ಸಾರಾಂಶ
ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ಧೇಶ್ವರ ಸ್ವಾಮೀಯ 207ನೇ ಮಹಾರಥೋತ್ಸವ ಜ.27ರಂದು ಸಂಜೆ 5.30ಕ್ಕೆ ಜರುಗಲಿದೆ. ಇಡೀ ಕೊಪ್ಪಳದಲ್ಲಿ ಸಡಗರ ಮನೆ ಮಾಡಿದ್ದು, ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಾತ್ರೆಯಲ್ಲಿ ಹತ್ತಾರು ಲಕ್ಷ ಜನ ಭಾಗವಹಿಸಲಿದ್ದು, ಮಹಾರಥೋತ್ಸವಕ್ಕೆ ಮೈಸೂರಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಬೀದಿ- ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಕಂಗೊಳಿಸುತ್ತಿದೆ. ಮನೆಗಳ ಮುಂದೆ ರಂಗೋಲಿಯ ಚಿತ್ತಾರ, ತಳಿರು-ತೋರಣಗಳ ಸಿಂಗಾರ ಹಬ್ಬದ ಕಳೆಗಟ್ಟಿಸಿದೆ. ಶ್ರೀ ಮಠವೂ ಝಗಮಗಿಸುತ್ತಿದ್ದು, ಜಾತ್ರಾ ಮಹೋತ್ಸವ ನಿಮಿತ್ತ ನಡೆಯುವ ಸಂಗೀತ, ಸಾಂಸ್ಕೃತಿಕ, ಸಾಹಸ ಪ್ರದರ್ಶನ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಕ್ಕೆ ನೈಸರ್ಗಿಕವಾಗಿಯೇ ಗುಡ್ಡದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.ಜಾತ್ರಾ ಮಹೋತ್ಸವದಲ್ಲಿ ಈ ವರ್ಷ ವಾರ ಮೊದಲೇ ಮಹಾದಾಸೋಹ ಆರಂಭಿಸಲಾಗಿದೆ. ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾ ದಾಸೋಹ ಹಲವು ವೈಶಿಷ್ಟ್ಯಗಳಿಗೆ ಕಾರಣವಾಗುತ್ತ, ಹಲವಾರು ಪ್ರಥಮಗಳನ್ನು ದಾಖಲಿಸುತ್ತಾ ಬಂದಿದೆ. ಪ್ರತಿ ವರ್ಷ 15 ದಿನಗಳ ಕಾಲ ಇರುತ್ತಿತ್ತು. ಈ ವರ್ಷ 21 ದಿನಗಳ ಕಾಲ ನಡೆಯಲಿದೆ. ಮಹಾದಾಸೋಹದಲ್ಲಿ ಮೊದಲ ದಿನ ರೊಟ್ಟಿ, ಮಾದಲಿ, ಅನ್ನ ಸಾಂಬರ್, ಫಲ್ಯ, ಕೆಂಪುಚಟ್ನಿ, ಪುಡಿಚಟ್ನಿ ಇರಲಿದೆ.5 ಲಕ್ಷ ಮಿರ್ಚಿ ಬಜ್ಜಿಯನ್ನು ಭಕ್ತರಿಗೆ ದಾಸೋಹದಲ್ಲಿ ನೀಡುವುದು, 8 ಲಕ್ಷ ಶೇಂಗಾ ಹೋಳಿಗೆ ಬಡಿಸುವುದರ ಜೊತೆ ಜಾತ್ರೆಯ ದಾಸೋಹಕ್ಕೆ ಭಕ್ತರೇ 16-18 ಲಕ್ಷ ರೊಟ್ಟಿಗಳನ್ನು ಸ್ವಯಂಪ್ರೇರಣೆಯಿಂದ ತಂದು ಕೊಡುತ್ತಿದ್ದು, ಇದು ಸಹ ದಾಖಲೆಯಾಗಿದೆ. ರಥೋತ್ಸವ ಪ್ರಾರಂಭವಾಗುವ ಮುನ್ನವೇ ಈ ವರ್ಷ 13-14 ಲಕ್ಷ ಕ್ಕೂ ಅಧಿಕ ರೊಟ್ಟಿಗಳು ಆಗಮಿಸಿದ್ದು, ಇನ್ನೂ ಬರುತ್ತಲೇ ಇವೆ. ಈ ವರ್ಷ ಜಾತ್ರೆಯಲ್ಲಿ 16-18 ಲಕ್ಷ ರೊಟ್ಟಿಗಳು ಬರುವ ನಿರೀಕ್ಷೆ ಇದೆ. ಸಿಂಧನೂರು ನಗರದ ಗೆಳೆಯರ ಬಳಗದ ವತಿಯಿಂದ ಶುಕ್ರವಾರ 8 ಲಕ್ಷ ಶೇಂಗಾ ಹೋಳಿಗೆಯನ್ನು ರವಾನಿಸಲಾಗಿದೆ.