ಸಾರಾಂಶ
ರಸ್ತೆಗಳು ಹದಗೆಟ್ಟಿವೆ, ಜೋಪಾನ
ಹದಗೆಟ್ಟ ರಸ್ತೆ ಬಂದಿತಾ, ಕೊಪ್ಪಳ ಬಂದಿತು ಎಂದರ್ಥಹದಗೆಟ್ಟ ರಸ್ತೆಗಳಿಂದ ನಗರಕ್ಕೆ ಸ್ವಾಗತ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಹೆದ್ದಾರಿಯಲ್ಲಿ ಸ್ಪೀಡ್ ಆಗಿ ಬಂದಾಗ ಏಕಾಏಕಿ ರಸ್ತೆಯಲ್ಲಿ ಗುಂಡಿಗಳ ದರ್ಶನವಾಗಿ, ವಾಹನ ನಿಮ್ಮ ಮಾತು ಕೇಳದೇ ಎರ್ರಾಬಿರ್ರಿಯಾಗಿ ಓಡಾಡಲು ಪ್ರಾರಂಭವಾಯಿತು. ಕ್ಲಚ್, ಬ್ರೇಕ್‌ಗಳ ಬಳಕೆ ಹೆಚ್ಚಾಗಿ ವಾಹನ ತೂಗಾ(ರಾ)ಡಲು ಆರಂಭವಾಯಿತೆಂದರೆ ಸಂದೇಹವೇ ಬೇಡ, ನೀವು ಕೊಪ್ಪಳ ನಗರದಲ್ಲಿದ್ದೀರಿ ಎಂದೇ ಅರ್ಥ.ಹೌದು, ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹದಗೆಟ್ಟ ರಸ್ತೆಗಳು ಸ್ವಾಗತಿಸುತ್ತಿವೆ. ಕೊಪ್ಪಳ ಪ್ರವೇಶ ಮಾಡುವ ಅಷ್ಟೂ ರಸ್ತೆಗಳು ಹದಗೆಟ್ಟು ಹಳ್ಳಹಿಡಿದಿವೆ. ಆದರೂ ಇವುಗಳನ್ನು ದುರಸ್ತಿ ಮಾಡಲು ಯಾರೂ ತಯಾರಿಲ್ಲ.
ನಗರಕ್ಕೆ ಹೊಂದಿಕೊಂಡು ಇರುವ ಹೆದ್ದಾರಿ ಅತ್ಯುತ್ತಮ ಗುಣಮಟ್ಟದ ರಸ್ತೆಗಳು ಇದ್ದು, ಕೊಪ್ಪಳ ಪ್ರವೇಶ ಮಾಡುವ ರಸ್ತೆಗಳು ಮಾತ್ರ ಗುಂಡಿಗಳಿಂದ ತುಂಬಿಕೊಂಡಿವೆ. ಅಲ್ಲಿ ಸಂಚಾರ ಮಾಡುವುದೇ ದುಸ್ತರ ಎನ್ನುವಂತೆ ಆಗಿದೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಾ ಸಾಗಿ ಬಂದು, ರಸ್ತೆಯ ಗುಣಗಾನ ಮಾಡುವಂತೆ ಇರುತ್ತದೆ. ಆದರೆ, ಕೊಪ್ಪಳ ಸಮೀಪಿಸುತ್ತಿದ್ದಂತೆ ಬೈಪಾಸ್ ರಸ್ತೆಯಲ್ಲಿ ಹೆದ್ದಾರಿ ಸಾಗುತ್ತದೆ. ಅಲ್ಲಿಂದ ನಗರ ಪ್ರವೇಶ ಮಾಡುವ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ.
ಹೆದ್ದಾರಿ ಇಲಾಖೆ ನಿರ್ಲಕ್ಷ್ಯ:ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ನಿರ್ಮಾಣ ಮಾಡುವ ವೇಳೆಯಲ್ಲಿ ನಗರದ ಹೊರವಲಯಕ್ಕೆ ಅದನ್ನು ನಿಲ್ಲಿಸಲಾಗಿದೆ. ನಗರದೊಳಗೆ ಪ್ರವೇಶ ಮಾಡುವುದಕ್ಕೆ ಇರುವ ರಸ್ತೆಗೆ ಸಂಪರ್ಕವನ್ನೇ ಕಲ್ಪಿಸಿಲ್ಲ. ಹೀಗಾಗಿ, ಇದು ಲೋಕೋಪಯಾಗಿ ರಸ್ತೆಯಾಗಿಯೇ ಉಳಿದಿದೆ. ಇದಕ್ಕೆ ನಡೆದ ಪ್ರಯತ್ನ ಕೈಗೂಡದೆ ಇರುವುದರಿಂದ ಇಂದಿಗೂ ಅದು ಹದಗೆಟ್ಟ ಸ್ಥಿತಿಯಲ್ಲಿಯೇ ಇದೆ.ಹೆದ್ದಾರಿಯಿಂದ ಕೊಪ್ಪಳ ಪ್ರವೇಶ ಮಾಡುವ ರಸ್ತೆಯ ದುಸ್ಥಿತಿಯಿಂದಾಗಿ ಅನೇಕ ಅಪಘಾತಗಳು ಆಗುತ್ತಲೇ ಇವೆ.ನಮ್ಮದಲ್ಲ ರಸ್ತೆ:
