ನೀರಿಲ್ಲ, ಚರಂಡಿ ಇಲ್ಲ, ಸರಿಯಾದ ರಸ್ತೆ ಇಲ್ಲ, ಬಯಲೇ ಶೌಚಾಲಯ, ವಿದ್ಯುತ್ ಎಂಬುದು ಮರೀಚಿಕೆಯಾಗಿದೆ. ಇದಕ್ಕೆಲ್ಲವೂ ಮಿಗಿಲಾಗಿ ಜೀವನಕ್ಕೆ ಸೂರೆಂಬುದು ಇಲ್ಲವೇ ಇಲ್ಲ. ಗುಡಿಸಲಿನಲ್ಲೆ ಬದುಕಿನ ಬಂಡಿಯ ಜೀವನ ನಡೆಸುವಂತಹ ದುಸ್ಥಿತಿ ಇವರದ್ದಾಗಿದೆ.

ಚರಂಡಿ, ರಸ್ತೆ, ಶೌಚಾಲಯ, ವಿದ್ಯುತ್ ಸೇರಿ ಮೂಲಭೂತ ಸೌಲಭ್ಯಗಳು ಮರೀಚಿಕೆ

ರಿಯಾಜಅಹ್ಮದ ಎಂ. ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ನೀರಿಲ್ಲ, ಚರಂಡಿ ಇಲ್ಲ, ಸರಿಯಾದ ರಸ್ತೆ ಇಲ್ಲ, ಬಯಲೇ ಶೌಚಾಲಯ, ವಿದ್ಯುತ್ ಎಂಬುದು ಮರೀಚಿಕೆಯಾಗಿದೆ. ಇದಕ್ಕೆಲ್ಲವೂ ಮಿಗಿಲಾಗಿ ಜೀವನಕ್ಕೆ ಸೂರೆಂಬುದು ಇಲ್ಲವೇ ಇಲ್ಲ. ಗುಡಿಸಲಿನಲ್ಲೆ ಬದುಕಿನ ಬಂಡಿಯ ಜೀವನ ನಡೆಸುವಂತಹ ದುಸ್ಥಿತಿ ಇವರದ್ದಾಗಿದೆ.

ಇದು ಕುಗ್ರಾಮದ ಸ್ಥಿತಿಯಲ್ಲ, ಸುಸಜ್ಜಿತ ವ್ಯವಸ್ಥಿತವಾಗಿರುವ ಬಹಳ ದೊಡ್ಡ ಗ್ರಾಪಂ ಸದಸ್ಯರು ಹೊಂದಿರುವ ಡಂಬಳ ಗ್ರಾಮದಲ್ಲಿ ಕೊರಮ (ಕುಂಚಿ ಕೊರವರ) ಗುಡಿಸಲು ಹಾಕಿಕೊಂಡು ಮೂಲ ಸೌಲಭ್ಯಗಳಿಂದ ವಂಚಿತರಾಗಿ ಜೀವನ ನಡೆಸುತ್ತಿರುವ ಕೊರಮ ಸಮಾಜದ ಕುಟುಂಬಗಳ ಸ್ಥಿತಿ.

ಈ ಮೊದಲು ಈಚಲು ಚಾಪೆ, ಇವರೆ ಹೆಣೆದ ಬೀದಿರಿನ ಬುಟ್ಟಿ, ತಾವೇ ತಯಾರಿಸಿದ ಮಕ್ಕಳ ಆಟಿಕೆಗಳು, ಕಾಲ ಬದಲಾದಂತೆ ಕೂದಲು, ಹೇರ್ ಪಿನ್ನು, ಗುಜರಿ, ಕಸಬರಿಗೆ, ಮಾರಾಟ ಮಾಡಿಕೊಂಡು ಹಾಗೂ ಕೂಲಿ ನಾಲಿ ಮಾಡಿ ಬದುಕು ನಡೆಸುತ್ತಿರುವ ಈ ಕುಟುಂಬಗಳು ಇಲ್ಲಿನ ಲಿಂ.ಡಾ.ಜಗದ್ಗುರು ಸಿದ್ದಲಿಂಗ ಮಹಾಸ್ವಾಮಿಗಳು ದಾನ ಮಾಡಿರುವ ಜಮೀನಿನಲ್ಲಿ ವಾಸವಾಗಿವೆ. ವರ್ಷದಿಂದ ವರ್ಷಕ್ಕೆ ಇವರ ಕುಟುಂಬಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಜಾಗ ಸಾಲಲಾರದೆ ಇವರು ರಸ್ತೆಯಲ್ಲಯೇ ಗುಡಿಸಲು ಹಾಕಿಕೊಂಡು ಬದುಕು ನಡೆಸುತ್ತಿದ್ದಾರೆ.

ಇವರು ಕೂಡ ಎಲ್ಲರಂತೆ ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದು, ಆಧಾರ್ ಕಾರ್ಡ್ ಹೊಂದಿದ್ದು, ಪಡಿತರ ಚೀಟಿಯನ್ನು ಹೊಂದಿದ್ದರೂ ಎಲ್ಲರಂತೆ ಬದುಕು ನಡೆಸಲು ಮಾತ್ರ ಆಗುತ್ತಿಲ್ಲ. ಕಳೆದ 20 ವರ್ಷಗಳಿಂದ ಅಧಿಕಾರಿಗಳು, ಜಪ್ರತಿನಿಧಿಗಳು ನಿವೇಶನ ನೀಡಿ ಬದುಕು ರೂಪಿಸುವುದಾಗಿ ನೀಡಿದ ಭರವಸೆಗಳು ಇನ್ನೂ ಈಡೇರಿಲ್ಲದಿರುವುದು ದುರಂತದ ಸಂಗತಿ.

