ಕರ್ನಾಟಕದ ರಾಜ್ಯಪಾಲರಾಗಿರುವ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಬಿ.ಎಸ್.ಎಫ್.ನ ವೀರಯೋಧ ಡೆಪ್ಯುಟಿ ಕಮಾಂಡರ್ ಸುಖ್ಬೀರ್ ಸಿಂಗ್ ಯಾದವ್ ಅವರ ಪತ್ನಿ ಡಾ. ಸುಧಾ ಯಾದವ್ ಅವರನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕರ್ನಾಟಕ ಲೋಕಭವನದಲ್ಲಿ ಭೇಟಿಯಾಗಿ ಶಾಲು ಹೊದಿಸಿ ಅಭಿನಂದಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕದ ರಾಜ್ಯಪಾಲರಾಗಿರುವ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಬಿ.ಎಸ್.ಎಫ್.ನ ವೀರಯೋಧ ಡೆಪ್ಯುಟಿ ಕಮಾಂಡರ್ ಸುಖ್ಬೀರ್ ಸಿಂಗ್ ಯಾದವ್ ಅವರ ಪತ್ನಿ ಡಾ. ಸುಧಾ ಯಾದವ್ ಅವರನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕರ್ನಾಟಕ ಲೋಕಭವನದಲ್ಲಿ ಭೇಟಿಯಾಗಿ ಶಾಲು ಹೊದಿಸಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಕೃಷ್ಣನೂರಾದ ಉಡುಪಿಗೆ ಭೇಟಿ ನೀಡುವಂತೆ ರಾಜ್ಯಪಾಲರನ್ನು ಆತ್ಮೀಯವಾಗಿ ಆಹ್ವಾನಿಸಿದ್ದು, ಆಹ್ವಾನವನ್ನು ಸ್ವೀಕರಿಸಿದ ರಾಜ್ಯಪಾಲರು ಉಡುಪಿಗೆ ಬರುವುದಾಗಿ ಸಮ್ಮತಿ ಸೂಚಿಸಿದ್ದಾರೆ ಎಂದು ಕೋಟ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ಕೋಟರೊಂದಿಗೆ ಹಿರಿಯರಾದ ಸಾಮರಸ್ಯ ವಾದಿರಾಜ್ ಅವರು ಉಪಸ್ಥಿತರಿದ್ದರು.ಹರಿಯಾಣ ಮೂಲದ ಡಾ. ಸುಧಾ ಯಾದವ್ ಅವರು ಪತಿಯ ವೀರಮರಣದ ಬಳಿಕ ಸಾರ್ವಜನಿಕ ಜೀವನ ಪ್ರವೇಶಿಸಿ, ಮಹೇಂದ್ರಗಢ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿ ಹಾಗೂ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯೆಯಾಗಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಹಿಂದುಳಿದ ವರ್ಗದ ಯಾದವ ಸಮುದಾಯದಿಂದ ಬೆಳೆದು ಬಂದು, ತಮ್ಮ ಅನುಭವ ಮತ್ತು ಸೇವೆಯ ಮೂಲಕ ಗುರುತಿಸಿಕೊಂಡಿರುವ 61ರ ಹರೆಯದ ಅವರು ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಕೋಟ ಹೇಳಿದ್ದಾರೆ.