ಗೋಹಿಂಸೆಯ ವಿರುದ್ಧ ಕೋಟಿ ವಿಷ್ಣು - ಶಿವ ನಾಮ ಜಪಕ್ಕೆ ಪೇಜಾವರ ಶ್ರೀ ಕರೆ

| Published : Jan 22 2025, 12:33 AM IST

ಗೋಹಿಂಸೆಯ ವಿರುದ್ಧ ಕೋಟಿ ವಿಷ್ಣು - ಶಿವ ನಾಮ ಜಪಕ್ಕೆ ಪೇಜಾವರ ಶ್ರೀ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಂಡು ಕೇಳರಿಯದಂತೆ ಗೋವುಗಳ ಮೇಲೆ ಬೀಭತ್ಸ ಹಿಂಸೆ, ಆಕ್ರಮಣಗಳು ನಡೆಯುತ್ತಿದ್ದು, ಇದಕ್ಕೆ ಕಾರಣರಾದವರ ಮೇಲೆ ಯಾವುದೇ ಕಾನೂನಿನ ಅಂಕುಶ ಮತ್ತು ಶಿಕ್ಷೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜ.23ರಿಂದ ಜ.29ರ ತನಕ ನಾಡಿನಾದ್ಯಂತ ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ ಅಥವಾ ಶಿವಪಂಚಾಕ್ಷರ ಜಪ ಅಭಿಯಾನ ಸಂಕಲ್ಪಿಸಿದ್ದೇವೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ.

ಜ.23- 29 ಪ್ರತಿಮನೆಗಳಲ್ಲಿ ಪಾರಾಯಣ, 25ರಂದು ಉಪವಾಸ, 29ರಂದು ಮಠಮಂದಿರಗಳಲ್ಲಿ ಯಜ್ಞ

ಕನ್ನಡಪ್ರಭ ವಾರ್ತೆ ಉಡುಪಿನಮ್ಮ ರಾಜ್ಯದಲ್ಲಿ ಕಂಡು ಕೇಳರಿಯದಂತೆ ಗೋವುಗಳ ಮೇಲೆ ಬೀಭತ್ಸ ಹಿಂಸೆ, ಆಕ್ರಮಣಗಳು ನಡೆಯುತ್ತಿದ್ದು, ಇದಕ್ಕೆ ಕಾರಣರಾದವರ ಮೇಲೆ ಯಾವುದೇ ಕಾನೂನಿನ ಅಂಕುಶ ಮತ್ತು ಶಿಕ್ಷೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜ.23ರಿಂದ ಜ.29ರ ತನಕ ನಾಡಿನಾದ್ಯಂತ ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ ಅಥವಾ ಶಿವಪಂಚಾಕ್ಷರ ಜಪ ಅಭಿಯಾನ ಸಂಕಲ್ಪಿಸಿದ್ದೇವೆ. ಯಾವುದೇ ಜಾತಿ ಮತಭೇದವಿಲ್ಲದೆ ಸನಾತನ ಧರ್ಮಶ್ರದ್ಧೆಯುಳ್ಳ, ಗೋವುಗಳ ಮೇಲೆ ಪ್ರೀತಿ ಭಕ್ತಿಯುಳ್ಳ, ಗೋವಿನ ಹಾಲು ಕುಡಿದು ಋಣಿಗಳಾಗಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಕರೆ ನೀಡಿದ್ದಾರೆ.ಹಿಂದೂ ಶ್ರದ್ದೆಯಂತೆ ಗೋವುಗಳ ಮೇಲೆ ಈ ರೀತಿಯ ಹಿಂಸೆ, ಗೋವಧೆ, ದುರಾಕ್ರಮಣಗಳು ಗೋವಿನ ಆರ್ತನಾದಗಳು ಯಾವ ಕಾರಣಕ್ಕೂ ಶ್ರೇಯಸ್ಸನ್ನುