ಸಾರಾಂಶ
ಮಂಗಳೂರು : ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳನ್ನು ಮಂಗಳೂರು ನ್ಯಾಯಾಲಯಕ್ಕೆ ಗುರುವಾರ ಪೊಲೀಸರು ಹಾಜರುಪಡಿಸಿದ್ದಾರೆ. ಬಂಧಿತ ಇಬ್ಬರನ್ನು ನ್ಯಾಯಾಲಯ 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಬ್ಯಾಂಕ್ ದರೋಡೆ ಪ್ರಕರಣದ ಕಿಂಗ್ ಪಿನ್ ಮುರುಗಂಡಿ ದೇವರ್ ಹಾಗೂ ಸಹಚರ ರಾಜೇಂದ್ರನ್ ಇವರನ್ನು ತಮಿಳುನಾಡಿನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದರು.
ಅಲ್ಲಿನ ಕೋರ್ಟ್‌ಗೆ ಹಾಜರುಪಡಿಸಿ ಬಾಡಿ ವಾರಂಟ್ ಪಡೆದು ಮಂಗಳೂರಿಗೆ ಕರೆತಂದಿದ್ದರು. ಈಗ ಪ್ರಕರಣದ ತನಿಖಾಧಿಕಾರಿ ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ಮಂಗಳೂರಿನ 7ನೇ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿ, 15 ದಿನಗಳ ಪೊಲೀಸ್ ಕಸ್ಟಡಿ ಕೋರಿತ್ತು. ನ್ಯಾಯಾಲಯ ಫೆ.3ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.
ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿರುವ ಹಿನ್ನೆಲೆಯಲ್ಲಿ ತನಿಖಾ ತಂಡ ಕೋಟೆಕಾರು ಬ್ಯಾಂಕ್ ಹಾಗೂ ಸ್ಥಳೀಯವಾಗಿ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ. ಮೂರು ದಿನಗಳ ಹಿಂದೆ ಇದೇ ದರೋಡೆ ಪ್ರಕರಣದಲ್ಲಿ ಬಂಧಿತ ಆರೋಪಿ ಕಣ್ಣನ್‌ನನ್ನು ಸ್ಥಳ ಮಹಜರು ನಡೆಸುವ ವೇಳೆ ಪರಾರಿಗೆ ಯತ್ನಸಿದಾಗ ಪೊಲೀಸರು ಆತನ ಕಾಲಿಗೆ ಗುಂಡೇಟು ಹಾಕಿದ್ದರು. ಕಣ್ಣನ್ ಈಗ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗಡಿನಾಡ ಕ್ರಿಮಿನಲ್ ಸಾಥ್?ಗಡಿನಾಡಿನ ಕ್ರಿಮಿನಲ್ ಒಬ್ಬನಿಂದ ಕೋಟೆಕಾರು ಬ್ಯಾಂಕ್ ದರೋಡೆಗೆ ಸಾಥ್ ಇದೆಯೇ?ಮಂಗಳೂರು ಪೊಲೀಸರಿಗೆ ಸ್ಥಳೀಯನ ಕೈವಾಡದ ಬಗ್ಗೆ ಹೀಗೊಂದು ಮಾಹಿತಿ ಲಭಿಸಿದೆ. ಮುಂಬೈನಲ್ಲೇ ಇರುವ ಮಂಗಳೂರಿನ ಲೋಕಲ್ ಕ್ರಿಮಿನಲ್ ಈ ಕೃತ್ಯಕ್ಕೆ ಸಾಥ್ ನೀಡಿರುವುದಾಗಿ ಶಂಕಿಸಲಾಗಿದೆ. 2021ರಲ್ಲಿ ಮುಂಬೈ ಜೈಲಿನಲ್ಲಿ ಮುರುಗಂಡಿ ದೇವರ್‌ಗೆ ಮಂಗಳೂರು ಕ್ರಿಮಿನಲ್‌ನ ಪರಿಚಯವಾಗಿತ್ತು. ಮಂಗಳೂರಿನ ಕೇರಳ ಗಡಿ ಭಾಗದ ಕ್ರಿಮಿನಲ್ ಈ ಪರಿಚಯದ ಮಾಹಿತಿ ನೀಡಿದ್ದನು. ಆತನೇ ಮುಂಬೈನ ಧಾರಾವಿ ಟೀಂಗೆ ಕೋಟೆಕಾರು ಬ್ಯಾಂಕ್ ದರೋಡೆಯಲ್ಲಿ ಸಾಥ್ ನೀಡಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸುತ್ತಾರೆ.
