ಸಾರಾಂಶ
ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ರಿಕ್ಷಾ ಮತ್ತು ಕಾರುಗಳಿಗೆ ಬಳಸುವ ಸಿಎನ್‌ಜಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲೆಯಲ್ಲಿ ರಿಕ್ಷಾ ಮತ್ತು ಕಾರುಗಳಿಗೆ ಬಳಸುವ ಸಿ.ಎನ್.ಜಿ. ಪೂರೈಕೆಯ ಸಮಸ್ಯೆಯನ್ನು ಬಗೆಹರಿಸುವಂತೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಪೆಟ್ರೋಲೀಯಂ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ವಾಹನಗಳಿಗೆ ಉಪಯೋಗಿಸುವ ಅನಿಲ ಸರಬರಾಜು ಕೊರತೆಯಿಂದ ಸಿಎನ್‌ಜಿ ಬಂಕ್‌ಗಳ ಎದುರು ನೂರಾರು ವಾಹನಗಳು ದಿನಗಟ್ಟಲೇ ಕಾಯುತ್ತಿರುವುದು ಕಂಡು ಬರುತ್ತದೆ. ಆಟೋರಿಕ್ಷಾ ಚಾಲಕರು - ಮಾಲಕರು ಬಡವರಾಗಿದ್ದು, ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ 8 ಸಿ.ಎನ್.ಜಿ. ಔಟ್‌ಲೆಟ್ ಗಳಿದ್ದು, ಎಲ್ಲ ವಿತರಣಾ ಸಂಸ್ಥೆಗಳಲ್ಲೂ ವಾಹನ ಚಾಲಕರು ಸರದಿಯಲ್ಲಿ ದಿನವಿಡೀ ಕಾಯುವ ಪರಿಸ್ಥಿತಿ ಇದೆ. ಹಿಂದೊಮ್ಮೆ ಇಂತಹುದೆ ಸಮಸ್ಯೆ ಉಂಟಾಗಿದ್ದು, ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹರಿಸಲಾಗಿತ್ತು. ಆದರೆ ಮತ್ತದೆ ಸಮಸ್ಯೆ ಎದುರಾಗಿದೆ. ಆದ್ದರಿಂದ ಕೇಂದ್ರ ಸಚಿವರು ತಕ್ಷಣ ಮಧ್ಯ ಪ್ರವೇಶಿಸಿ ವಿತರಣಾ ಕೇಂದ್ರಗಳಿಗೆ ಸಿ.ಎನ್.ಜಿ. ಸರಬರಾಜು ಮಾಡಲು ಆದೇಶ ನೀಡಬೇಕೆಂದು ಸಂಸದ ಕೋಟ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.