ಸಾರಾಂಶ
ಕೋಟೆಕಾರು ಪ.ಪಂ.ನಲ್ಲಿ ಬುಧವಾರ ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ನಿವೇಶನಗಳನ್ನು ನೀಡದ ಪಟ್ಟಣ ಪಂಚಾಯತ್ ಅಧಿಕಾರಿಗಳ ವಿರುದ್ಧ ಕೌನ್ಸಿಲರ್ ಸುಜಿತ್ ಮಾಡೂರು ಆಕ್ಷೇಪ ವ್ಯಕ್ತಪಡಿಸಿದರು.
ಉಳ್ಳಾಲ: 2013 ರಿಂದ ನಿವೇಶನ ರಹಿತರು ಅರ್ಜಿಗಳನ್ನು ನೀಡುತ್ತ ಬಂದಿದ್ದರೂ, ಈವರೆಗೆ ನಿವೇಶನಗಳನ್ನು ನೀಡದ ಪಟ್ಟಣ ಪಂಚಾಯತ್ ಅಧಿಕಾರಿಗಳ ವಿರುದ್ಧ ಕೌನ್ಸಿಲರ್ ಸುಜಿತ್ ಮಾಡೂರು ಕೋಟೆಕಾರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟೆಕಾರು ಪ.ಪಂ.ನಲ್ಲಿ ಬುಧವಾರ ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು 2013ರಲ್ಲಿ ಪಂಚಾಯತಿ ಆಗಿದ್ದ ಸಂದರ್ಭದಲ್ಲಿ ಮನೆ ನಿವೇಶನಕ್ಕೆ ಒಂದು ಸಾವಿರಕ್ಕೂ ಅಧಿಕ ಜನ ಅರ್ಜಿ ಕೊಟ್ಟಿದ್ದಾರೆ. 2016ರಲ್ಲಿ ಪಟ್ಟಣ ಪಂಚಾಯತಿ ಆಗಿ ಮೇಲ್ದರ್ಜೆಯಾದ ನಂತರ ಮತ್ತೆ ಅರ್ಜಿ ಕೊಟ್ಟಿದ್ದಾರೆ ಅದರಲ್ಲಿ 400ಕ್ಕೂ ಅಧಿಕ ಜನ ಅರ್ಹರು ಎಂದು ಪಟ್ಟಿ ಮಾಡಲಾಯಿತು.ಆ ನಂತರ ಮತ್ತೊಮ್ಮೆ ಸರ್ಕಾರ ನಿವೇಶನ ರಹಿತರಿಗೆ ಮನೆ ನೀಡುವ ಬಗ್ಗೆ ಆದೇಶ ನೀಡಿದ್ದು ಮತ್ತೆ ಅರ್ಜಿ ಪಡೆಯಲಾಗಿದೆ. ಇದು ಅಂತ್ಯವಾಗುವವರೆಗೂ ಬಡವರಿಗೆ ಆಸೆ ತೋರಿಸುತ್ತಾ ಇರುವುದೇ ಅಥವಾ ಇದನ್ನು ವಿಲೇವಾರಿ ಮಾಡುವ ಬಗ್ಗೆ ಏನಾದರೂ ಆಲೋಚನೆ ಇದೆಯೇ ಎಂದು ಪ್ರಶ್ನಿಸಿದರು.ಸರ್ಕಾರಿ ಜಾಗ ಪಟ್ಟಣ ಪಂಚಾಯತಿ ಹೆಸರಿಗೆ ಆದ ಕೂಡಲೇ ಬಂದ ಅರ್ಜಿ ವಿಲೇವಾರಿ ಮಾಡಬಹುದು. ದೇವರ ಮನೆಯ ಹತ್ತಿರ ಇರುವ ಜಾಗ ಈಗಾಗಲೇ ಕೋರ್ಟ್ ಕೇಸ್ ನಲ್ಲಿ ನಡೆಯುತ್ತಿದೆ ಎಂದು ಮುಖ್ಯಾಧಿಕಾರಿ ಮಾಲಿನಿ ಪ್ರತಿಕ್ರಿಯಿಸಿದರು.ಗ್ರಾಮ ಲೆಕ್ಕಾಧಿಕಾರಿ ನವ್ಯ ಮಾತನಾಡಿ, ಎಲ್ಲ ಸರ್ಕಾರಿ ಜಮೀನುಗಳನ್ನು ಕಂದಾಯ ಇಲಾಖೆ ಕಾಯ್ದಿರಿಸುತ್ತದೆ. ಕಾಯ್ದಿರಿಸಿದ ಜಾಗಕ್ಕೆ ಯಾರಾದರೂ ಒಬ್ಬರು ಬಂದು ತಾತ್ಕಾಲಿಕ ತಡೆಯನ್ನು ಕಾನೂನು ಮುಖಾಂತರವೇ ಹಾಕುತ್ತಾರೆ. ಇದು ಹಿಡಿತದಲ್ಲಿ ಇರುವುದಿಲ್ಲ ಪಂಚಾಯತಿಗೆ ಸಂಬಂಧಿಸಿದ ಜಾಗ ಆದರೆ ಅರ್ಜಿ ಕೊಟ್ಟವರಿಗೆ ಜಾಗ ಕಾಯ್ದಿರಿಸಬಹುದು. ಅದು ಬಿಟ್ಟು ಕೇಸ್ ಹಾಕಬೇಡಿ ಅನ್ನುವ ಅಧಿಕಾರ ಅಧಿಕಾರಿಗಳಿಗೆ ಇಲ್ಲ ಎಂದರು.
ಘನ ತ್ಯಾಜ್ಯ ಹಾಗೂ ಎಸ್ ಟಿಪಿ ಬಿಟ್ಟು ವಸತಿ ಯೋಜನೆಗೆ ಬಡವರಿಗೆ ಜಾಗ ಕೊಡ ಬಾರದು ಎಂದು ಯಾರೂ ಕೋರ್ಟಿಗೆ ಹೋಗಿಲ್ಲ ಯಾವುದೇ ತರಹದ ತೊಂದರೆ ಇಲ್ಲದೇ ಇರುವ ಜಾಗವನ್ನು ಬಡವರ ನಿವೇಶನಕ್ಕೆ ನೀಡಬಹುದಲ್ಲವೇ ಎಂದು ಸುಜೀತ್ ಮಾಡೂರು ಹೇಳಿದರು.ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕಂದಾಯ ಅಧಿಕಾರಿ ಶ್ರೀನಾಥ್ ಉಪಸ್ಥಿತರಿದ್ದರು.