ಈ ಕುಟುಂಬಗಳು ಡಂಬಳ ಗ್ರಾಪಂ ಆಡಳಿತ, ಜಿಲ್ಲಾ‌ಡಳಿತ, ತಾಲೂಕು ಆಡಳಿತದ ಮೇಲೆ ನಂಬಿಕೆ ಇಟ್ಟುಕೊಂಡು ಇಂದಲ್ಲ, ನಾಳೆ ನಮಗೂ ಒಂದು ಅವಕಾಶ ಸಿಗುತ್ತದೆ. ನಮ್ಮದೆಂಬ ಮನೆ ನಿರ್ಮಾಣ ಮಾಡಿಕೊಳ್ಳಬಹುದು ಎಂಬ ಕನಸಿನೊಂದಿಗೆ ಜೀವನ ಕಟ್ಟಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಮೊದಲು ಡಂಬಳ ಗ್ರಾಮದ ಬಸ್‌ ನಿಲ್ದಾಣವಾಗಿರುವ ಸ್ಥಳದಲ್ಲಿ ವಾಸವಾಗಿದ್ದ ಕುಟುಂಬಗಳ ಸ್ಥಿತಿಯನ್ನು ಕಂಡು ಅಂದು ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಜಮೀನನ್ನು ನೀಡಿದ ಬಳಿಕ ಈ ಕುಟುಂಬಗಳು ಇಲ್ಲಿಗೆ ಬಂದು ಗುಡಿಸಲು ಹಾಕಿಕೊಂಡು ಜೀವನ ಪ್ರಾರಂಭಿಸಿವೆ. ಅಂದು ಕಟ್ಟಿಕೊಂಡ ಶೀಟಿನ ಮನೆ, ಗುಡಿಸಲು ಮನೆಗಳು, ಕೆಲವರು ಪಕ್ಕಾ ಮನೆ ಕೂಡಾ ಕಟ್ಟಿಕೊಂಡಿದ್ದಾರೆ. ಆದರೆ ಕಡುಬಡ ಕುಟುಂಬಗಳು ಇಂದಿಗೂ ಹಾಗೇ ಇವೆ.

ಯಾರಿಗೂ ಶೌಚಾಲಯವಿಲ್ಲದ ಕಾರಣ ಮಹಿಳೆಯರು ಮಹಿಳೆಯರು, ಮಕ್ಕಳು, ವೃದ್ಧರು ಎಲ್ಲರಿಗೂ ಬಯಲೇ ಶೌಚಾಲಯವಾಗಿದೆ. ರಸ್ತೆ ಎಂಬುದಿಲ್ಲ, ಇರುವ ಬೀದಿ ದೀಪವೊಂದೆ ಇವರಿಗೆ ದಾರಿದೀಪವಾಗಿದೆ. ಹೀಗೆ ಮನೆ ಇಲ್ಲದೆ ಮೂಲಭೂತ ಸೌಲಭ್ಯಗಳಿಲ್ಲದೆ ಇವರ ಬದುಕಿನ ಬಂಡಿ ಸಾಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಇಲ್ಲಿನ ಕುಟುಂಬಗಳಿಗೆ ಅವಶ್ಯಕ ಮನೆಯೊಂದಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅವರೂ ಸಾಮಾನ್ಯ ನಾಗರಿಕರಂತೆ ಬದುಕು ನಡೆಸುವ ಅವಕಾಶ ಕಲ್ಪಿಸಿಕೊಡಲು ಮುಂದಾಗಬೇಕು ಎನ್ನುವುದು ಕೊರಮ ಜನಾಂಗದವರ ಒತ್ತಾಯವಾಗಿದೆ.ನಮಗೆ ಸೌಲಭ್ಯ ಕಲ್ಪಿಸಿ

ಇಲ್ಲಿರುವ ಪ್ರತಿಯೊಂದು ಕುಟುಂಬದವು ಬಡವರಾಗಿದ್ದು ನಿವೇಶನ ನೀಡುವಂತೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ನೀಡುವ ಭರವಸೆ ನೀಡಿದ್ದಾರೆ. ಆದರೆ ಅದು ಈಡೇರಿಲ್ಲ, ಆದ ಕಾರಣ ಇಂದಿಗೂ ಸೂರಿಲ್ಲದೆ ಗುಡಿಸಲಿನಲ್ಲಿ ಬದುಕು ನಡೆಸುತ್ತಿದ್ದೇವೆ. ಸಂಬಂಧಪಟ್ಟವರು ನಮ್ಮ ಸಮಸ್ಯೆ ಆಲಿಸಿ ನಮಗೆ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡುತ್ತೇವೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳಾದ ಹನಮಂತ ಕೊರವರ, ಗಂಗಪ್ಪ ಕೊರವರ, ಮಾರಗೇಪ್ಪ ಕೊರವರ, ಗಾಯತ್ರಿ ಕೊರವರ, ಕಾವೇರಿ ಕೊರವರ, ಯಲ್ಲವ್ವ ಕೊರವರ.