ಸಾರಾಂಶ
ಕನ್ನಡಪ್ರಭ ವಾರ್ತೆ ಕೋಟ
ಗಿಡ ನೆಡುವ ಕಾಯಕ ಅತ್ಯಂತ ಪ್ರಶಂನೀಯ. ಅದು ನಿರಂತರವಾಗಿಸುವ ಯೋಚನೆ, ಯೋಜನೆ ಎಲ್ಲರಿಗೂ ಮಾದರಿ ಕಾರ್ಯವಾಗಿದೆ ಎಂದು ಕೋಟತಟ್ಟು ಗ್ರಾ.ಪಂ. ಸದಸ್ಯ ಪ್ರಕಾಶ್ ಹಂದಟ್ಟು ಹೇಳಿದರು.ಅವರು ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸುವರ್ಣ ಎಂಟರ್‌ಪ್ರೈಸಸ್ ಬ್ರಹ್ಮಾವರ, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಸಮುದ್ಯತಾ ಗ್ರೂಪ್ಸ್ ಕೋಟ ಸಹಯೋಗದೊಂದಿಗೆ ಹಂದಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ಕೋಟ ಇವರ ಸಂಯೋಜನೆಯೊಂದಿಗೆ ೨೧೧ನೇ ಪರಿಸರಸ್ನೇಹಿ ಅಭಿಯಾನ ಮೂರು ತಿಂಗಳ ಕಾಲ ನಡೆಯುವ ‘ಹಸಿರು ಜೀವ ಯೋಜನೆ’ಯಲ್ಲಿ ಗಿಡ ವಿತರಿಸಿ ಮಾತನಾಡಿದರು.
ಹಂದಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಜಾನಕಿ ಹಂದೆ ಮಾತನಾಡಿ, ಪ್ರತಿ ವರ್ಷ ಊರು ಕೇರಿಗಳಲ್ಲಿ ಗಿಡವನ್ನು ಕೊಂಡ್ಯೊಯ್ದು ಅಲ್ಲಿ ಪರಿಸರಸ್ನೇಹಿ ಕಾರ್ಯಕ್ರಮ ಆಚರಿಸುವ ಪಂಚವರ್ಣದ ಸಾಮಾಜಿಕ ಕಾರ್ಯ ಇತರರಿಗೆ ಸ್ಫೂರ್ತಿಯಾಗಿದೆ. ಹಸಿರಿದ್ದರೆ ಉಸಿರು ಉಳಿಯುತ್ತದೆ ಅದನ್ನು ಪ್ರತಿಯೊಬ್ಬರು ಚಾಚು ತಪ್ಪದೆ ಪಾಲಿಸುವಂತೆ ಕರೆ ಇತ್ತರು.ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಮೆಸ್ಕಾಂನ ನಿವೃತ್ತ ಸಿಬ್ಬಂದಿ ಬಸವ ಪೂಜಾರಿ ಅವರಿಗೆ ಗಿಡ ವಿತರಿಸಲಾಯಿತು. ಅಲ್ಲದೆ ಪರಿಸರದ ಸಾಕಷ್ಟು ಮನೆಗಳಿಗೆ ತೆರಳಿ ಗಿಡ ವಿತರಿಸಿ ಪರಿಸರ ಜಾಗೃತಿ ಮಾಡಲಾಯಿತು.
ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಹಂದಟ್ಟು ಮಹಿಳಾ ಬಳಗ ಕೋಟ ಅಧ್ಯಕ್ಷೆ ರತ್ನಾ ಪೂಜಾರಿ, ಪಂಚವರ್ಣದ ಸಂಚಾಲಕ ಅಮೃತ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.ಪಂಚವರ್ಣ ಮಹಿಳಾ ಮಂಡಲ ಉಪಾಧ್ಯಕ್ಷೆ ಪುಷ್ಪಾ ಕೆ. ಹಂದಟ್ಟು ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಮಹಿಳಾ ಮಂಡಲದ ಪ್ರಧಾನ ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು. ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.