ಮಹಾಮಳೆಗೆ ಭಾಗಶಃ ಮುಳುಗಿದ ಕೊಪ್ಪಳ

| Published : Jun 13 2024, 12:48 AM IST

ಸಾರಾಂಶ

ಸಿದ್ಧೇಶ್ವರ ಕಾಲನಿ, ಗಣೇಶ ನಗರ, ಪದಕಿ ಲೇ ಔಟ್, ರಾಯರ ಮಠ, ರೈಲ್ವೆ ನಿಲ್ದಾಣ ಪ್ರದೇಶ ಹೀಗೆ ಕೊಪ್ಪಳದ ಬಹುತೇಕ ಭಾಗ ಅಕ್ಷರಶಃ ಮುಳುಗಿದೆ.

ಬಹುತೇಕ ಪ್ರದೇಶಗಳಲ್ಲಿ ಮನೆಗೆ ನುಗ್ಗಿದ ನೀರು

ಅಕ್ಷರಶಃ ಮುಳುಗಿದ ಗಣೇಶನಗರ

ಕೆರೆಯಂತಾದ ಹಮಾಲರ ಕಾಲನಿ, ರಾಯರಮಠ

ನಾಲ್ಕಾರು ಗಂಟೆ ಎಡೆಬಿಡದೆ ಸುರಿದ ಮಳೆಕನ್ನಡಪ್ರಭ ವಾರ್ತೆ ಕೊಪ್ಪಳ

ಸಿದ್ಧೇಶ್ವರ ಕಾಲನಿ, ಗಣೇಶ ನಗರ, ಪದಕಿ ಲೇ ಔಟ್, ರಾಯರ ಮಠ, ರೈಲ್ವೆ ನಿಲ್ದಾಣ ಪ್ರದೇಶ ಹೀಗೆ ಕೊಪ್ಪಳದ ಬಹುತೇಕ ಭಾಗ ಅಕ್ಷರಶಃ ಮುಳುಗಿದೆ. ರಸ್ತೆಗಳು ನದಿಯಂತೆ ಹರಿಯುತ್ತಿದ್ದು, ಚರಂಡಿಗಳು ತುಂಬಿ ಮನೆಗಳಿಗೆ ನೀರು ನುಗ್ಗಿದೆ. ಅಷ್ಟೇ ಯಾಕೆ, ನಗರದ ರಾಜಕಾಲುವೆ ಮತ್ತು ಭಾಗ್ಯನಗರ ರಾಜಕಾಲುವೆ ಪ್ರವಾಹದಿಂದಾಗಿ ಉಕ್ಕಿ ಹರಿದಿವೆ.

ಹೌದು, ಬುಧವಾರ ಮಧ್ಯಾಹ್ನ 12.30ಕ್ಕೆ ಪ್ರಾರಂಭವಾದ ಮಳೆ ರಾತ್ರಿಯಾದರೂ ಸುರಿಯುತ್ತಲೇ ಇತ್ತು. ಅದರಲ್ಲೂ ಸಂಜೆ ವೇಳೆ ಅಬ್ಬರಿಸಿದ ಮಳೆ ಧೋ ಎಂದು ನೀರೇ ಸುರಿಯುವಂತೆ ಮಾಡಿತು. ಪರಿಣಾಮ ಕೊಪ್ಪಳದ ಬಹುತೇಕ ಭಾಗ ಮುಳುಗಿ ನೀರಿನಲ್ಲಿ ನಿಲ್ಲುವಂತಾಯಿತು.

ನಗರದ ಗಣೇಶ ತಗ್ಗು ಎಂದೇ ಕರೆಯುವ ಗಣೇಶನಗರ ಸಂಪೂರ್ಣ ಮುಳುಗಿತ್ತು. ಬಹುತೇಕ ಮನೆಯಲ್ಲಿ ನೀರು ನುಗ್ಗಿದ್ದರೇ ಸುತ್ತಲು ನೀರು ನಿಂತು ನಡುಗಡ್ಡೆಯಂತಾಗಿತ್ತು. ಗಣೇಶ ನಗರಕ್ಕೆ ಬರುವುದಕ್ಕೆ ಎಲ್ಲಿಯೂ ದಾರಿ ಇಲ್ಲದಂತೆ ನೀರುಕಟ್ಟಿಕೊಂಡಿತು. ಹೀಗಾಗಿ, ರಾತ್ರಿಯಾದರೂ ಮಕ್ಕಳು ಮನೆಗೆ ಬಾರದಂತೆ ಆದಾಗ ಪಾಲಕರೇ ಹೇಗೋ ಕಷ್ಟಪಟ್ಟು ಹೋಗಿ ಮಕ್ಕಳನ್ನು ಮನೆಗೆ ಕರೆತಂದರು.

