ಸಾರಾಂಶ
ಬಳ್ಳಾರಿ: ನಗರದ ಆರಾಧ್ಯ ದೈವ ಕೋಟೆ ಮಲ್ಲೇಶ್ವರಸ್ವಾಮಿಯ ಮಹಾರಥೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಸಂಜೆ 5 ಗಂಟೆಗೆ ತೇರುಬೀದಿಯಲ್ಲಿ ರಥಕ್ಕೆ ವಿವಿಧ ಪೂಜೆ ವಿಧಾನಗಳು ಜರುಗಿದ ಬಳಿಕ ಮಹಾರಥೋತ್ಸವಕ್ಕೆ ಚಾಲನೆ ದೊರೆಯಿತು. ತೇರುಬೀದಿಯಿಂದ ಶುರುಗೊಂಡು ಬ್ರೂಸ್‌ಪೇಟೆ ಠಾಣೆ ವೃತ್ತ, ನೀಲಕಂಠೇಶ್ವರಸ್ವಾಮಿ ದೇವಸ್ಥಾನ ಮಾರ್ಗದ ಮೂಲಕ ಕಣೇಕಲ್ ಬಸ್ ನಿಲ್ದಾಣದಲ್ಲಿರುವ ಎದುರು ಬಸವಣ್ಣನವರೆಗೆ ರಥವನ್ನು ಭಕ್ತರು ಹರಹರ ಮಹಾದೇವ ಎಂಬ ಜಯಘೋಷಗಳ ನಡುವೆ ಎಳೆದು ತಂದರು. ಡೊಳ್ಳುಕುಣಿತ, ಗೊರವರ ಕುಣಿತ, ಗೊಂಬೆ ಕುಣಿತ, ಮಂಗಳ ವಾದ್ಯಗಳ ತಂಡಗಳು ಪಾಲ್ಗೊಂಡು ರಥೋತ್ಸವಕ್ಕೆ ಮೆರಗು ತಂದವು. ಭಕ್ತ ಸಮೂಹ ರಥೋತ್ಸವಕ್ಕೆ ಹೂವುಹಣ್ಣು ಸಮರ್ಪಿಸಿದರು.ಎದುರು ಬಸವಣ್ಣನಿಗೆ ಪೂಜೆ ಸಲ್ಲಿಸಿದ ಬಳಿಕ ಮತ್ತೆ ರಥೋತ್ಸವ ತಿರುಗಿ ತೇರುಬೀದಿಯ ಮಾರ್ಗದಲ್ಲಿ ಬಂದು ನಿರ್ದಿಷ್ಟ ಸ್ಥಳದಲ್ಲಿ ನಿಂತಿತು. ರಥೋತ್ಸವ ಅಂಗವಾಗಿ ಬುಧವಾರ ಬೆಳಗಿನಜಾವ 4 ಗಂಟೆಗೆ ನಗರದ ತೇರುಬೀದಿ ಪ್ರದೇಶದಲ್ಲಿನ ರಥಕ್ಕೆ ಪೂಜೆ ಸಲ್ಲಿಸಿ, ಬ್ರಹ್ಮರಥೋತ್ಸವ (ಮಡಿತೇರು) ಎಳೆಯಲಾಯಿತು.
ಸಾವಿರಾರು ಭಕ್ತರು ಮಡಿತೇರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತಗೊಂಡರು. ಬೆಳಗಿನಜಾವದಿಂದಲೂ ಮಧ್ಯಾಹ್ನದವರೆಗೆ ತೇರುಬೀದಿಯಲ್ಲಿರುವ ಮಹಾರಥಕ್ಕೆ ಪೂಜೆ ಸಲ್ಲಿಸಿ, ಹೂವು, ಹಣ್ಣು, ಕಾಯಿ, ಕರ್ಪುರ ಮಾಡಿಸುವ ದೃಶ್ಯಗಳು ಕಂಡು ಬಂದವು.ರಥೋತ್ಸವ ಹಿನ್ನೆಲೆಯಲ್ಲಿ ಕೋಟೆ ಮಲ್ಲೇಶ್ವರಸ್ವಾಮಿಗೆ ಪಂಚಾಭಿಷೇಕ, ರುದ್ರಾಭಿಷೇಕ ಹಾಗೂ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಿದವು. ಮಲ್ಲೇಶ್ವರಸ್ವಾಮಿ ಮೂರ್ತಿಯನ್ನು ವಿವಿಧ ಪುಷ್ಪಗಳು ಹಾಗೂ ಚಿನ್ನದ ಆಭರಣಗಳಿಂದ ಅಲಂಕೃತಗೊಳಿಸಲಾಗಿತ್ತು.
ದೇವಸ್ಥಾನದ ಬಳಿಕ ಭಕ್ತರು ಬೆಳಗಿನಿಂದಲೇ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಜಿಲ್ಲೆ, ಹೊರ ಜಿಲ್ಲೆಗಳ ಭಕ್ತರು ಆಗಮಿಸಿ ತಮ್ಮ ಆರಾಧ್ಯ ದೈವನಿಗೆ ಭಕ್ತಿ ಸಮರ್ಪಿಸಿ, ಧನ್ಯತಾಭಾವ ಮೆರೆದರು. ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಉಚಿತ ದರ್ಶನಕ್ಕೂ ಟಿಕೆಟ್ ಮಾಡಲಾಗಿದೆ ಎಂಬ ಆರೋಪಗಳು ದೇವಸ್ಥಾನಗಳ ಬಳಿ ಕೇಳಿ ಬಂದವು. ಭಕ್ತರನ್ನು ನಿಯಂತ್ರಿಸಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.ನಗರ ಶಾಸಕ ನಾರಾ ಭರತ್ ರೆಡ್ಡಿ, ಮೇಯರ್ ಮುಲ್ಲಂಗಿ ನಂದೀಶ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಪಾಲಿಕೆ ಸದಸ್ಯರು ಹಾಗೂ ನಗರದ ಗಣ್ಯರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ವಿಶೇಷವೆಂದರೆ ಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನವು ಕೋಟೆ ಪ್ರದೇಶದಲ್ಲಿದ್ದು, ರಥೋತ್ಸವವು ಬ್ರಾಹ್ಮಣಬೀದಿಯ ಬಳಿಯ ತೇರುಬೀದಿಯಲ್ಲಿ ಜರುಗುತ್ತದೆ. ಒಂದು ವಾರಗಳ ಕಾಲ ಕೋಟೆಯಲ್ಲಿರುವ ದೇವಸ್ಥಾನ ಬಳಿ ಜಾತ್ರೆ ಇರಲಿದೆ. ಕನಕ ದುರ್ಗಮ್ಮ ಬಳ್ಳಾರಿಯ ಅಧಿದೇವತೆಯಾದರೆ, ಕೋಟೆ ಮಲ್ಲೇಶ್ವರಸ್ವಾಮಿ ಬಳ್ಳಾರಿಯ ಆರಾಧ್ಯದೈವವಾಗಿದ್ದಾರೆ.