ಕೋರೆಗಾಂವ್ ವಿಜಯ ದಲಿತರ ಸ್ವಾಭಿಮಾನದ ಉತ್ಸವ

| Published : Jan 02 2024, 02:15 AM IST

ಸಾರಾಂಶ

ಕೋರೆಗಾಂವ್‌ ವಿಜಯೋತ್ಸವ ದಲಿತರ ಸ್ವಾಭಿಮಾನದ ಉತ್ಸವವಾಗಬೇಕು. ಈ ಮೂಲಕ ದಲಿತರು ಪ್ರಜ್ಞಾವಂತರಾಗಿ, ಪ್ರೇರಿಪಿತರಾಗಿ ಸಮುದಾಯದ ಅಭಿವೃದ್ಧಿಗಾಗಿ ದುಡಿಯಬೇಕು. ದಲಿತರು ತಮ್ಮ ಅಧೀನದ ವಿಜಯೋತ್ಸವಗಳನ್ನು ಬೆಳಕಿಗೆ ತರುವ ಮೂಲಕ ಸಾಮಾಜಿಕವಾಗಿಯೂ ಮುಖ್ಯ ವಾಹಿನಿಗೆ ಬರಬೇಕು.

ದಲಿತರು ಪ್ರಜ್ಞಾವಂತರಾಗಿ ಸಮುದಾಯದ ಅಭಿವೃದ್ಧಿಗೆ ದುಡಿಯಿರಿ: ಮಾನವ ಬಂಧತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾರಾಷ್ಟ್ರದ ಭೀಮಾ ತೀರದ ಕೋರೆಗಾಂವ್‌ನಲ್ಲಿ 1818ರ ಜ.1ರಂದು ಮರಾಠ ಪೇಶ್ವೆ 2ನೇ ಬಾಜಿರಾಯನ 28 ಸಾವಿರ ಜನರಿದ್ದ ಸೈನ್ಯವನ್ನು ಕೇವಲ 500 ಜನರಿದ್ದ ಮಹರ್‌ ರೆಜಿಮೆಂಟ್‌ ಮಣಿಸಿ, ಪೇಶ್ವೆ ಸೇನೆ ಪಲಾಯನವಾಗಲು ಕಾರಣ‍ವಾಗಿದ್ದು ದೊಡ್ಡ ಇತಿಹಾಸವಾಗಿದೆ ಎಂದು ಮಾನವ ಬಂಧತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಸ್ಮರಿಸಿದರು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಸೋಮವಾರ ಜಿಲ್ಲಾ ದಲಿತ ಸಂಘಟನೆಗಳ ಮಹಾ ಒಕ್ಕೂಟ ಹಮ್ಮಿಕೊಂಡಿದ್ದ ಕೋರೆಗಾಂವ್ ವಿಜಯೋತ್ಸವ, ದಲಿತರ ಸ್ವಾಭಿಮಾನ ಉತ್ಸವ ಕಾರ್ಯಕ್ರಮದಲ್ಲಿ ಸಿಹಿ ಹಂಚಿ, ವಿಜಯೋತ್ಸವ ಆಚರಣೆ ಸಮಾರಂಭದಲ್ಲಿ ಮಾತನಾಡಿ, ಕೇವಲ ಮೇಲ್ವರ್ಗದವರ ವಿಚಾರಗಳೇ ನೈಜ ಇತಿಹಾಸವಾಗಿ ಬಿಂಬಿತವಾಗಿವೆ. ಹಾಗಾಗಿ ಕೋರೆಗಾಂವ್‌ ವಿಜಯೋತ್ಸವ ದಲಿತರ ಸ್ವಾಭಿಮಾನದ ಉತ್ಸವವಾಗಬೇಕು. ಈ ಮೂಲಕ ದಲಿತರು ಪ್ರಜ್ಞಾವಂತರಾಗಿ, ಪ್ರೇರಿಪಿತರಾಗಿ ಸಮುದಾಯದ ಅಭಿವೃದ್ಧಿಗಾಗಿ ದುಡಿಯಬೇಕು. ದಲಿತರು ತಮ್ಮ ಅಧೀನದ ವಿಜಯೋತ್ಸವಗಳನ್ನು ಬೆಳಕಿಗೆ ತರುವ ಮೂಲಕ ಸಾಮಾಜಿಕವಾಗಿಯೂ ಮುಖ್ಯ ವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.

