ಕೊಪ್ಪಳ: ಬಾರದ ಮುಂಗಾರು ಹಾನಿಯ ಪರಿಹಾರ

| Published : Feb 09 2024, 01:47 AM IST

ಸಾರಾಂಶ

ಮುಂಗಾರು ವೇಳೆ ಬಹುತೇಕ ಬೆಳೆ ಹಾನಿಯಾಗಿವೆ. ಹಿಂಗಾರಿಯೂ ಬಹುತೇಕ ಹಾನಿಯಾಗಿದ್ದರೂ ರಾಜ್ಯ ಸರ್ಕಾರ ಬರ ಘೋಷಣೆ ಮಾಡದೇ ಇರುವುದರಿಂದ ಸರ್ವೆ ಕಾರ್ಯ ನಡೆದಿಲ್ಲ. ಮುಂಗಾರು ಹಂಗಾಮಿಗೆ ಕೊಡಬೇಕಾದ ಪರಿಹಾರವೂ ಇನ್ನು ಬಂದಿಲ್ಲ ಎನ್ನುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಜಿಲ್ಲೆಯಲ್ಲಿ ತೀವ್ರ ಬರದಿಂದ ರೈತ ಸಮುದಾಯ ತತ್ತರಿಸಿದೆ. ಬರಬೇಕಾದ ಪರಿಹಾರ ಇನ್ನೂ ಬಾರದಿರುವುದರಿಂದ ರೈತರು ಶಪಿಸುತ್ತಿದ್ದಾರೆ.ಜಿಲ್ಲೆಯಲ್ಲಿ ಮುಂಗಾರು ವೇಳೆ ಬಹುತೇಕ ಬೆಳೆ ಹಾನಿಯಾಗಿವೆ. ಹಿಂಗಾರಿಯೂ ಬಹುತೇಕ ಹಾನಿಯಾಗಿದ್ದರೂ ರಾಜ್ಯ ಸರ್ಕಾರ ಬರ ಘೋಷಣೆ ಮಾಡದೇ ಇರುವುದರಿಂದ ಸರ್ವೆ ಕಾರ್ಯ ನಡೆದಿಲ್ಲ. ಮುಂಗಾರು ಹಂಗಾಮಿಗೆ ಕೊಡಬೇಕಾದ ಪರಿಹಾರವೂ ಇನ್ನು ಬಂದಿಲ್ಲ ಎನ್ನುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3,08,000 ಹೆಕ್ಟೇರ್ ಪ್ರದೇಶದಲ್ಲಿ ಹಾಕಲಾಗಿದ್ದ ಬೆಳೆ ಮಳೆಯ ಅಭಾವ ಮತ್ತು ತೇವಾಂಶದಿಂದ ಭತ್ತವನ್ನು ಹೊರತುಪಡಿಸಿ 2.40 ಲಕ್ಷ ಹೆಕ್ಟೇರ್ (ಶೇ.80) ಪ್ರದೇಶದ ಬೆಳೆ ಬಹುತೇಕ ನಷ್ಟವಾಗಿದೆ. ಬರ ಪೀಡಿತ ಎಂದು ಸಹ ಘೋಷಿಸಲಾಗಿದೆ.ಇನ್ನು ಬಂದಿಲ್ಲ ಪರಿಹಾರ:ಮುಂಗಾರು ಹಂಗಾಮಿನಲ್ಲಿ 2.40 ಲಕ್ಷ ಹೆಕ್ಚೇರ್ ಪ್ರದೇಶದ ಬೆಳೆ ಹಾನಿಯಾಗಿ, ಸುಮಾರು ₹1400 ಕೋಟಿ ಹಾನಿಯಾಗಿದೆ. ಇದಕ್ಕೆ ಎನ್‌ಡಿಆರ್‌ಎಫ್ ನಿಯಮಾನುಸಾರ ₹206 ಕೋಟಿ ನೀಡಬೇಕು. ಇದುವರೆಗೂ ಕೇಂದ್ರ ಸರ್ಕಾರ ಬರ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ.ರಾಜ್ಯ ಸರ್ಕಾರ ₹2 ಸಾವಿರ ಬರಪರಿಹಾರ ಘೋಷಿಸಿದೆ. ಈ ಪೈಕಿ ಇದುವರೆಗೂ ಕೇವಲ ₹19.93 ಕೋಟಿ ರೈತರ ಖಾತೆಗೆ ಜಮೆಯಾಗಿದೆ. 