ಸಾರಾಂಶ
ಶ್ರೀಪುತ್ತಿಗೆ ಮಠದ ಶ್ರೀ ಡಾ.ಸುಗುಣೇಂದ್ರತೀರ್ಥ ಶ್ರೀಪಾದರು
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಉಡುಪಿಯ ಶ್ರೀ ಪುತ್ತಿಗೆ ಮಠದ ಚತುರ್ಥ ಪರ್ಯಾಯ ಕಾಲ ನಿಮಿತ್ತ ಆತ್ಮೋದ್ಧಾರ ಹಾಗೂ ಲೋಕ ಕಲ್ಯಾಣಾರ್ಥ ಕೋಟಿ ಭಕ್ತರಿಂದ 2024-26ರ ಅವಧಿಯಲ್ಲಿ ಶ್ರೀಮದ್ಭಗವದ್ಗೀತೆ ಅನ್ನು ಬರೆಯಿಸಿ ಉಡುಪಿಯ ಶ್ರೀಕೃಷ್ಣನಿಗೆ ಸಮರ್ಪಿಸಲು ‘ಕೋಟಿ ಗೀತಾ ಲೇಖನ ಯಜ್ಞ’ ಸಂಕಲ್ಪ ಕೈಗೊಳ್ಳಲಾಗಿದೆ ಎಂದು ಉಡುಪಿ ಭಾವಿ ಪರ್ಯಾಯ ಪೀಠಾಧಿಪತಿ ಹಾಗೂ ಶ್ರೀಪುತ್ತಿಗೆ ಮಠದ ಶ್ರೀ ಡಾ.ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.
ನಗರದ ಶ್ರೀಕೃಷ್ಣ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಕೋಟಿ ಗೀತಾ ಲೇಖನ ಯಜ್ಞದ ಪ್ರಚಾರಾರ್ಥ ಎರಡು ವರ್ಷಗಳ ಕಾಲ ಆಸ್ಪ್ರೇಲಿಯಾ, ಇಂಗ್ಲೆಂಡ್, ದುಬೈ, ಮಸ್ಕತ್, ಅಮೆರಿಕಾ ಸೇರಿದಂತೆ ವಿಶ್ವ ಸಂಚಾರ ನಡೆಸಿದ್ದೇನೆ. ಉತ್ತರ ಮತ್ತು ದಕ್ಷಿಣ ಭಾರತ ಯಾತ್ರೆ ಪೂರ್ಣಗೊಳಿಸಿ ಕಳೆದ ಎರಡು ತಿಂಗಳಿಂದ ರಾಜ್ಯ ಸಂಚಾರ ಕೈಗೊಳ್ಳಲಾಗಿದೆ ಎಂದರು.
ಈಗಾಗಲೇ ಯಜ್ಞದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರಿಗೆ ಗೀತಾ ಪುಸ್ತಕ ಮತ್ತು ಗೀತಾ ಲೇಖನ ಬರೆಯಲು ಪುಸ್ತಕ ನೀಡಲಾಗಿದೆ. ಈಗಾಗಲೇ ಲಕ್ಷಾಂತರ ಭಕ್ತರು ಪುಸ್ತಕ ಪಡೆದು ಗೀತಾ ಲೇಖನ ಯಜ್ಞಕ್ಕೆ ಕೈಜೋಡಿಸಿದ್ದಾರೆ. ಹಲವರು ಬರೀ ಒಂದು ಸಲವಲ್ಲ 20-30 ಬಾರಿ ಪಾಲ್ಗೊಳ್ಳಲು ಇಚ್ಛೆ ವ್ಯಕ್ತಪಡಿಸಿದ್ದುಂಟು. ಅದಕ್ಕೆ ಪೂರಕವಾಗಿ ಪುಸ್ತಕ ಕಲ್ಪಿಸಲು ಶ್ರೀಪುತ್ತಿಗೆ ಚತುರ್ಥ ಪರ್ಯಾಯ ಸಮಿತಿಯಿಂದ ಪೂರಕ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.ಶ್ರೀಪುತ್ತಿಗೆ ಚತುರ್ಥ ಪರ್ಯಾಯ ಮಹೋತ್ಸವ 2024ರ ಜ.18ರಂದು ಜರುಗಲಿದೆ ಎಂದ ಅವರು, ಪ್ರತಿ 2 ವರ್ಷಕ್ಕೊಮ್ಮೆ ಬರುವ ಪರ್ಯಾಯ ವ್ಯವಸ್ಥೆಯು ಶ್ರೀ ಪುತ್ತಿಗೆ ಮಠಕ್ಕೆ ಪ್ರತಿ 14 ವರ್ಷಕ್ಕೊಮ್ಮೆ ಬರುತ್ತದೆ. ನಮಗೆ ಇದು ಚತುರ್ಥ ಪರ್ಯಾಯವಾಗಿದೆ. ಇದನ್ನು ಅರ್ಥಗರ್ಭಿತಗೊಳಿಸುವ ನಿಟ್ಟಿನಲ್ಲಿ ಈ ಕೋಟಿ ಗೀತಾ ಲೇಖನ ಯಜ್ಞ ಹಮ್ಮಿಕೊಳ್ಳಲಾಗಿದೆ.
