ವಿಚಾರವಾದಿ ಡಾ.ಹ.ರ.ಮಹೇಶ್, ಇತ್ತೀಚಿನ ದಿನಗಳಲ್ಲಿ ಎಸ್ಸಿ- ಎಸ್ಟಿ ಸಮುದಾಯಗಳು ಅಂಬೇಡ್ಕರ್ ಜಯಂತಿ ಸೇರಿದಂತೆ ಹೋರಾಟ ಮತ್ತು ವಿಜಯೋತ್ಸವಗಳಿಗೆ ಮಾತ್ರ ಸೀಮಿತವಾಗುತ್ತಿದ್ದಾರೆ, ಮುಂದೆ ಬದಲಾವಣೆಯ ಮಾರ್ಗಕ್ಕೆ ಆಲೋಚಿಸುತ್ತಿಲ್ಲ, ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗೆ ಚುನಾವಣಾ ಚಳವಳಿ ರೂಪಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೋರೆಗಾಂವ್ ವಿಜಯೋತ್ಸವ ಸ್ವಾಭಿಮಾನ ಮತ್ತು ಆತ್ಮಗೌರವದ ಸಂಕೇತ ಎಂದು ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನವನದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ಆಚರಣಾ ಸಮಿತಿ ಆಯೋಜಿಸಿದ್ದ ೨೦೮ನೇ ವರ್ಷದ ಐತಿಹಾಸಿಕ ಭೀಮ ಕೋರೆಗಾಂವ್ ವಿಜಯೋತ್ಸವ-ವಿಚಾರಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಅವಮಾನ ಮಾಡಿ, ಸಮಾನತೆಯನ್ನು ನಿರಾಕರಿಸಿದ ಮರಾಠರ ೨ನೇ ಬಾಜಿರಾಯನ ೨೮ ಸಾವಿರ ಮರಾಠ ಸೈನಿಕರ ವಿರುದ್ಧ ೫೦೦ ಜನ ಮಹರ್ ಸೈನಿಕರು, ಸ್ವಾಭಿಮಾನಕ್ಕಾಗಿ ಭೀಮ ನದಿ ತೀರದ ಕೋರೆಗಾಂವ್ ಬಳಿ ನಡೆಸಿದ ಯುದ್ಧ ನಮ್ಮೆಲ್ಲರ ಅಸ್ಮಿತೆಯಾಗಿದೆ, ಅವರು ಹಾಕಿಕೊಟ್ಟ ಭೀಮಮಾರ್ಗ ಮತ್ತು ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗೆ ಶ್ರಮಿಸೋಣ ಎಂದು ನುಡಿದರು.

ವಿಚಾರವಾದಿ ಡಾ.ಹ.ರ.ಮಹೇಶ್, ಇತ್ತೀಚಿನ ದಿನಗಳಲ್ಲಿ ಎಸ್ಸಿ- ಎಸ್ಟಿ ಸಮುದಾಯಗಳು ಅಂಬೇಡ್ಕರ್ ಜಯಂತಿ ಸೇರಿದಂತೆ ಹೋರಾಟ ಮತ್ತು ವಿಜಯೋತ್ಸವಗಳಿಗೆ ಮಾತ್ರ ಸೀಮಿತವಾಗುತ್ತಿದ್ದಾರೆ, ಮುಂದೆ ಬದಲಾವಣೆಯ ಮಾರ್ಗಕ್ಕೆ ಆಲೋಚಿಸುತ್ತಿಲ್ಲ, ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗೆ ಚುನಾವಣಾ ಚಳವಳಿ ರೂಪಿಸುತ್ತಿಲ್ಲ ಎಂದು ಎಚ್ಚರಿಸಿದರು.

ಲಂಡನ್‌ನ ಕೊಲಂಬಿಯಾ ವಿವಿಯಲ್ಲಿ ಅಂಬೇಡ್ಕರ್ ಕಲಿಯುವ ವೇಳೆ ಅಲ್ಲಿನ ಲೈಬ್ರರಿಯಲ್ಲಿ ದೊರೆತ ಪುಸ್ತಕದಿಂದ ಎರಡನೇ ಬಾಜಿರಾಯನ ಸೈನ್ಯದ ವಿರುದ್ದ ದಲಿತರು ನಡೆಸಿದ ಸ್ವಾಭಿಮಾನಿ ಯುದ್ಧವನ್ನು ಅರಿತು, ಯುದ್ದದಲ್ಲಿ ಮಡಿದ ಮಹರ್ ಸೈನಿಕರಿಗಾಗಿ ಬ್ರಿಟಿಷ್ ಅಧಿಕಾರಿಗಳು ನಿರ್ಮಿಸಿದ್ದ ಸ್ಮಾರಕವನ್ನು ಪತ್ತೆ ಹಚ್ಚುವ ಮೂಲಕ ಇತಿಹಾಸದಲ್ಲಿ ಮುಚ್ಚಿ ಹೋಗಿದ್ದ ಮಹಾನ್ ಘಟನೆಯನ್ನು ಜಗತ್ತಿಗೆ ಪರಿಚಯಿಸಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಪತ್ರಕರ್ತ ಸೋಮಶೇಖರ್ ಕೆರಗೋಡು, ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಶಿವಶಂಕರ್, ನಿವೃತ್ತ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ, ಕಾಂಗ್ರೆಸ್ ಮುಖಂಡ ಸುಂಡಹಳ್ಳಿ ಮಂಜುನಾಥ್, ಪರಿವರ್ತನೆ ಸಂಸ್ಥೆ ಕಾರ್ಯದರ್ಶಿ ನಾಗರಾಜ, ವಿಶ್ವಜ್ಞಾನಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಸಿ.ರಮೇಶ್, ಉಪಾಧ್ಯಕ್ಷೆ ಸಿ.ವಿ.ಅರುಣಾಕ್ಷಿ, ರಾಷ್ಟ್ರೀಯ ಭೀಮ ಪಡೆ ಜಿಲ್ಲಾಧ್ಯಕ್ಷ ನಾರಾಯಸ್ವಾಮಿ ಮತ್ತಿತರರಿದ್ದರು.