ಈಗ ಎಲ್ಲರೂ ಈ ರಸ್ತೆ ನಮ್ಮದಲ್ಲ ಎನ್ನುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯವರು, ಲೋಕೋಪಯೋಗಿ ಇಲಾಖೆಯವರು ಈ ರಸ್ತೆ ನಮ್ಮದಲ್ಲ ಎನ್ನುತ್ತಿದ್ದಾರೆ. ಹೀಗಾಗಿ, ಈ ರಸ್ತೆ ಅನಾಥವಾಗಿದ್ದು, ದುರಸ್ತಿ ಮಾಡಿಸುವವರು ಯಾರೂ ಇಲ್ಲದಂತೆ ಆಗಿದೆ. ನಗರಕ್ಕೆ ಹೊಂದಿಕೊಂಡು ಇದ್ದರೂ ಈ ರಸ್ತೆ ಯಾವ ಇಲಾಖೆಗೆ ಬರುತ್ತದೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ಹೀಗಾಗಿ, ರಸ್ತೆ ದುರಸ್ತಿ ಮರೀಚಿಕೆಯಾಗಿದೆ. ಕೊಪ್ಪಳ ಪ್ರವೇಶ ಮಾಡುವ ವೇಳೆಯಲ್ಲಿ ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ಕುಣಿದಾಡುತ್ತಾ ವಾಹನಗಳು ಬರುವಂತೆ ಆಗಿದೆ. ಅದರಲ್ಲೂ ಮಳೆಗಾಲದಿಂದ ರಸ್ತೆ ಇನ್ನಷ್ಟು ಹದಗೆಟ್ಟು ಹೋಗಿದ್ದು, ಸಂಚಾರ ಮಾಡುವವರು ಸರ್ಕಸ್ ಮಾಡಬೇಕಾಗಿದೆ.
ಪದೇ ಪದೇ ಅಪಘಾತಗಳು ಆಗಲಾರಂಭಿಸಿವೆ. ಕಳೆದ ವಾರದಲ್ಲಿಯೇ ನಾಲ್ಕು ಅಪಘಾತ ಸಂಭವಿಸಿದೆ. ಅದರಲ್ಲೂ ಬೈಕ್ ಸವಾರರು ಯಾತನೆ ಅನುಭವಿಸುವಂತೆ ಆಗಿದೆ. ಗುಂಡಿಬಿದ್ದ ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಲು ವಾಹನಗಳು ಅಡ್ಡಾದಿಡ್ಡಿ ಸಂಚಾರ ಮಾಡುತ್ತವೆ. ಹೀಗಾಗಿಯೇ ಅಪಘಾತಗಳು ನಡೆಯುತ್ತವೆ. ಅದರಲ್ಲೂ ಕೊಪ್ಪಳಕ್ಕೆ ಮೊದಲ ಬಾರಿಗೆ ಬರುವವರು ಈ ಹದಗೆಟ್ಟ ರಸ್ತೆಯ ಮಾಹಿತಿ ಇಲ್ಲದೇ ಹಾಗೆ ಬರುತ್ತಿದ್ದಂತೆ ಗುಂಡಿಗಳನ್ನು ನೋಡಿ ಗಾಬರಿಯಾಗುತ್ತಾರೆ.ರಸ್ತೆ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಅದನ್ನು ಅಗಲೀಕರಣ ಮಾಡಿ, ನಿರ್ಮಾಣ ಮಾಡಬೇಕಾಗಿದೆ. ಹೀಗಾಗಿ, ಸ್ವಾಧೀನ ಪ್ರಕ್ರಿಯೇ ಆಗಬೇಕಾಗಿರುವುದರಿಂದ ವಿಳಂಬವಾಗಿದೆ. ತಾತ್ಕಾಲಿಕ ದುರಸ್ತಿಗೆ ಹೇಳಿದ್ದು, ಮಾಡುತ್ತಾರೆ ಎನ್ನುತ್ತಾರೆ ಶಾಸಕ ರಾಘವೇಂದ್ರ ಹಿಟ್ನಾಳ.
ಕೊಪ್ಪಳ ಪ್ರವೇಶ ಮಾಡುವ ರಸ್ತೆ ಎರಡು ಬದಿಯಲ್ಲಿ ಹದಗೆಟ್ಟು ಹೋಗಿದ್ದು, ಅನೇಕ ಅಪಘಾತ ಆಗುತ್ತಿವೆ. ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆಯವರು ರಸ್ತೆ ನಮ್ಮದಲ್ಲ ಎನ್ನುತ್ತಾರೆ. ಹಾಗಾದರೇ ಯಾರು ದುರಸ್ತಿ ಮಾಡಬೇಕು.? ಸಂಬಂಧಪಟ್ಟವರು ಶೀಘ್ರ ಗಮನ ಹರಿಸಬೇಕಾಗಿದೆ ಜಿಲ್ಲಾಧ್ಯಕ್ಷ ಜೆಡಿಎಸ್ ಸುರೇಶ ಭೂಮರಡ್ಡಿ ಹೇಳಿದ್ದಾರೆ.