ಹಿಂದೆ ತಮ್ಮ ದ್ವಿತೀಯ ಪರ್ಯಾಯದಲ್ಲಿ ಲಕ್ಷ ಗೀತಾ ಲೇಖನ ಯಜ್ಞ ಮಾಡಲಾಗಿತ್ತು. ಅದರ ನೆನಪಿಗಾಗಿ ಗೀತಾ ಮಂದಿರವನ್ನು ನಿರ್ಮಿಸಲಾಗಿತ್ತು ಎಂದರು.ಈ ಸಲ ಯಜ್ಞದಲ್ಲಿ ಪಾಲ್ಗೊಳ್ಳುವವರಿಗೆ 2 ದೀಕ್ಷೆ ಸಹ ನೀಡಲಾಗುತ್ತಿದೆ. ಪ್ರತಿದಿನ ಬೆಳಗ್ಗೆ ಪೂಜೆ ನಂತರ ಮೊಬೈಲ್ ಬಳಕೆ ಮಾಡಬೇಕೆಂದು ಪ್ರತಿಜ್ಞೆ ಮಾಡಿಸಬೇಕು. ಯಾವುದಾದರೂ ಕೆಟ್ಟ ಚಟವಿದ್ದರೆ ಅದನ್ನು ಬಿಡಬೇಕು. ತಾವಷ್ಟೇ ಗೀತಾ ಲೇಖನ ಮಾಡುವುದಲ್ಲ. ಕನಿಷ್ಠ ಪಕ್ಷ ಮತ್ತೊಬ್ಬರಿಂದಲೂ ಲೇಖನ ಬರೆಸುವಂತೆ ಮಾಡಬೇಕು. ಹೀಗೆ ಯಜ್ಞದಲ್ಲಿ ಪಾಲ್ಗೊಳ್ಳುವವರು ಒಂದು ನಿಯಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಲಾಗುತ್ತದೆ ಎಂದರು.
ಸುವರ್ಣ ರಥ ಸಮರ್ಪಣೆತಾವು ಸ್ವಾಮೀಜಿಗಳಾಗಿ ದೀಕ್ಷೆ ಪಡೆದ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸಲು ಉದ್ದೇಶಿಸಲಾಗಿದೆ. ಇದರ ಅಂಗವಾಗಿ ಶ್ರೀಮಠದಲ್ಲಿ ಸುವರ್ಣ ರಥ ಸಮರ್ಪಿಸಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯ ನಡೆಸಲು ಚಿಂತಿಸಲಾಗಿದೆ ಎಂದರು.
ಅದರಂತೆ 2025 ಡಿಸೆಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಏರ್ಪಡಿಸಲಾಗುವುದು. ಇದರಲ್ಲಿ ಪ್ರಪಂಚದ ಎಲ್ಲ ವಿದ್ವಾಂಸರು, ಹಿರಿಯರು ಪಾಲ್ಗೊಳ್ಳಲಿದ್ದಾರೆ. ಕೋಟಿ ಗೀತಾ ಲೇಖನ ಯಜ್ಞ ಸಮರ್ಪಣಾ ಕಾರ್ಯಕ್ರಮವನ್ನು ಆ ವೇಳೆಯೇ ಆಯೋಜಿಸಲಾಗುವುದು. ಆಗಿನ ಪ್ರಧಾನಿ ಅವರನ್ನು ಅದಕ್ಕೆ ಆಹ್ವಾನಿಸಲಾಗುವುದು ಎಂದರು.ರಜೆ
ಗೀತಾಜಯಂತಿಗೆ ರಜೆ ಹಾಗೂ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಸೇರ್ಪಡೆಗೊಳಿಸಲು ಸಂಘಟನಾತ್ಮಕವಾಗಿ ಸರಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸಲಾಗುವುದು. ಭಗವದ್ಗೀತೆ ಯಾವುದೇ ಮತೀಯತೆಯನ್ನು ಬಿಂಬಿಸುವುದಿಲ್ಲ. ಬದಲಾಗಿ ಉತ್ತಮ ಜೀವನಕ್ಕೆ ಸನ್ಮತಿಯನ್ನು ಕೊಡುತ್ತದೆ. ಹೀಗಾಗಿ, ಇದನ್ನು ಪಠ್ಯಪುಸ್ತಕರದಲ್ಲಿ ಸೇರ್ಪಡೆಗೊಳಿಸಲು ಸರಕಾರ ಕ್ರಮಕೈಗೊಳ್ಳಬೇಕು. ಅದರಂತೆ ಗೀತಾ ಜಯಂತಿ, ಕೃಷ್ಣ ಜನ್ಮಾಷ್ಠಮಿ, ರಾಮನವಮಿಗೆ ಸರಕಾರ ರಜೆ ಘೋಷಿಸಬೇಕು ಎಂದು ಶ್ರೀಪಾದರು ಒತ್ತಾಯಿಸಿದರು.108 ಮಂದಿರ ನಿರ್ಮಾಣ ಉದ್ದೇಶಗೀತಾ ಪ್ರಚಾರಾರ್ಥ ಕೈಗೊಂಡ ವಿಶ್ವ ಸಂಚಾರ ಸಂದರ್ಭದಲ್ಲಿ ಭಕ್ತರು ಬಾರದೇ ಅವಸಾನ ಕಾಣುತ್ತಿದ್ದ 15 ಚರ್ಚ್‌ಗಳನ್ನು ಪಡೆದು ಆ ಸ್ಥಳದಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಿಸಲಾಗಿದೆ. ಈಗಾಗಲೇ ಆಸ್ಪ್ರೇಲಿಯಾ, ಕೆನಡಾ, ಲಂಡನ್ ಸೇರಿದಂತೆ ಇತರೆಡೆಗಳಲ್ಲಿ ಕೃಷ್ಣ ಮಂದಿರ ನಿರ್ಮಿಸಲಾಗಿದ್ದು, ವಿಶ್ವದ ವಿವಿಧ ಭಾಗದಲ್ಲಿ ಒಟ್ಟು 108 ಮಂದಿರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.