ಸಾರಾಂಶ
ಅವಶ್ಯಕತೆ ಇದ್ದರೆ ಟ್ಯಾಂಕರ್ ಗಳು ಹೆಚ್ಚಿಸಿ ನೀರು ಪೂರೈಸುವ ಮೂಲಕ ಗ್ರಾಮದ ಜನರಿಗೆ ನೀರಿನ ಸಮಸ್ಯೆ ಆಗಲಾರದಂತೆ ನೋಡಿಕೊಳ್ಳಲಾಗುವುದೆಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ.ಕೊರಬು ಹೇಳಿದರು.
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ನನ್ನ ಸ್ವಂತ ಹಣದಿಂದ ಸದ್ಯ 4 ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುವುದು. ಮುಂದೆ ಇನ್ನು ಹೆಚ್ಚಿನ ರೀತಿಯಲ್ಲಿ ಅವಶ್ಯಕತೆ ಇದ್ದರೆ ಟ್ಯಾಂಕರ್ ಗಳು ಹೆಚ್ಚಿಸಿ ನೀರು ಪೂರೈಸುವ ಮೂಲಕ ಗ್ರಾಮದ ಜನರಿಗೆ ನೀರಿನ ಸಮಸ್ಯೆ ಆಗಲಾರದಂತೆ ನೋಡಿಕೊಳ್ಳಲಾಗುವುದೆಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ.ಕೊರಬು ಹೇಳಿದರುತಾಲೂಕಿನ ಮಾಶಾಳ ಗ್ರಾಮದ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವದ ಅಂಗವಾಗಿ ಮತ್ತು ನೀರಿನ ಸಮಸ್ಯೆ ನಿರ್ಮೂಲನೆಗಾಗಿ,
ಜೆ.ಎಂ. ಕೊರಬು ಫೌಂಡೇಶನ್ ವತಿಯಿಂದ 4 ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಚಾಲನೆ ನೀಡಿ ಮಾತನಾಡಿ ಬಹಳ ದಿನಗಳ ಹಿಂದೆಯೇ ನೀರು ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಪ್ರಾರಂಭಿಸಲು ಸಾಧ್ಯವಾಗಿಲ್ಲ.ಈಗ ಗ್ರಾಮದ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಇರುವುದರಿಂದ ಗ್ರಾಮಸ್ಥರ ಬೇಡಿಕೆಯಂತೆ ನೀರು ಸರಬರಾಜು ಮಾಡಲಾಗುತ್ತಿದೆ. ಇಂದಿನಿಂದ ಪ್ರಾರಂಭವಾದ ಈ ಕಾರ್ಯವು ಮುಂದೆ ನೀರಿನ ಸಮಸ್ಯೆ ಬಗೆಹರೆಯುವವರೆಗೂ ನಿರಂತರವಾಗಿ ಸರಬರಾಜು ಮಾಡಲಾಗುವುದು. ಗ್ರಾಮದಲ್ಲಿ ಹಲವು ವರ್ಷಗಳಿಂದ ನೀರಿನ ಹಾಹಾಕಾರ ಸಾಕಷ್ಟು ಇದೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ ಸಹ ನೀರು ಪೂರೈಕೆ ಆಗುತ್ತಿಲ್ಲ. ಮುಂದೆ ಈ ಸಮಸ್ಯೆ ಬಗ್ಗೆ ಶಾಸಕರ ಜೊತೆ ಚರ್ಚಿಸಿ ಶಾಶ್ವತವಾಗಿ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಹಿಂದೆಯೂ ನೀರಿನ ಸಮಸ್ಯೆ ಉದ್ಭವಿಸಿದಾಗ ಸುಮಾರು 8 ಟ್ಯಾಂಕರ್ ಮೂಲಕ ದಿನನಿತ್ಯ 50ರಿಂದ 60 ಟ್ಯಾಂಕರ್ ನೀರು 5 ತಿಂಗಳು ಕಾಲ ಪೂರೈಕೆ ಮಾಡಲಾಗಿದೆ.ಗ್ರಾಮದ ಜನರ ಸಮಸ್ಯೆಗಳಿಗೆ ಯಾವತ್ತೂ ಸಹ ನನ್ನ ಕೈಲಾದಷ್ಟು ಸೇವೆ ಸಲ್ಲಿಸಲು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.ಹಿರಿಯ ಮುಖಂಡ ಮಕ್ಬೂಲ್ ಶೇಖ ಮಾತನಾಡಿ, ಗ್ರಾಮದಲ್ಲಿ ಯಾವುದೇ ಸಮಸ್ಯೆ ಬಂದಾಗ ಜೆ.ಎಂ. ಕೊರಬು ಅವರು ನಿರಂತರವಾಗಿ ಸಹಕಾರ ಮಾಡುತ್ತಾ ಬಂದಿದ್ದಾರೆ.ಕಳೆದ ವರ್ಷದಂತೆ ಈ ವರ್ಷವೂ ಜೆ.ಎಂ. ಕೊರಬು ಫೌಂಡೇಶನ್ ವತಿಯಿಂದ 4 ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ಗ್ರಾಮದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಅದರಲ್ಲಿಯೂ ಈಗ ಜಾತ್ರಾ ಮಹೋತ್ಸವ ಇರುವುದರಿಂದ ಸಾಕಷ್ಟು ಅವಶ್ಯಕತೆ ಇತ್ತು ಎಂದು ಹೇಳಿದರು.ಮಾಶಾಳ ಗ್ರಾಮದ ಜನರ ನೀರಿನ ಸಮಸ್ಯೆ ಬಗೆಹರಿಸಲು ಸಮಾಜ ಸೇವಕರಾದ ಜೆ.ಎಂ.ಕೊರಬು ತಮ್ಮ ಸ್ವಂತ ಹಣದಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವುದು ಸಮಾಜಮುಖಿ ಕಾರ್ಯವಾಗಿದೆ.ಕಳೆದ ವರ್ಷವೂ ಹತ್ತಾರು ಟ್ಯಾಂಕರ್ ಮೂಲಕ ನೀರು ಪೂರೈಸಿದರು.
- ಮುರಳಾರಾಧ್ಯ ಶಿವಾಚಾರ್ಯರು, ಮಾಶಾಳ.