ಗಣೇಶ ನಗರದಲ್ಲಿ ರಾಜಕಾಲುವೆಗೆ ವೆಂಕೇಶ್ವರ ದೇವಸ್ಥಾನದ ಬಳಿ ಅಡ್ಡಲಾಗಿ ಮನೆ ನಿರ್ಮಾಣ ಮಾಡಿದ್ದರಿಂದ ಸರಾಗವಾಗಿ ಹರಿದುಹೋಗಬೇಕಾದ ನೀರು ಗಣೇಶ ನಗರಕ್ಕೆ ನುಗ್ಗಿತು. ಅಷ್ಟೇ ಅಲ್ಲ, ದಾರಿಯಲ್ಲಿದ್ದರಿಂದಾಗಿ ರಾಜಕಾಲುವೆ ಉಕ್ಕಿ ಮಲ್ಲಮ್ಮದೇವಸ್ಥಾನದ ಸುತ್ತಲು ನೀರು ತುಂಬಿಕೊಂಡಿತು.

ಕಿನ್ನಾಳ ರಸ್ತೆಯಲ್ಲಿ ನದಿಯಂತೆ ನೀರು ಹರಿಯಲಾರಂಭಿಸಿದ್ದರಿಂದ ಪ್ರಗತಿ ಕಾಲನಿ ಬಳಿ ಸಂಚಾರವೇ ಬಂದಾಗಿದ್ದರಿಂದ ಮನೆಗೆ ಹೋಗಬೇಕಾದವರು ರಸ್ತೆಯಲ್ಲಿಯೇ ಕಾಲಕಳೆಯುವಂತೆ ಆಯಿತು.

ಗಣೇಶ ನಗರದ ಓಜನಳ್ಳಿ ರಸ್ತೆಯಲ್ಲಿಯೂ ನೀರು ಹರಿಯಲಾರಂಭಿಸಿದ್ದರಿಂದ ಸಂಚಾರ ಬಂದಾಯಿತು. ಹೀಗಾಗಿ, ರಸ್ತೆಯಲ್ಲಿಯೇ ಅನೇಕರು ಸಿಕ್ಕಿಹಾಕಿಕೊಂಡರು.

ಭಾಗ್ಯನಗರ ಬಳಿ ಇರುವ ಸಿದ್ಧೇಶ್ವರ ಕಾಲನಿ, ಗವಿಮಠ ಬಳಿ ಇರುವ ಹಮಾಲರ ಕಾಲನಿ ಅಕ್ಷರಶಃ ಮುಳುಗಿದ್ದವು. ಮನೆಯಲ್ಲಿ ನೀರು ನುಗ್ಗಿದ್ದರಿಂದ ಜನರು ಬೆಚ್ಚಿಬಿದ್ದು, ಮಳೆಯಲ್ಲಿಯೇ ಆಚೆ ಬರುವಂತೆ ಆಯಿತು.

ರಾತ್ರಿ 8 ಗಂಟೆಯಾದರೂ ಮಳೆ ತಗ್ಗದೇ ಇರುವುದರಿಂದ ಮತ್ತಷ್ಟು ಅವಾಂತರ ಆಗಲಾರಂಭಿಸಿತು. ಕಾತರಕಿ ಮಾರ್ಗವಾಗಿ ಗವಿಮಠಕ್ಕೆ ಬರುವ ರಸ್ತೆಯಲ್ಲಿಯೇ ನೀರು ಹಳ್ಳದಂತೆ ಹರಿಯಲಾರಂಭಿಸಿದ್ದರಿಂದ ವಾಹನಗಳ ಸಂಚಾರ ಸ್ಥಗಿತವಾಯಿತು.

