ಕೋರೆಗಾಂವ್ ವಿಜಯೋತ್ಸವ: ದಲಿತರ ಸ್ವಾಭಿಮಾನದ ಹೋರಾಟ

| Published : Jan 02 2024, 02:15 AM IST

ಸಾರಾಂಶ

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 206 ನೇ ಭೀಮ ಕೋರೆಗಾಂವ್ ವಿಜಯೋತ್ಸವದಲ್ಲಿ ದಲಿತರ ಆತ್ಮಗೌರವ, ಸ್ವಾಭಿಮಾನ ಮತ್ತು ಹಕ್ಕುಗಳಿಗಾಗಿ ನಡೆದ ಭೀಮ ಕೋರೆಗಾಂವ್ ಕದನದ ವಿಜಯೋತ್ಸವ ಭಾರತದ ಚರಿತ್ರೆ ಪುಟದಲ್ಲಿ ಸದಾ ಅವಿಸ್ಮರಣೀಯ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

- ಗೌತಮ ಬುದ್ಧ ಪರಿಶಿಷ್ಟ ಜಾತಿ ಸಹಕಾರ ಸಂಘದ ಆಶ್ರಯದಲ್ಲಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್‌ ವೃತ್ತದಲ್ಲಿ ವಿಜಯೋತ್ಸವ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದಲಿತರ ಆತ್ಮಗೌರವ, ಸ್ವಾಭಿಮಾನ ಮತ್ತು ಹಕ್ಕುಗಳಿಗಾಗಿ ನಡೆದ ಭೀಮ ಕೋರೆಗಾಂವ್ ಕದನದ ವಿಜಯೋತ್ಸವ ಭಾರತದ ಚರಿತ್ರೆ ಪುಟದಲ್ಲಿ ಸದಾ ಅವಿಸ್ಮರಣೀಯ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಗೌತಮ ಬುದ್ಧ ಪರಿಶಿಷ್ಟ ಜಾತಿ ಸಹಕಾರ ಸಂಘದಿಂದ ಸಮಾನ ಮನಸ್ಕ ವೇದಿಕೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 206 ನೇ ಭೀಮ ಕೋರೆಗಾಂವ್ ವಿಜಯೋತ್ಸವದಲ್ಲಿ ಮಾತನಾಡಿದರು.

