ಕೋಟೆಕಾರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ಕೆಲ ಅಧಿಕಾರಿಗಳ ಗೈರಿಗೆ ಅಸಮಾಧಾನ

| Published : Jul 03 2025, 11:49 PM IST / Updated: Jul 03 2025, 11:50 PM IST

ಸಾರಾಂಶ

ಕೋಟೆಕಾರು ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಯಾವ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂಬ ಗೊಂದಲದ ನಡುವೆ ಜು.27ರಂದು ರದ್ದುಗೊಂಡಿದ್ದ ಸಾಮಾನ್ಯ ಸಭೆ ಬುಧವಾರ ದಿವ್ಯ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಕೋಟೆಕಾರು ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಯಾವ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂಬ ಗೊಂದಲದ ನಡುವೆ ಜು.27ರಂದು ರದ್ದುಗೊಂಡಿದ್ದ ಸಾಮಾನ್ಯ ಸಭೆ ಬುಧವಾರ ದಿವ್ಯ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಆದರೆ ಕೆಲವೊಂದು ಇಲಾಖೆ ಅಧಿಕಾರಿಗಳು ಮಾತ್ರ ಗೈರಾಗಿದ್ದು ಇದು ಕೆಲವು ಕೌನ್ಸಿಲರ್‌ಗಳ ಅಸಮಾಧಾನಕ್ಕೆ ಕಾರಣವಾಯಿತು.ಈ ಬಗ್ಗೆ ಮಾತನಾಡಿದ ಕೌನ್ಸಿಲರ್ ಸುಜೀತ್ ಮಾಡೂರು, ಕಳೆದ ಸಾಮಾನ್ಯ ಸಭೆಯ ನೋಟೀಸ್ ಹೋಗಿಲ್ಲ, ಈ ಸಲ ಕಳಿಸಿದ್ದೀರಿ. ಮುಖ್ಯ ಅಧಿಕಾರಿ ನಿಮ್ಮ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಸಭೆಯ ಕುರಿತಾಗಿ ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಅಧಿಕಾರಿಗೆ ತಿಳಿಸಿಲ್ಲ. ಸಾಮಾನ್ಯ ಸಭೆಯ ನಿರ್ಣಯ ಪಾಲಿಸಿಲ್ಲ, ಸಾಮಾನ್ಯ ಸಭೆ ರದ್ಧತಿಯ ನಿರ್ಣಯ ಪುಸ್ತಕದಲ್ಲಿ ಎಲ್ಲೂ ಉಲ್ಲೇಖ ಮಾಡಿಲ್ಲ. ಹಾಗಿದ್ದಲ್ಲಿ ನಮ್ಮ ಸಹಿ ತೆಗೆದುಕೊಂಡು ನೀವು ಕಳಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು..

ಕೌನ್ಸಿಲರ್‌ ಅಹಮ್ಮದ್ ಅಜ್ಜಿನಡ್ಕ ಮಾತನಾಡಿ, ಮಾಹಿತಿ ಕೊಡುವ ಅಧಿಕಾರಿಗಳೇ ಸಾಮಾನ್ಯ ಸಭೆ ನಡೆದಾಗ ಬರುವುದಿಲ್ಲ. ಇದಕ್ಕೆ ಅಧ್ಯಕ್ಷರು ಯಾರೆಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂಬ ಬಗ್ಗೆ ಸ್ಪಷ್ಟವಾದ ನಿಲುವು ನೀಡಬೇಕು‌. ಇಲ್ಲವಾದಲ್ಲಿ ಕಳೆದ ಬಾರಿ ಇದ್ದ ಅಧಿಕಾರಿಗಳು ಈ ಬಾರಿ‌ ಇರುವುದಿಲ್ಲ ಇದಕ್ಕೆ ತಾರ್ಕಿಕ ಅಂತ್ಯ ಇರುವುದಿಲ್ಲ ಎಂದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಕೌನ್ಸಿಲರ್ ಸುಜೀತ್ ಮಾಡೂರು ರಾಜ್ಯ ಹೆದ್ದಾರಿ ಸಮಸ್ಯೆಗೆ ಲೋಕೋಪಯೋಗಿ ಇಲಾಖೆ , ರಾಷ್ಟ್ರೀಯ ಹೆದ್ದಾರಿಗೆ ಎನ್ ಎಚ್ ಅಧಿಕಾರಿಗಳು ಹಾಗಾಗಿ ಆಯಾ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಗೆ ಅವರವರಿಗೆ ಸಂಬಂಧಿಸಿದ ಅಧಿಕಾರಿಗಳು ಇರಬೇಕು ಎಲ್ಲ ಸಮಸ್ಯೆಯನ್ನು ಪಂಚಾಯತಿ ಸರಿಪಡಿಸಲು ಸಾಧ್ಯವಿಲ್ಲ. ಕೋಟೆಕಾರ್ ಪಟ್ಟಣ ಪಂಚಾಯತಿಯಲ್ಲಿಯೇ ಕಂದಾಯ ಇಲಾಖೆಗೆ ಸಂಬಂದಪಟ್ಟ ಗ್ರಾಮ‌ಲೆಕ್ಕಾಧಿಕಾರಿ ಕಚೇರಿ ಇದ್ದರೂ ಸಹ ಸಾಮಾನ್ಯ ಸಭೆ ನಡೆದಾಗ ಹಾಜರಾಗುವುದಿಲ್ಲ ಎಂದರೆ ಇದು ಅಧಿಕಾರಿಗಳ ದರ್ಪಕ್ಕೆ ಸಾಕ್ಷಿಯಾಗಿದೆ‌ ಎಂದರು.ಈ ಬಗ್ಗೆ ಮಾತನಾಡಿದ ಅಧ್ಯಕ್ಷೆ ದಿವ್ಯ ಶೆಟ್ಟಿ , ಗೈರಾದ ಅಧಿಕಾರಿಗಳ‌ ಪಟ್ಟಿ ಮಾಡಿ ಪಂಚಾಯತಿಯಲ್ಲಿ ಒಂದು ನಿಯೋಗ ಮಾಡಿ ಅದನ್ನು ಜಿಲ್ಲಾಧಿಕಾರಿಗೆ ನೀಡುವ ವ್ಯವಸ್ಥೆ ಮಾಡೋಣ ಎಂದರು.

ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.