ಬ್ಯಾಂಕ್ ದರೋಡೆ ಶಾಮೀಲಾದ ಸ್ಥಳೀಯರಿಗೆ ರಾಜಕೀಯ ಬೆಂಬಲ?ಬ್ಯಾಂಕ್ ದರೋಡೆಯಲ್ಲಿ ಸ್ಥಳೀಯರ ಕೈವಾಡವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಆರೋಪಿಸಿದ್ದಾರೆ.
ಗುರುವಾರ ಮಂಗಳೂರಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಈ ದರೋಡೆ ಪ್ರಕರಣದಲ್ಲಿ ಶೇ.ನೂರರಷ್ಟು ಸ್ಥಳೀಯರು ಇದ್ದಾರೆ. ಈಗ ಪೊಲೀಸರು ದರೋಡೆಕೋರರನ್ನು ಬಂಧಿಸಿದ್ದಾರೆ. ಆದರೆ ದರೋಡೆಗೆ ಯೋಜನೆ ರೂಪಿಸಿದವರನ್ನು, ಕುಮ್ಮಕ್ಕು ನೀಡಿದವರನ್ನು ಯಾರೋ ಬಚಾವ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದೆ, ನೈಜ ಆರೋಪಿಗಳನ್ನು ಬಯಲಿಗೆ ತನ್ನಿ, ದರೋಡೆಕೊರರಿಗೆ ರಾಜಕೀಯ ಬೆಂಬಲ ಇದೆ. ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಬೇರೆ ಪ್ರಕರಣಗಳಲ್ಲಿ ಭಾಗಿಯಾದವರು ದರೋಡೆ ಪ್ರಕರಣದಲ್ಲಿದ್ದಾರೆ ಎಂದು ಆರೋಪಿಸಿದರು.
ಕೋಟೆಕಾರು ಬ್ಯಾಂಕ್ ದರೋಡೆಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಆರೋಪಿಗಳ ಕೈವಾಡ ಇದೆ ಎಂದು ಆರೋಪಿಸಿರುವ ಶಾಸಕ ಡಾ.ಭರತ್ ಶೆಟ್ಟಿ, ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಭಾಗಿಯಾದ ಕ್ರಿಮಿನಲ್‌ಗಳು ಇದ್ದಾರೆ. ಈ ಬಗ್ಗೆ ನನಗೆ ಮೂಲಗಳ ಮಾಹಿತಿ ಬಂದಿದೆ, ಪೊಲೀಸರು ತನಿಖೆ ಮಾಡಲಿ ಎಂದಿದ್ದಾರೆ. ಮಂಗಳೂರು ಪೊಲೀಸರು ಮೂವರನ್ನು ಹಿಡಿದುಕೊಂಡು ಬಂದಿದ್ದಾರೆ ಅಷ್ಟೇ. ಈ ಮೂಲಕ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಸ್ಥಳೀಯ ವ್ಯಕ್ತಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿವೆ. ಇದರಲ್ಲಿ ದೊಡ್ಡ ಮಟ್ಟದ ಕೈವಾಡ ಇರುವ ಸಾಧ್ಯತೆ ಕಾಣುತ್ತಿದೆ. ಇದೇ ಬ್ಯಾಂಕಿಗೆ ಬರಲು, ಅಲ್ಲಿನ ರೂಟ್ ಮ್ಯಾಪ್ ಹೇಳಲು ಸ್ಥಳೀಯರ ನೆರವು ಇದೆ. ವಾಮಂಜೂರು ಗನ್ ಮಿಸ್ ಫೈರ್ ಪ್ರಕರಣವೂ ಇದಕ್ಕೆ ಲಿಂಕ್ ಆಗುತ್ತಿದೆ. ಹಾಗಾಗಿ ಕೋಟೆಕಾರು ಪ್ರಕರಣ ಹಾಗೂ ವಾಮಂಜೂರು ಮಿಸ್ ಫೈರ್ ಕೇಸಿಗೆ ಲಿಂಕ್ ಇದ್ದಂತಿದೆ ಎಂದರು.