ಭಾರತ ಇತಿಹಾಸದಲ್ಲಿ ಸಿಪಾಯಿ ದಂಗೆಗೂ ಮೊದಲು ನಡೆದ 1818 ರ ಕೋರೆಗಾಂವ್ ಯುದ್ಧ ಅತ್ಯಂತ ಮಹತ್ವದ್ದಾಗಿದೆ. ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ಖಂಡಿಸಿ ಸಿದ್ಧನಾಕ ನಾಯಕತ್ವದ 500 ಮಹಾರ್ ಸೈನಿಕರು ಮರಾಠ ಪೇಶ್ವೆಯ 30 ಸಾವಿರ ಸೈನಿಕರ ವಿರುದ್ಧ ನಿರಂತರ 12 ಗಂಟೆ ಹೋರಾಟ ನಡೆಸಿ ವಿಜಯ ಪತಾಕೆ ಹಾರಿಸಿದರು. ಹೋರಾಟದಲ್ಲಿ 22 ಮಂದಿ ಮಹಾರ್ ಸೈನಿಕರು ಹುತಾತ್ಮ ರಾದರು. ಅವರ ಕೆಚ್ಚೆದೆಯ ಸಾಹಸ, ಧೈರ್ಯ ಸ್ಮರಿಸುವ ನಿಟ್ಟಿನಲ್ಲಿ ಕೋರೆಗಾಂವ್‌ನಲ್ಲಿ ವಿಜಯಸ್ತಂಭ ಸ್ಥಾಪಿಸಿ. ಪ್ರತಿ ವರ್ಷ ಜನವರಿ 1 ರಂದು ವಿಜಯೋತ್ಸವ ಆಚರಿಸಲಾಗುತ್ತದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ಜಾತೀಯತೆ, ಅಸ್ಪೃಶ್ಯತೆ ಜೀವಂತವಾಗಿದೆ. ಅಂಬೇಡ್ಕರ್ ಕೆಳವರ್ಗದಲ್ಲಿ ಹುಟ್ಟಿ ಅಸಮಾನತೆ ಎದುರಿಸಿದರೂ ಎಲ್ಲ ವರ್ಗಗಳಿಗೆ ಸಮಾನತೆ ಸಿಗ ಬೇಕು ಎಂಬ ಆಶಯದೊಂದಿಗೆ ಸಂವಿಧಾನ ರಚಿಸಿದ್ದಾರೆ. ದೇಶದಲ್ಲಿ ಯಾವುದೇ ಪಕ್ಷಗಳಿಗೆ ಸಂವಿಧಾನ ಇಡಿಯಾಗಿ ಜಾರಿಗೊಳಿಸುವ, ಸರ್ವಜನಾಂಗದ ಏಳಿಗೆ ಬಯಸುವ ಇಚ್ಛಾಶಕ್ತಿ ಇಲ್ಲ. ಎಲ್ಲರೂ ಪ್ರಜ್ಞಾವಂತ ರಾಗಿ ಮೌಢ್ಯತೆ ದೂರ ಮಾಡಬೇಕು. ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲ ವರ್ಗಕ್ಕೂ ಮತ ದಾನದ ಅಸ್ತ್ರ ನೀಡಿದ್ದಾರೆ. ಜಾತಿ, ಧರ್ಮ, ಮೌಢ್ಯದ ಹೆಸರಿನಲ್ಲಿ ಅದನ್ನು ಮಾರಿಕೊಳ್ಳದೆ ವಿವೇಚನೆ ಯಿಂದ ಸಾರ್ವಭೌಮತ್ವಕ್ಕೆ ಮುಂದಾಗಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿ, ಹಿಂದಿನಿಂದಲೂ ದಲಿತ ಸಮುದಾಯ ಶೋಷಣೆ, ಮಹಿಳಾ ದೌರ್ಜನ್ಯ, ಅಸಮಾನತೆಯನ್ನು ಎದುರಿಸುತ್ತಲೇ ಬಂದಿದೆ. ಆದರೆ ಇಂದಿಗೂ ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಾನವ ಕಲ್ಯಾಣಕ್ಕಾಗಿ ಕುವೆಂಪು ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ಸಹಬಾಳ್ವೆಯಿಂದ ಬದುಕ ಬೇಕು ಎಂದು ತಿಳಿಸಿದ್ದಾರೆ. ಧರ್ಮ, ಕೋಮುಭಾವನೆ ಬಿಟ್ಟು ಒಗಟ್ಟಿನಿಂದ ಬಾಳಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಪೇಶ್ವೆಗಳ ಆಡಳಿತದಲ್ಲಿದ್ದ ಜಾತೀಯತೆ, ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿ ಹುತಾತ್ಮರಾದ ಮಹಾರ್ ಸೈನಿಕರನ್ನು ಸ್ಮರಣೆ ಮಾಡಬೇಕು. ಸಮಾಜದಲ್ಲಿ ಅಸ್ಪೃಶ್ಯತೆ, ಅಸಮಾನತೆ ನಿವಾರಣೆಯಾಗಬೇಕಿದೆ. ಮುಖ್ಯವಾಗಿ ದಲಿತರು ತಮ್ಮಲ್ಲಿನ ಕೀಳರಿಮೆ ಬಿಡಬೇಕು. ಜಾತಿ, ಧರ್ಮ ಬಿಟ್ಟು ಅಂಬೇಡ್ಕರ್ ಆಶಯ ಹಾಗೂ ಮಾನವ ಧರ್ಮ ಪ್ರೀತಿಸಬೇಕು ಎಂದರು.

ವಕೀಲ ಪರಮೇಶ್ ಮಾತನಾಡಿದರು. ಗೌತಮ ಬುದ್ಧ ಪರಿಶಿಷ್ಟ ಜಾತಿ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಜಿ.ಕೆ. ಬಸವರಾಜ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಮುಖಂಡರಾದ ರವೀಶ್ ಕ್ಯಾತನ ಬೀಡು, ಎಚ್.ಎಂ.ರೇಣುಕಾರಾಧ್ಯ, ಗುರುಶಾಂತಪ್ಪ, ಗೌಸ್‌ ಮೊಹಿಯುದ್ಧೀನ್, ಕೂದುವಳ್ಳಿ ಮಂಜು, ರಘು, ಲಕ್ಯಾ ಸಂತೋಷ್ ಇದ್ದರು. 1 ಕೆಸಿಕೆಎಂ 1

ಗೌತಮ ಬುದ್ಧ ಪರಿಶಿಷ್ಟ ಜಾತಿ ಸಹಕಾರ ಸಂಘದ ಆಶ್ರಯದಲ್ಲಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್‌ ವೃತ್ತದಲ್ಲಿ ಸೋಮವಾರ ವಿಜಯೋತ್ಸವ ನಡೆಯಿತು.