ಸಾರಾಂಶ
ಕೊಪ್ಪಳ:
ಕೊಪ್ಪಳ ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ಅದನ್ನು ಉಳಿಸಿಕೊಳ್ಳುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಹಾಗೂ ಮುಖ್ಯಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಭರವಸೆ ವ್ಯಕ್ತಪಡಿಸಿದ್ದಾರೆ.ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಪತ್ರ ಬರೆದಿರುವ ಅವರು, ರಾಜ್ಯದ ಇತರೆ ವಿಶ್ವವಿದ್ಯಾಲಯಗಳ ಕುರಿತು ನಾನು ಮಾತನಾಡುವುದಿಲ್ಲ. ಆದರೆ, ಕೊಪ್ಪಳ ವಿವಿ ತೀರಾ ಅಗತ್ಯವಾಗಿದೆ. ಹಿಂದುಳಿದ ಪ್ರದೇಶವಾಗಿರುವ ಕೊಪ್ಪಳದಲ್ಲಿರುವ ವಿವಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಉಳಿಸಿಕೊಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಕೊಪ್ಪಳ ಜಿಲ್ಲೆಯಲ್ಲಿ ಉನ್ನತ ಶಿಕ್ಷಣದ ಕೊರತೆ ಇರುವುದರಿಂದ ಇದನ್ನು ಉಳಿಸಿಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಅವೈಜ್ಞಾನಿಕ ಆದೇಶ:ಪ್ರತಿ ಜಿಲ್ಲೆಗೆ ಒಂದು ವಿಶ್ವವಿದ್ಯಾಲಯ ಪ್ರಾರಂಭಿಸಬೇಕು ಎಂದು ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ವೇಳೆಯಲ್ಲಿ ಪ್ರಯತ್ನ ಮಾಡಿದ್ದೆ. ಆದರೆ, ಅದು ಕಾರ್ಯಗತವಾಗಿರಲಿಲ್ಲ. ಆದರೆ, ಅದಾದ ನಂತರ ಬಂದ ಬಿಜೆಪಿ ಸರ್ಕಾರ 10 ವಿಶ್ವವಿದ್ಯಾಲಯಗಳನ್ನು ಅವೈಜ್ಞಾನಿಕವಾಗಿ ಘೋಷಿಸಿತು. ಹೀಗಾಗಿಯೇ ಈಗ ಸಮಸ್ಯೆಯಾಗಿದೆ. ಆ ಆದೇಶದಲ್ಲಿ ಜಮೀನು ಖರೀದಿಸಬಾರದು, ಕಟ್ಟಡ ಕಟ್ಟಬಾರದು ಮತ್ತು ಯಾವುದೇ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ನೀಡಲು ಆಗುವುದಿಲ್ಲ ಎಂದು ಸೂಚಿಸಿ ಕೇವಲ ₹ 2 ಕೋಟಿ ಮಾತ್ರ ನೀಡುತ್ತೇವೆ ಎಂದು ತಿಳಿಸಲಾಗಿದೆ. ಕುಲಪತಿಗಳನ್ನು ಮಾತ್ರ ನೇಮಿಸಿ ಇತರೆ ಸಿಬ್ಬಂದಿ ನೇಮಕ ಮಾಡದೇ ಬೇರ್‍ಯಾವ ಹುದ್ದೆಗಳಿಗೆ ಮಂಜೂರಾತಿ ನೀಡಿಲ್ಲ ಎಂದು ದೂರಿದ್ದಾರೆ.
ಈಗಾಗಲೇ ಕಳೆದ ನಾಲ್ಕೈದು ವರ್ಷದಿಂದ ಹಿಂದಿನ ಸರ್ಕಾರ ಮಾಡಿರುವ ತಪ್ಪಿನಿಂದ ಮೂಲಭೂತ ಸೌಕರ್ಯ ಹಾಗೂ ಬೇಕಾದ ಸಿಬ್ಬಂದಿ ಇಲ್ಲದೇ ವಿವಿಗಳು ಅಸ್ತಿತ್ವದಲ್ಲಿವೆ. ಬೀದರ್ ವಿವಿ ಒಂದನ್ನು ಬಿಟ್ಟು ಉಳಿದ 7 ವಿವಿ ಮುಚ್ಚಬೇಕೆಂದು ಸರ್ಕಾರ ತಾತ್ವಿಕ ನಿಲುವು ತೆಗೆದುಕೊಂಡಿದೆ. ಹಣಕಾಸಿನ ಮತ್ತು ವಿಶ್ವವಿದ್ಯಾಲಯದ ಶೈಕ್ಷಣಿಕ ಮಟ್ಟದ ವಿಚಾರದಿಂದ ಇದು ಒಳ್ಳೆಯ ನಿರ್ಧಾರವಾಗಿರಬಹುದು. ಆದರೆ, ಕೊಪ್ಪಳ ಜಿಲ್ಲೆಯು ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಸಾಕ್ಷರತಾ ಪ್ರಮಾಣ ಕಡಿಮೆ ಇದ್ದು ರಾಜ್ಯದ ಸರಾಸರಿಯಂತೆ ಅತಿ ಕಡಿಮೆ ಪದವೀಧರರನ್ನು ಹೊಂದಿದೆ. ಹೀಗಾಗಿ ಕೊಪ್ಪಳ ವಿವಿ ಮುಂದುವರಿಸುವುದು ಸೂಕ್ತವಾಗಿದೆ. ಈ ಹಿನ್ನಲೆಯಲ್ಲಿ ಇದೊಂದು ವಿಶೇಷ ಪ್ರಕರಣವೆಂದು ಪರಗಣಿಸಿ ವಿವಿ ಮುಂದುವರಿಸಿ ಮುಂದಿನ ವರ್ಷದಲ್ಲಿ ಮೂಲಭೂತ ಸೌಕರ್ಯ ನೀಡಬೇಕೆಂದು ಪತ್ರ ಬರೆದಿದ್ದಾರೆ.