ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಅವರನ್ನು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಂಬೈಯಲ್ಲಿ ಭೇಟಿ ಮಾಡಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಬೇಕಾದ ಅನಿವಾರ್ಯತೆ ವಿವರಿಸಿ ಸಹಕಾರ ಕೋರಿದರು.

ಉಡುಪಿ: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಅವರನ್ನು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಂಬೈಯಲ್ಲಿ ಭೇಟಿ ಮಾಡಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಬೇಕಾದ ಅನಿವಾರ್ಯತೆ ವಿವರಿಸಿ ಸಹಕಾರ ಕೋರಿದರು.

ದಿ. ಜಾರ್ಜ್ ಫೆರ್ನಾಂಡಿಸ್ ಮೂಲಕ ಕರಾವಳಿ ಪ್ರಯಾಣಿಕರ ಜೀವನಾಡಿಯಾಗಿ ರೂಪುಗೊಂಡ ಕೊಂಕಣ ರೈಲ್ವೆ ಆರ್ಥಿಕ ಮುಗ್ಗಟ್ಟಿನ ಸಂಕಷ್ಟದಲ್ಲಿದೆ. ಸುಮಾರು 750 ಕಿ.ಮೀ ಉದ್ದದ ಕೊಂಕಣ ರೈಲ್ವೆಯ ಮಾರ್ಗವನ್ನು ಅಭಿವೃದ್ಧಿಪಡಿಸಲು ಹಾಗೂ ಭವಿಷ್ಯದ ಸಂಚಾರ ಬೆಳವಣಿಗೆಯ ಸಾಮರ್ಥ್ಯ ಹೆಚ್ಚಿಸಲು ಇಡೀ ಮಾರ್ಗವನ್ನು ದ್ವಿಗುಣಗೊಳಿಸುವುದು ಅನಿವಾರ್ಯವಾಗಿದೆ. ಒಂದು ಅಂದಾಜಿನ ಪ್ರಕಾರ ಮಾರ್ಗದ ಹಳಿಗಳನ್ನು ದ್ವಿಗುಣಗೊಳಿಸುವುದು ಮತ್ತು ತುಂಬಾ ಅವ್ಯವಸ್ಥೆಯಲ್ಲಿರುವ ರೈಲ್ವೆ ನಿಲ್ದಾಣಗಳನ್ನು ಉತ್ತಮವಾಗಿ ನಿರ್ಮಾಣ ಮಾಡಲು 40,000 ಕೋಟಿ ರುಪಾಯಿಗಳ ಅಗತ್ಯವಿದೆ, ಇಷ್ಟು ಹಣವನ್ನು ಭರಿಸಲು ಕೊಂಕಣ ರೈಲ್ವೆಯ ಆರ್ಥಿಕ ಸ್ಥಿತಿ ಸಹಕಾರಿಯಾಗಿಲ್ಲ. ಕೊಂಕಣ ರೈಲ್ವೆ ಹಾದುಹೋಗುವ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಶೇರನ್ನು ಬಿಟ್ಟುಕೊಟ್ಟರೆ ವಿಲೀನಗೊಳಿಸಬಹುದು ಎಂದು ಕೇಂದ್ರ ಸಚಿವರು ಲೋಕಸಭೆಯಲ್ಲಿ ಉಲ್ಲೇಖಿಸಿದ್ದನ್ನು ಸಂಸದ ಕೋಟ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಗಮನಕ್ಕೆ ತಂದರು.ಈ ಬಗ್ಗೆ ಗೋವಾ ಮತ್ತು ಕೇರಳ ಸರ್ಕಾರಗಳು ವಿಲೀನಕ್ಕೆ ಸಹಮತ ವ್ಯಕ್ತಪಡಿಸಿದ್ದು, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರೈಲ್ವೆ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ತಮ್ಮ ನೇತೃತ್ವದ ಮಹಾರಾಷ್ಟ್ರ ಸರ್ಕಾರವೂ ವಿಲೀನಕ್ಕೆ ಸಹಮತ ವ್ಯಕ್ತಪಡಿಸಿದರೆ ಮುಂದಿನ ದಿನಗಳಲ್ಲಿ ಕೊಂಕಣ ಮಾರ್ಗವು ದ್ವಿಪಥವಾಗುವುದಲ್ಲದೆ ಇತರ ಅಭಿವೃದ್ಧಿಗಾಗಿ ಕರಾವಳಿ ರಾಜ್ಯಗಳ ಜನಪ್ರತಿನಿಧಿಗಳು ಕೇಂದ್ರವನ್ನು ಮನವಿ ಮಾಡಬಹುದಾಗಿದೆ ಎಂದು ವಿವರಿಸಿದರು. ಸಂಸದ ಕೋಟಾರವರ ಪ್ರಸ್ತಾವನೆಯ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಇದೊಂದು ಬಹು ಮುಖ್ಯ ವಿಚಾರವಾಗಿದ್ದು, ಕೊಂಕಣ ರೈಲ್ವೆ ಮಾರ್ಗದ ಪ್ರಯಾಣಿಕರ ಹಿತ ದೃಷ್ಟಿಯಿಂದ ಸಹಮತದ ಬಗ್ಗೆ ಕೂಡಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು. ಲೋಕಸಭಾ ಸದಸ್ಯ ಕೋಟ ಜೊತೆ ಮಹಾರಾಷ್ಟ್ರದ ಚಂದಗಡ್ ಮತಕ್ಷೇತ್ರದ ಶಾಸಕ ಶಿವಾಜಿ ಪಾಟೀಲ್, ನ್ಯೂಮುಂಬೈ ಮಹಾನಗರ ಪಾಲಿಕೆ ಸದಸ್ಯ ಸಂತೋಷ ಶೆಟ್ಟಿ, ಕುಂದಾಪುರ ರೈಲ್ವೆ ಬಳಕೆದಾರರ ಸಂಘದ ಗೌತಮ್ ಶೆಟ್ಟಿ ಮತ್ತು ಸುನಿಲ್ ಪೂಜಾರಿ ಉಪಸ್ಥಿತರಿದ್ದರು.