1,00,800 ರೈತರಿಗೆ ಈ ಪರಿಹಾರ ದೊರೆತಿದೆ. ಇನ್ನು 1 ಲಕ್ಷಕ್ಕೂ ಅಧಿಕ ರೈತರಿಗೆ ₹2 ಸಾವಿರ ಪರಿಹಾರ ಜಮೆಯಾಗಬೇಕಾಗಿದೆ.ಹಿಂಗಾರಿಯೂ ವಿಫಲ:ಜಿಲ್ಲೆಯಲ್ಲಿ ಮಳೆಯ ಅಭಾವದಿಂದಾಗಿ ಬಿತ್ತನೆಯಾಗಿದ್ದೇ ಕಡಿಮೆ. ಅದರಲ್ಲೂ ಬಹುತೇಕ ಬೆಳೆ ಹಾನಿಯಾಗಿದೆ. ಹಿಂಗಾರು ಹಂಗಾಮಿನಲ್ಲಿ ಶೇ.68 ಮಳೆ ಅಭಾವ ಎದುರಾಗಿದ್ದರಿಂದ ಬಿತ್ತಿದ್ದು, ದಕ್ಕಿದ್ದೂ ಕಡಿಮೆಯೇ. ಆದರೂ ರಾಜ್ಯ ಸರ್ಕಾರ ಇದುವರೆಗೂ ಹಿಂಗಾರು ಬೆಳೆಯ ಸರ್ವೆ ಮಾಡುವುದಕ್ಕೆ ಆದೇಶಿಸಿಲ್ಲ. ಸರ್ಕಾರದ ಆದೇಶ ಇಲ್ಲದೇ ಹಿಂಗಾರು ಬೆಳೆ ಹಾನಿ ಸರ್ವೆಯನ್ನು ಅಧಿಕಾರಿಗಳು ಮಾಡುತ್ತಿಲ್ಲ. ಈಗಾಗಲೇ ಮಳೆಯ ಅಭಾವದಿಂದ ಹಿಂಗಾರು ಬೆಳೆ ಸಂಪೂರ್ಣ ಒಣಗಿ ಹೋಗಿದ್ದು, ಈಗ ಸರ್ವೆಗೆ ಹೋದರೂ ಒಂದು ಸಾಕ್ಷಿಯೂ ಸಿಗದಂತಾಗಿದೆ. ಇಷ್ಟಾದರೂ ಹಿಂಗಾರು ಬೆಳೆ ಸರ್ವೆ ಮಾಡಲು ಮುಂದಾಗದೇ ಇರುವುದು ಏಕೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.ಹಿಂದೆಂದು ಆಗಿರಲಿಲ್ಲ ವಿಳಂಬ:ಈ ಹಿಂದೆ ಬರ ಪೀಡಿತ ಎಂದು ಘೋಷಣೆಯಾದ ಒಂದೆರಡು ತಿಂಗಳಲ್ಲಿ ಪರಿಹಾರ ಜಮೆಯಾಗುತ್ತಿತ್ತು. ಆದರೆ, ಈ ವರ್ಷ ಇದುವರೆಗೂ ಪರಿಹಾರ ಬಂದಿಲ್ಲ. ಕೇಂದ್ರ ಪರಿಹಾರ ನೀಡಿಲ್ಲ ಎಂದು ರಾಜ್ಯ ಸರ್ಕಾರ ಆರೋಪ ಮಾಡುತ್ತಿದ್ದರೆ, ಮೊದಲು ರಾಜ್ಯ ಸರ್ಕಾರದಿಂದ ಕೊಡಲಿ, ನಂತರ ಕೇಂದ್ರದಿಂದ ಬರುತ್ತದೆ ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.ಬರ ಪರಿಹಾರವನ್ನು ರಾಜ್ಯ ಸರ್ಕಾರ ಈಗಾಗಲೇ ಪ್ರತಿ ರೈತರಿಗೆ ₹2 ಸಾವಿರ ಘೋಷಿಸಿದೆ. ಅದು ಈಗಾಗಲೇ ₹19.93 ಕೋಟಿ ಹಣವು 1,00,800 ರೈತರಿಗೆ ಜಮೆಯಾಗಿದೆ. ಉಳಿದ ರೈತರಿಗೆ ಜಮೆಯಾಗುವ ಪ್ರಕ್ರಿಯೆ ನಡೆದಿದೆ ಎನ್ನುತ್ತಾರೆ ಜಂಟಿ ನಿರ್ದೇಶಕ ರುದ್ರೇಶಪ್ಪ.