ಸಾರಾಂಶ
ಕೊಪ್ಪಳ:
ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿರುವುದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಫೆ. 24ರಂದು ಕರೆ ನೀಡಿರುವ ಬಂದ್ ಶಾಂತಿಯುವ ಮತ್ತು ಗಾಂಧಿ ತತ್ವದಡಿ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು.ಭಾನುವಾರ ಸಂಜೆ ಶಿವಶಾಂತ ಮಂಗಲಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ನೂರಾರು ಸಂಘಟನೆಗಳ ಪ್ರತಿನಿಧಿಗಳು, ಶಾಸಕರು, ಸಂಸದರು, ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡೆರಲ್ಲರೂ ಮಾತನಾಡಿ, ಸಂಪೂರ್ಣ ಬಂದ್ ಮಾಡುವ ಜತೆಗೆ ಶಾಂತಿಯುತವಾಗಿ ಮಾಡಬೇಕೆಂದು ಹೇಳಿದರು. ಗವಿಸಿದ್ಧೇಶ್ವರ ಶ್ರೀಗಳೇ ನೇತೃತ್ವ ವಹಿಸುತ್ತಿರುವುದರಿಂದ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗಿದ್ದು ಸ್ವಯಂ ಪ್ರೇರಿತವಾಗಿ ಬಂದ್‌ನಲ್ಲಿ ಭಾಗವಹಿಸೋಣ ಎಂದರು.
ಗ್ರಾಮೀಣ ಪ್ರದೇಶದಿಂದಲೂ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇದೆ. ಕೊಪ್ಪಳ ಮತ್ತು ಭಾಗ್ಯನಗರದ ಎಲ್ಲ ವಾರ್ಡ್‌ಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದು ಖಾಸಗಿ ಶಿಕ್ಷಣ ಸಂಸ್ಥೆ, ವಿವಿಧ ಸಂಘ ಸಂಸ್ಥೆಗಳು, ವೈದ್ಯರು, ಸವಿತಾ ಸಮಾಜ, ಸಹಕಾರಿ ಬ್ಯಾಂಕ್ ಪದಾಧಿಕಾರಿಗಳು ಸೇರಿದಂತೆ ಅನೇಕರು ಬೆಂಬಲ ನೀಡಿದ್ದಾರೆ ಮತ್ತು ಸ್ವಯಂ ಪ್ರೇರಿತವಾಗಿ ಭಾಗವಹಿಸಲಿದ್ದಾರೆ ಎಂದರು.ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಮುಖಂಡರಾದ ಸಿ.ವಿ. ಚಂದ್ರಶೇಖರ, ಡಾ. ಬಸವರಾಜ ಕ್ಯಾವಟರ, ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್. ಪೂಜಾರ, ಎ.ವಿ. ಕಣವಿ, ನಗರಸಭೆ ಅಧ್ಯಕ್ಷ ಅಮ್ಜಾದ್ ಪಟೇಲ್, ರುದ್ರಮುನಿ ಗಾಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ನಾನು ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಮನವಿಗೆ ಸ್ಪಂದಿಸಿ ಕೊಪ್ಪಳ ಬಳಿ ಕಾರ್ಖಾನೆಗೆ ಸ್ಥಾಪಿಸಲು ಅವಕಾಶ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸ್ವತಃ ಗವಿಸಿದ್ಧೇಶ್ವರ ಶ್ರೀಗಳೇ ಮಾತನಾಡಿದ್ದು ಅವಕಾಶ ನೀಡುವುದಿಲ್ಲ ಎನ್ನುವ ಭರವಸೆ ನೀಡಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.