ಹುಬ್ಬಳ್ಳಿ:
ಕೊರವಿ ಕುಟುಂಬದವರು ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷ ನೂರಾರು ಬಡವರಿಗೆ ಉಚಿತ ಕಣ್ಣಿನ ಶಿಬಿರ ಆಯೋಜಿಸುವ ಮೂಲಕ ಸಾವಿರಾರು ಜನರಿಗೆ ದೃಷ್ಟಿ ಭಾಗ್ಯ ಕಲ್ಪಿಸಿದ್ದಾರೆ ಎಂದು ಮೇಯರ್ ದುರ್ಗಮ್ಮ ಬಿಜವಾಡ ಹೇಳಿದರು.ಇಲ್ಲಿನ ಉಣಕಲ್ಲ ಶ್ರೀಸದ್ಗುರು ಸಿದ್ದೇಶ್ವರ ಸ್ವಾಮಿ ಕೈಲಾಸ ಮಂಟಪದ ಹೊಸ ಮಠದಲ್ಲಿ ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆ ಹಾಗೂ ನಿರ್ಮಲಾ ಫೌಂಡೇಶನ್ ಆಶ್ರಯದಲ್ಲಿ ಮೂರುಸಾವಿರಪ್ಪ ಸಂಗಪ್ಪಣ್ಣ ಕೊರವಿ ಅವರ 6ನೇ ಪುಣ್ಯಸ್ಮರಣೆ ನಿಮಿತ್ತ ಏರ್ಪಡಿಸಿದ್ದ ನಡೆದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ತಾಯಿಯ ಆಶಯದಂತೆ ಪ್ರತಿ ವರ್ಷ ತಮ್ಮ ತಂದೆ-ತಾಯಿಯ ಪುಣ್ಯಸ್ಮರಣೆಯ ದಿನದಂದು ಖ್ಯಾತ ಕಣ್ಣಿನ ವೈದ್ಯರಿಂದ ನೇತ್ರಚಿಕಿತ್ಸೆ ನಡೆಸಿ ಶಸ್ತ್ರಚಿಕಿತ್ಸೆಗೂ ಅವಕಾಶ ನೀಡುವುದಾಗಿ ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ರುದ್ರಾಕ್ಷಿ ಮಠದ ಬಸವಲಿಂಗ ಶ್ರೀ ಆಶೀರ್ವಚನ ನೀಡಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಇಲ್ಲಿನ ಅಂಬಿಕಾ ನಗರದಲ್ಲಿ ಹೊಸದಾಗಿ ನಿರ್ಮಿಸಿದ 100 ಫೀಟ್ ರಸ್ತೆಯ ಅಕ್ಕಪಕ್ಕದಲ್ಲಿ 100 ಸಸಿ ನೆಡುವ ಕಾರ್ಯಕ್ರಮಕ್ಕೆ ಪೂಜ್ಯರು ಚಾಲನೆ ನೀಡಿದರು.
ಈ ವೇಳೆ ಚನ್ನು ಹೊಸಮನಿ, ಡಾ. ಹರಿತಾ ಭಟ್ಟ, ಪ್ರೊ. ದ್ವಾವಪ್ಪನವರ, ಡಾ. ವೃಷಭ ಶೇಠ, ಶಶಿಧರ ಕೊರವಿ, ರಮೇಶ ಕೊರವಿ, ಅನ್ನಪೂರ್ಣ ಪಾಟೀಲ, ಶಿವಾಜಿ ಬನ್ನಿಕೊಪ್ಪ ಸೇರಿದಂತೆ ಹಲವರಿದ್ದರು. ಸವಿತಾ ದೀಕ್ಷಿತ್ ಪ್ರಾರ್ಥಿಸಿದರು. ಡಾ. ವಿಶ್ವನಾಥ ಕೊರವಿ ಸ್ವಾಗತಿಸಿದರು. ಎಸ್.ಐ. ನೇಕಾರ ನಿರೂಪಿಸಿ, ವಂದಿಸಿದರು.