ಕೋಟೇಶ್ವರ: ನವೀಕೃತ ವಿದ್ಯುತ್ ಚಿತಾಗಾರ ಲೋಕಾರ್ಪಣೆ

| Published : May 25 2025, 01:31 AM IST

ಸಾರಾಂಶ

ಉಡುಪಿ ಜಿಲ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕುಂದಾಪುರ ತಾ.ಪಂ. ಮತ್ತು ಕೋಟೇಶ್ವರ ಗ್ರಾ.ಪಂ.ಗಳ ನೇತೃತ್ವದಲ್ಲಿ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಸುಮಾರು 25 ವರ್ಷಗಳ ಹಿಂದಿನ ಹಿಂದೂ ರುದ್ರಭೂಮಿಯನ್ನು ಸುಮಾರು 1 ಕೋಟಿ ರು. ವೆಚ್ಚದಲ್ಲಿ ಆಧುನಿಕರಣಗೊಳಿಸಲಾಗಿದ್ದು, ಈ ವಿದ್ಯುತ್ ಚಿತಾಗಾರವನ್ನು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಉಡುಪಿ ಜಿಲ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕುಂದಾಪುರ ತಾ.ಪಂ. ಮತ್ತು ಕೋಟೇಶ್ವರ ಗ್ರಾ.ಪಂ.ಗಳ ನೇತೃತ್ವದಲ್ಲಿ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಸುಮಾರು 25 ವರ್ಷಗಳ ಹಿಂದಿನ ಹಿಂದೂ ರುದ್ರಭೂಮಿಯನ್ನು ಸುಮಾರು 1 ಕೋಟಿ ರು. ವೆಚ್ಚದಲ್ಲಿ ಆಧುನಿಕರಣಗೊಳಿಸಲಾಗಿದ್ದು, ಈ ವಿದ್ಯುತ್ ಚಿತಾಗಾರವನ್ನು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಈ ಚಿತಾಗಾರದ ಬಗ್ಗೆ ಪ್ರಚಾರವನ್ನು ಮತ್ತಷ್ಟು ಗ್ರಾಮೀಣ ಮಟ್ಟದಲ್ಲಿ ವಿಸ್ತರಿಸಬೇಕು. ಪಕ್ಷಾತೀತವಾಗಿ ಶೀಘ್ರದಲ್ಲಿ ಸಭೆ ಕರೆದು ಇದರ ಸದುಪಯೋಗದ ಬಗ್ಗೆ ಚರ್ಚಿಸಬೇಕಾಗಿದೆ ಎಂದರು.ಅಲ್ಲದೇ ಕೋಟೇಶ್ವರ ಹಿಂದೂ ರುದ್ರಭೂಮಿ ಸೇವಾ ಸಮಿತಿ ಹಾಗೂ ಅಂದಿನ ವಿಧಾನ ಪರಿಷತ್ ಸದಸ್ಯರಾಗಿದ್ದ ಕೆ.ಪ್ರತಾಪಚಂದ್ರ ಶೆಟ್ಟಿಯವರ ಹಾಗೂ ಸ್ಥಳೀಯ ಗ್ರಾ.ಪಂ. ಮುತುವರ್ಜಿಯ ಹೋರಾಟಕ್ಕೆ ಶಾಸಕರು ಶ್ಲಾಘಿಸಿದರು.ವೇದಿಕೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಮಂಜುನಾಥ್ ಭಂಡಾರಿ, ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ರಾಗಿಣಿ ದೇವಾಡಿಗ, ಹಿಂದೂ ರುದ್ರ ಭೂಮಿಯ ಸ್ಥಾಪಕಾ ಅಧ್ಯಕ್ಷ ಶಂಕರ್ ಕಾಮತ್, ಕೋಟೇಶ್ವರ ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು, ಬೀಜಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಜಿ. ಪೂಜಾರಿ, ಗೋಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ ಶೆಟ್ಟಿ, ಕುಂದಾಪುರ ನಗರ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರೋಸ್ತ ಉಪಸ್ಥಿತರಿದ್ದರು.

ಕೋಟೇಶ್ವರ ಗ್ರಾ.ಪಂ. ಪಿಡಿಒ ದಿನೇಶ್ ನಾಯ್ಕ್ ಸ್ವಾಗತಿಸಿದರು. ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.