾಡಿದರು. ಯಾರೂ ಸಹ ಭಯಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ಸರ್ಕಾರವಿದೆ. ನಿಮ್ಮನ್ನು ಸುರಕ್ಷಿತವಾಗಿ ನಿಮ್ಮೂರಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ವಿಶೇಷ ವಿಮಾನದ ಮೂಲಕ ಕನ್ನಡಿಗರೆಲ್ಲರು ಬೆಂಗಳೂರಿಗೆ ತೆರಳೋಣ ಎಂದು ಅಭಯ ನೀಡಿದ್ದರಿಂದ ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ. ತಾವು ಸುರಕ್ಷಿತವಾಗಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಬಿಟ್ಟಿದ್ದಾರೆ. ಕಾಟನ್ ಪಾಶಾ ಮಾತನಾಡಿ, ನಾವು ಸುರಕ್ಷಿತವಾಗಿದ್ದೇವೆ, ಯಾರೂ ಸಹ ಆತಂಕಪಡಬೇಡಿ ಎಂದು ಮನವಿ ಮಾಡಿದ್ದಾರೆ.

ಕನ್ನಡಪ್ರಭದೊಂದಿಗೆ ಮಾತನಾಡಿದ ಶರಣಪ್ಪ ಸಜ್ಜನ್, ನಮಗೆ ಅಕ್ಷರಶಃ ಭಯವಾಗಿದೆ. ಇಲ್ಲಿಗೆ ಬರುವರೆಗೂ ನಮಗೆ ಮಾಹಿತಿ ಇರಲಿಲ್ಲ. ಹೋಟೆಲ್‌ ತಲುಪುತ್ತಿದ್ದಂತೆ ಮಾಹಿತಿ ತಿಳಿಯಿತು. ತಕ್ಷಣ ಅಲರ್ಟ್ ಆಗಿರುವಂತೆ ಹೇಳಿದರು. ಹೀಗಾಗಿ ನಾವು ಎಲ್ಲಿಯೂ ಸುತ್ತಾಡಲು ಹೋಗದೆ ಹೋಟೆಲ್‌ನಲ್ಲಿಯೇ ಇರಲು ನಿರ್ಧರಿಸಿದೆವು.

ಪರಿಸ್ಥಿತಿ ನೋಡಿಕೊಂಡು ಪ್ರವಾಸ ಮುಂದುವರೆಸುವ ಕುರಿತು ಚರ್ಚಿಸಿದೆವು. ಯಾರೂ ಸಹ ಇಲ್ಲಿರುವುದು ಬೇಡ, ಮೊದಲು ನಮ್ಮೂರಿಗೆ ಹೋಗೋಣ ಎಂದಿದ್ದರಿಂದ ವಾಪಸ್‌ ಬರುತ್ತೇವೆ. ಸಂತೋಷ ಲಾಡ್ ಅವರು ನಮಗೆ ಧೈರ್ಯ ತುಂಬಿದ್ದು, ವಿಶೇಷ ವಿಮಾನದ ಮೂಲಕ ಎಲ್ಲರೂ ಒಟ್ಟಿಗೆ ತೆರಳೋಣ ಎಂದಿದ್ದಾರೆ ಎಂದು ಶರಣಪ್ಪ ಮಾಹಿತಿ ನೀಡಿದ್ದಾರೆ.