ಜೆಪಿ ಮಾರುಕಟ್ಟೆಯಲ್ಲಿ ಸಂಪೂರ್ಣ ನೀರು ನುಗ್ಗಿದ್ದರಿಂದ ತರಕಾರಿಯ ಅಂಗಡಿಗಳೆಲ್ಲ ನೀರುಮಯವಾದವು. ಹೀಗಾಗಿ, ಲಕ್ಷಾಂತರ ರುಪಾಯಿ ತರಕಾರಿ ಕೆಟ್ಟು ಹೋಯಿತು. ಜವಾಹರ ರಸ್ತೆಯಲ್ಲಿಯೂ ಸಹ ಹಳ್ಳದಂತೆ ನೀರು ಹರಿಯಿತು.ರಾಘವೇಂದ್ರಮಠದ ಪ್ರದೇಶ ಮೊದಲ ಬಾರಿಗೆ ಮುಳುಗಿದಂತೆ ಆಯಿತು. ರಾಯರಮಠದ ಸುತ್ತಲು ಇರುವ ರಸ್ತೆಗಳಲ್ಲ ಕೆರೆಯಂತಾಗಿ ಮನೆಗಳಿಗೆ ನೀರು ನುಗ್ಗಿವೆ. ಜನರು ಪರಿತಪಿಸಿದರು.ಮುಳುಗಿದ ರೈಲ್ವೆ ಸ್ಟೇಷನ್:

ಕೊಪ್ಪಳ ರೈಲ್ವೆ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ಹೀಗಾಗಿ, ತಾತ್ಕಾಲಿಕವಾಗಿ ರೈಲ್ವೆ ಕೌಂಟರ್‌ಗಳನ್ನು ರೈಲ್ವೆ ನಿಲ್ದಾಣದ ಬಳಿಯೇ ಮಾಡಲಾಗಿದೆ. ಈ ಕೌಂಟರ್‌ಗಳು ಸಂಪೂರ್ಣ ಮುಳುಗಿ ಹೋಗಿವೆ. ನಡುಮಟ್ಟದವರೆಗೂ ನೀರು ಬಂದಿದ್ದರಿಂದ ಟಿಕೆಟ್ ಕೊಡುವುದನ್ನು ಸ್ಥಳಾಂತರ ಮಾಡಲಾಗಿದೆ.

ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ಎದೆಮಟ್ಟದವರೆಗೂ ನೀರು ಇರುವುದರಿಂದ ಪ್ರಯಾಣಿಕರು ಹೋಗುವಂತೆಯೂ ಇಲ್ಲ, ಬರುವಂತೆಯೂ ಇಲ್ಲ ಎನ್ನುವಂತೆ ಆಗಿತ್ತು. ನಡುಮಟ್ಟದ ನೀರಿನಲ್ಲಿಯೇ ಸಿಬ್ಬಂದಿಯೋರ್ವ ತಳ್ಳುಗಡಿಯಲ್ಲಿ ತಳ್ಳಿಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗಿದೆ.ಮುಳುಗಿದ ಸೇತುವೆ:

ಕಿನ್ನಾಳ ರಸ್ತೆಯ ಕೆಳಸೇತುವೆ ಮುಳುಗಿದೆ. ಹೀಗಾಗಿ, ಇಲ್ಲಿ ಸಂಚಾರ ಬಂದ್‌ ಆಗಿದೆ. ಸೇತುವೆಯ ಕೆಳಭಾಗದಲ್ಲಿ ಆಳೆತ್ತರ ನೀರು ನಿಂತಿರುವುದರಿಂದ ಕಾರುಗಳು ಸಹ ಮುಳುಗಿದ್ದವು. ಹೀಗಾಗಿ, ಭಾಗ್ಯನಗರ ಮೇಲ್ಸುತುವೆ ಮೇಲೆ ವಾಹನಗಳು ಸಂಚರಿಸಿದವು.ನ್ಯಾಪ್ ಕಿನ್ ಘಟಕಕ್ಕೆ ನುಗ್ಗಿದ ನೀರು:

ಗವಿಶ್ರೀ ನಗರದಲ್ಲಿರುವ ನ್ಯಾಪ್ ಕಿನ್ ಘಟಕಕ್ಕೆ ನೀರು ನುಗ್ಗಿದ್ದು, ಲಕ್ಷಾಂತರ ರುಪಾಯಿ ಹಾನಿಯಾಗಿದೆ. ಹೀಗೆ, ಮನೆ-ಅಂಗಡಿಗಳಲ್ಲಿ ನೀರು ನುಗ್ಗಿದ್ದರಿಂದ ಲಕ್ಷಾಂತರ ರುಪಾಯಿ ಬಹುತೇಕ ಕಡೆ ಹಾನಿಯಾಗಿದೆ.

ನಗರದಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾದ ಮಳೆ ಆಗಾಗ ಬಿಡುವ ಕೊಡುತ್ತಲೇ ರಾತ್ರಿಯಾದರೂ ಸುರಿಯುತ್ತಲೇ ಇತ್ತು. ಸುಮಾರು 6 ಗಂಟೆಗೂ ಅಧಿಕ ಕಾಲ ಮಳೆಯಾಗಿದೆ.ಮಳೆ ಆರ್ಭಟ, ತುಂಬಿ ಹರಿದ ಹಳ್ಳಗಳು:

ಕುಕನೂರು ತಾಲೂಕಿನಾದ್ಯಂತ ವರುಣ ಬಿಡುವು ನೀಡದೆ ರಭಸದಿಂದ ಸುರಿದಿದ್ದಾನೆ.

ಬುಧವಾರ ಬೆಳಗ್ಗೆ ೧೧ ಗಂಟೆಯಿಂದ ಆರಂಭವಾದ ಮಳೆ ರಾತ್ರಿವರೆಗೆ ಸುರಿದಿದೆ. ಸೋಮವಾರದಿಂದ ತಾಲೂಕಿನಾದ್ಯಂತ ಉತ್ತಮ ಮಳೆ ಆಗುತ್ತಿದ್ದು, ಹಳ್ಳಗಳು ತುಂಬಿ ಹರಿಯುತ್ತಿವೆ. ಜಮೀನುಗಳಲ್ಲಿ ಬದುಗಳು ಒಡೆದಿವೆ. ಜಮೀನಿನ ಮಣ್ಣು ಕೊಚ್ಚಿ ಹೋಗಿದೆ. ರಭಸದಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು, ಧಾರಾಕಾರ ಮಳೆಗೆ ಜನ ಹೈರಾಣಾಗಿದ್ದಾರೆ.

ತುಂಬಿದ ಕೆರೆಗಳು:ತಾಲೂಕಿನಾದ್ಯಂತ ಮಳೆಗೆ ಕೆರೆಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಬೇಸಿಗೆ ದಿನಗಳಲ್ಲಿ ಬರಿದಾಗಿದ್ದ ಕೆರೆಗಳ ಒಡಲುಗಳು ನೀರಿನಿಂದ ಆವೃತ್ತವಾಗಿವೆ. ಹಳ್ಳಗಳು ಸಹ ತುಂಬಿ ಹರಿಯುತ್ತಿದ್ದು, ತಾಲೂಕಿನ ಅರಕೇರಿ ಡ್ಯಾಂಗೆ ನೀರು ಹರಿದು ಹೋಗುತ್ತಿದೆ.

ಎಳೆ ಬೆಳೆ ಕೊಳೆವ ಭಯ:

ಇನ್ನೂ ಉತ್ತಮ ಮಳೆಯಿಂದ ರೈತರು ಈಗಾಗಲೇ ತಾಲೂಕಿನಾದ್ಯಂತ ಹೆಸರು ಬೆಳೆ ಬಿತ್ತನೆ ಮಾಡಿದ್ದಾರೆ. ಈಗಿನ್ನೂ ಮೊಳೆಕೆ ಒಡೆದು ನೆಲ ಭರ್ತಿ ಬಂದಿರುವ ಎಳೆ ಬೆಳೆ ಈ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಗೆ ಎಲ್ಲಿ ಕೊಳೆತು ಹೋಗುತ್ತದೆಯೋ, ಹಳದಿ ಆಗುತ್ತದೆಯೋ ಎಂಬ ಭಯ ರೈತ ವರ್ಗದಲ್ಲಿ ಮೂಡಿಸಿದೆ.

ಸೋಮವಾರದಿಂದ ಮಳೆ ಬಿಡುವಿಲ್ಲದೆ ಸುರಿಯುತ್ತಿದ್ದು, ಮಂಗಳವಾರ, ಬುಧವಾರ ಎರಡೂ ದಿನ ಒಂದು ತಾಸೋತ್ತು ಬಿಡುವಿಲ್ಲದೆ ಮಳೆ ಸುರಿದಿದೆ. ಹೀಗೆ ಮಳೆ ತನ್ನ ಆರ್ಭಟ ಮುಂದುವರೆಸಿದರೆ ಜನರಿಗೆ ಮಳೆಯಿಂದ ಹೊರಗಡೆ ಹೋಗದಷ್ಟು ತೊಂದರೆ ಆಗುತ್ತದೆ.