ಕೊರಟಗೆರೆ: ಜಕ್ಕೇನಹಳ್ಳಿ ರೈತರಿಂದ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ

| Published : Feb 03 2024, 01:47 AM IST

ಕೊರಟಗೆರೆ: ಜಕ್ಕೇನಹಳ್ಳಿ ರೈತರಿಂದ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಕ್ಕೇನಹಳ್ಳಿ ಗ್ರಾಮ ವ್ಯಾಪ್ತಿಯ ಸರ್ಕಾರಿ ಕರಾಬ್ ಭೂಮಿಯಲ್ಲಿ ಸಾಗುವಳಿ ಮಾಡುವ ಬಡ ರೈತರ ಜಮೀನುಗಳಲ್ಲಿ ಅರಣ್ಯ ಇಲಾಖೆ ಸಸಿ ನೆಡಲು ಗುಂಡಿ ತೋಡುವ ಮೂಲಕ ತಮ್ಮನ್ನು ಒಕ್ಕಲೆಬ್ಬಿಸುತ್ತಿದೆ ಎಂದು ಸಂತ್ರಸ್ತ ರೈತರು ಅಳಲು ತೋಡಿ ಕೊಳ್ಳುತ್ತಿರುವುದಲ್ಲದೆ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಕ್ಕೇನಹಳ್ಳಿ ಗ್ರಾಮ ವ್ಯಾಪ್ತಿಯ ಸರ್ಕಾರಿ ಕರಾಬ್ ಭೂಮಿಯಲ್ಲಿ ಸಾಗುವಳಿ ಮಾಡುವ ಬಡ ರೈತರ ಜಮೀನುಗಳಲ್ಲಿ ಅರಣ್ಯ ಇಲಾಖೆ ಸಸಿ ನೆಡಲು ಗುಂಡಿ ತೋಡುವ ಮೂಲಕ ತಮ್ಮನ್ನು ಒಕ್ಕಲೆಬ್ಬಿಸುತ್ತಿದೆ ಎಂದು ಸಂತ್ರಸ್ತ ರೈತರು ಅಳಲು ತೋಡಿ ಕೊಳ್ಳುತ್ತಿರುವುದಲ್ಲದೆ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ತುಮಕೂರು ತಾಲೂಕು ಕೋರ ಹೋಬಳಿ ಜಕ್ಕೇನಹಳ್ಳಿ ಸರ್ವೆ ನಂಬರ್ 70ರಲ್ಲಿ 30ಕ್ಕೂ ಹೆಚ್ಚು ರೈತರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 30-40 ವಷರ್ಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೇ ಈ ಜಮೀನಿನಲ್ಲಿ ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳಿಂದ ಸಸಿ ನೆಡಲು ಗುಂಡಿ ತೋಡುತ್ತಿದ್ದಾರೆ, ಇದರಿಂದ ಇಲ್ಲಿನ ರೈತರಲ್ಲಿ ಆತಂಕ ಮೂಡಿದೆ.

ಮಾಜಿ ಶಾಸಕ ಆರ್‌. ನಾರಾಯಣ್ ಕಳೆದ 35 ವರ್ಷಗಳ ಹಿಂದೆ ಜಕ್ಕೇನಹಳ್ಳಿ ಗ್ರಾಮ ಈ ಹಿಂದೆ ಬೆಳ್ಳಾವಿ ವಿಧಾನಸಭಾ ಕ್ಷೇತ್ರಕ್ಕೆ ಇದ್ದಂತ ಸಂದರ್ಭದಲ್ಲಿ, 15 ರಿಂದ 20 ರೈತರುಗಳಿಗೆ ಅಕ್ರಮ ಸಕ್ರಮ ಬಗುರ್ ಹುಕುಂ ಸಾಗುವಳಿ ಚೀಟಿಯನ್ನ ನೀಡಿದ್ದು ಆ ರೈತರುಗಳಿಗೆ ಖಾತೆ, ಪಹಣಿಯಾಗಿ ರೈತರು ಉಳುಮೆ ಮಾಡಿಕೊಂಡಿದ್ದರೆ, ಉಳಿದ 40 ರಿಂದ 50 ಜನ ರೈತರು 40ವರ್ಷಗಳ ಹಿಂದೆಯೇ ಸಾಗುವಳಿ ಚೀಟಿ ಹಾಕಿಕೊಂಡು ಉಳಿವೆ ಮಾಡಿಕೊಂಡು ಇರುವುದರಿಂದ ನಿರಾಳವಾಗಿ ಉಳುಮೆ ಮಾಡುತ್ತಿದ್ದ ರೈತರಿಗೆ ಇತ್ತೀಚಿಗೆ ಅರಣ್ಯ ಇಲಾಖೆಯವರು ಪದೇ ಪದೇ ಗಿಡ ನೆಡಲು ಬಂದು ರೈತರ ನೆಮ್ಮದಿ ಕೆಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅರಣ್ಯ ಇಲಾಖೆಗೆ ನೀಡಲಾದ ಸರ್ಕಾರಿ ಜಮೀನು ನಮ್ಮ ಜಮೀನುಗಳಿಂದ ಮೇಲ್ಭಾಗಕ್ಕೆ ಬರುತ್ತಿದ್ದು, ಗುಡ್ಡ ಹಾಗೂ ಎತ್ತರ ಪ್ರದೇಶಗಳಿಗೆ ಹೋಗದೆ ರೈತರು ಉಳುಮೆ ಮಾಡಿಕೊಳ್ಳುತ್ತಿರುವ ಪ್ರದೇಶದ ಕಡೆಗೆ ಗಿಡ ನೆಡಲು ಬರುತ್ತಿರುವುದು ಅರಣ್ಯ ಇಲಾಖೆಯ ದುರುದ್ದೇಶ, ಈ ಹಿಂದಿನ ಈ ಭಾಗದ ಶಾಸಕರಾದ ಆರ್‌. ನಾರಾಯಣ್, ಕೆ.ಎನ್. ರಾಜಣ್ಣ ನಂತರ ಈಗಿನ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್‌ 22-2023ರಲ್ಲಿ ಬಹಳಷ್ಟು ರೈತರ ಸಾಗುವಳಿ ಮಂಜುರಾತಿ ನೀಡುವ ಸಂದರ್ಭದಲ್ಲಿ ನೀತಿ ಸಂಹಿತೆ ಬಂದ ಕಾರಣ ಒಂದಷ್ಟು ವಿಳಂಬವಾಗಿದೆ. ಆದಕಾರಣ ಅರಣ್ಯ ಇಲಾಖೆಯವರು ಮತ್ತೆ ನಮ್ಮ ಉಳುಮೆ ಜಮೀನುಗಳಿಗೆ ಬಂದು ಗಿಡ ನೆಡುತ್ತಿರುವುದು ನಮ್ಮ ಬಾಳಿಗೆ ಕೊಳ್ಳಿ ಇಟ್ಟಂತಾಗಿದೆ ಎಂದು ಈ ಭಾಗದ ರೈತರು ದುಗುಡತೆ ವ್ಯಕ್ತಪಡಿಸುತ್ತಿದ್ದಾರೆ.