ಮೂಲ ಸೌಕರ್ಯಗಳಿಂದ ವಂಚಿತಗೊಂಡ ಕೊಟೆಕಲ್ ಗ್ರಾಮ

| Published : Feb 15 2024, 01:17 AM IST

ಸಾರಾಂಶ

ಕವಿತಾಳದ ಅಮೀನಗಡ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕೊಟೆಕಲ್ ಗ್ರಾಮದಲ್ಲಿ ಅಂದಾಜು 2 ಸಾವಿರ ಜನ ಸಂಖ್ಯೆಯಿದ್ದರೂ ರಸ್ತೆ, ವಿದ್ಯುತ್, ಚರಂಡಿ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರ ಪರದಾಡುವ ಪರಿಸ್ಥಿನಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಕವಿತಾಳ

ಸಮೀಪದ ಅಮೀನಗಡ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕೊಟೆಕಲ್ ಗ್ರಾಮವು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸುತ್ತಲೇ ಜೀವನ ನಡೆಸುವಂತಾಗಿದೆ.

ಗ್ರಾಮದಲ್ಲಿ ಅಂದಾಜು ಎರಡು ಸಾವಿರ ಜನಸಂಖ್ಯೆ ಇದೆ, ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರಿದ್ದು ಚರಂಡಿ ವ್ಯವಸ್ಥೆ, ರಸ್ತೆ ಮತ್ತು ವಿಶೇಷವಾಗಿ ವಿದ್ಯುತ್ ಕಂಬಗಳು ಇಲ್ಲದೆ ಕೆಲವು ಮನೆಗಳು ಕತ್ತಲಲ್ಲಿ ಮುಳುಗಿವೆ.

ಗ್ರಾಮದ ಕೆಳಗಡೆ ಓಣಿಯಲ್ಲಿ ವಿದ್ಯುತ್ ಕಂಬಗಳು ದೂರ ದೂರದಲ್ಲಿದ್ದು, ಸುಮಾರು 200-300 ಮೀ. ದೂರದಿಂದ ಮನೆಗಳಿಗೆ ಸರ್ವೀಸ್ ತಂತಿ ಎಳೆದುಕೊಂಡು ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಹೀಗಾಗಿ ಎಲ್ಲೆಂದರಲ್ಲಿ ತಂತಿಗಳು ಜೋತು ಬಿದ್ದಿವೆ.

ಅರಣ್ಯ ಇಲಾಖೆ ಅಧಿಕಾರಿಗಳು ಕೆಳಗಡೆ ಓಣಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಮತ್ತು ವಿದ್ಯುತ್ ಕಂಬ ಅಳವಡಿಸಲು ತಕರಾರು ಮಾಡುತ್ತಿದ್ದು, ಕೆಲವು ಕುಟುಂಬಗಳು ಕತ್ತಲಲ್ಲಿಯೇ ಕಾಲ ಕಳೆಯುತ್ತಿವೆ ಎಂದು ಗ್ರಾಮದ ಹನುಮಂತ್ರಯ ಆರೋಪಿಸಿದರು.

ಸುಮಾರು ವರ್ಷದಿಂದ ನಾವು ಇಲ್ಲಿಯೇ ವಾಸಿಸುತ್ತಿದ್ದು ಎಷ್ಟೋ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ಕಳೆದ ಒಂದು ವರ್ಷದಿಂದ ಮನೆ ಕಟ್ಟಿಕೊಳ್ಳಲು ಪರದಾಡುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ. ಈ ಕುರಿತು ಈಚೆಗೆ ಶಾಸಕರ ನೇತೃತ್ವದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿಯೂ ಮನವಿ ಸಲ್ಲಿಸಲಾಗಿದೆ. ಈಗಲಾದರೂ ಅಧಿಕಾರಿಗಳು ಅವಕಾಶ ನೀಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಆಂಜನೇಯ ನಾಯಕ ಹೇಳಿದರು.

ಅರಣ್ಯ ಇಲಾಖೆ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಈ ಜಾಗಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದರೂ ಯಾರೊಬ್ಬರೂ ದಾಖಲೆ ನೀಡಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದಂತ ವಿಷಯ. ಲಕ್ಷಾಂತರ ರು. ವೆಚ್ಚ ಮಾಡಿ ಮನೆ ನಿರ್ಮಿಸಿಕೊಂಡರೆ ಅದನ್ನು ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾದರೆ ಬಡ ಕುಟುಂಬಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಕಾರಣ ಸದ್ಯ ಮನೆ ನಿರ್ಮಿಸಿಕೊಳ್ಳಲು ಮುಂದಾಗಬಾರದು ಎಂದು ವಲಯ ಅರಣ್ಯ ಅಧಿಕಾರಿ ಸುರೇಶ ತಿಳಿಸಿದರು.