ಸಾರಾಂಶ
ಚಿಕ್ಕಮಗಳೂರು ಜೀವ ಹಾನಿ, ಬೆಳೆ ಹಾನಿ ಜೊತೆಗೆ ಭಯಭೀತಿ ನಿಯಂತ್ರಣ ಮಾಡಲು ಚಿಕ್ಕಮಗಳೂರು ಜಿಲ್ಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಶಾಶ್ವತ ಕಾರ್ಯ ಯೋಜನೆ ರೂಪಿಸುವುದಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಭರವಸೆ ನೀಡಿರುವುದಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿ ಮಾಡಿ ಮಾಹಿತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜೀವ ಹಾನಿ, ಬೆಳೆ ಹಾನಿ ಜೊತೆಗೆ ಭಯಭೀತಿ ನಿಯಂತ್ರಣ ಮಾಡಲು ಚಿಕ್ಕಮಗಳೂರು ಜಿಲ್ಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಶಾಶ್ವತ ಕಾರ್ಯ ಯೋಜನೆ ರೂಪಿಸುವುದಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಭರವಸೆ ನೀಡಿರುವುದಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಆನೆ ದಾಳಿಯಿಂದ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಬೆಳೆ ಹಾನಿ, ಜೀವ ಹಾನಿಗಳ ಬಗ್ಗೆ ವಿವರವಾದ ಮಾಹಿತಿ ಹಂಚಿಕೊಂಡಿದ್ದೇನೆ. ಸಚಿವರು ಮಾಹಿತಿ ಆಲಿಸಿದ ನಂತರ ಸಕರಾತ್ಮಕವಾಗಿ ಸ್ಪಂದಿಸಿ ದ್ದಾರೆ ಎಂದು ಅವರು ನೀಡಿರುವ ಹೇಳಿಕೆಯಲ್ಲಿ ವಿವರಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ, ಶೃಂಗೇರಿ, ಚಿಕ್ಕಮಗಳೂರು ತಾಲೂಕಿನ ವಿವಿಧ ಕಡೆಗಳಲ್ಲಿ ಆನೆ ದಾಳಿಯಿಂದ ಐವರು ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಲ್ಲೇ ಬನ್ನೂರಿನ ಅನಿತಾ, ಶೃಂಗೇರಿಯ ಸುಬ್ಬೇಗೌಡ ಸೇರಿದಂತೆ ಹಲವರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಆನೆ ದಾಳಿಯಿಂದ ಹಳ್ಳಿಗಳ ಜನರು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಲು ಕಷ್ಟ ವಾಗುತ್ತಿದೆ. ಆತಂಕಗೊಂಡಿರುವ ಜನರು ನಿತ್ಯ ಭೀತಿಯಿಂದಲೇ ಬದುಕು ಸಾಗಿಸುತ್ತಿದ್ದಾರೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾಗಿ ಮಾಹಿತಿ ನೀಡಿದ್ದಾರೆ.ಜಿಲ್ಲೆಯ ಜನರು ಭಯಭೀತರಾಗಿ ಮನೆಗಳಿಂದ ಹೊರ ಹೊರಡಲು ಹಿಂದೆ ಮುಂದೆ ನೋಡುವಂತ ಸ್ಥಿತಿ ನಿರ್ಮಾಣಗೊಂಡಿದೆ. ಬೆಳೆ ಹಾನಿ, ಪ್ರಾಣ ಹಾನಿ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಆನೆ ದೊಡ್ಡಿ ನಿರ್ಮಾಣದಂತ ಯೋಜನೆಗಳನ್ನು ಜಂಟಿಯಾಗಿ ರೂಪಿಸಬೇಕು ಎಂದು ತಾವು ಮಾಡಿದ್ದ ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.ಸಮಸ್ಯೆ ಆಲಿಸಿದ ಸಚಿವ ಭೂಪೇಂದ್ರ ಯಾದವ್ ಅವರು, ಈ ಬಗ್ಗೆ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೂಲಕ ವರದಿ ಪಡೆದು, ಕಾರ್ಯ ಯೋಜನೆ ರೂಪಿಸಲಾಗುತ್ತದೆ. ಆನೆಗಳ ದಾಳಿ ಮತ್ತು ಅವುಗಳಿಂದ ಸಂಭವಿಸುವ ಯಾವುದೇ ಹಾನಿಗಳನ್ನು ಶಾಶ್ವತವಾಗಿ ಪರಿಹರಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.