ಹಿರಿಯ ವಕೀಲ ಅನೀಸ್ ಪಾಷ ಮಾತನಾಡಿ, ಕಾಂತರಾಜು ಆಯೋಗದ ಜಾತಿ ಗಣತಿ ವರದಿ ಬಹಿರಂಗಗೊಳಿಸಿದರೆ, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಹೆಚ್ಚಾಗಿದ್ದಾರೆಂಬುದು ಬಹಿರಂಗವಾಗಿ, ಜನಸಂಖ್ಯೆ ಆಧಾರಿತ ರಾಜಕೀಯ ಪ್ರಾತಿನಿಧ್ಯ ಪಡೆಯಲು ಹೋರಾಟ ಶುರುವಾಗುತ್ತದೆಂಬ ಕಾರಣಕ್ಕಾಗಿ ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಲಾಗುತ್ತಿದೆ ಎಂದು ದೂರಿದರು.

ಡಿಎಸ್ಸೆಸ್ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ ಮಾತನಾಡಿ, ಭೀಮಾ ಕೋರೆಗಾಂವ್ ಯುದ್ಧದ ವಿಜಯೋತ್ಸವವು ದಲಿತರ ಪ್ರಥಮ ಸ್ವಾತಂತ್ರ್ಯೋತ್ಸವದ ಹೋರಾಟವಾಗಿದೆ. ಈ ಯುದ್ಧದಲ್ಲಿ ಹುತಾತ್ಮರಾದ 22 ಜನ ಯೋಧರ ಶೌರ್ಯ, ಸಾಹಸ, ಮೇಲು-ಕೀಳು ಎಂಬ ತಾರತಮ್ಯದ ವಿರುದ್ಧದ ಹೋರಾಟ, ಸಾಮಾಜಿಕ ನ್ಯಾಯ ಸ್ಥಾಪನೆಗಾಗಿ ನಡೆದ ಹೋರಾಟವೆಂಬುದನ್ನು ದಲಿತರು ಮನಗಂಡು, ಅದರಿಂದ ಉತ್ತೇಜಿತರಾಗಿ ಚಳವಳಿ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

ಡಿಎಸ್ಸೆಸ್ ರಾಜ್ಯ ಸಂಚಾಲಕ ಎಚ್.ಮಲ್ಲೇಶ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಸಿ.ಬಸವರಾಜ, ಡಿಎಸ್ಸೆಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ, ಕಾರ್ಮಿಕ ಮುಖಂಡ ಕೆ.ಎಚ್‌.ಆನಂದರಾಜ, ತುಪ್ಪದಹಳ್ಳಿ ಹನುಮಂತಪ್ಪ, ಬಿಎಸ್ಪಿಯ ಯಶೋಧ, ಗಾಂಧಿ ನಗರ ಚಿದಾನಂದಪ್ಪ, ಮುಖಂಡರಾದ ಕತ್ತಲಗೆರೆ ತಿಪ್ಪಣ್ಣ, ರಾಘವೇಂದ್ರ ಕಡೇಮನಿ, ಟಿ.ರವಿಕುಮಾರ, ಚಂದ್ರಪ್ಪ ಬನ್ನಿಹಟ್ಟಿ, ಕೆಟಿಜೆ ನಗರ ರವಿ, ವೆಂಕಟೇಶ ಬಾಬು, ಎಚ್.ಸಿ.ಮಲ್ಲಪ್ಪ, ಎಚ್.ನಿಂಗಪ್ಪ ರಾಮನಗರ, ಕಂದಗಲ್ಲು ಚಂದ್ರಪ್ಪ, ಸತೀಶ ಅರವಿಂದ, ಪವಿತ್ರಾ ಸತೀಶ ಇತರರಿದ್ದರು.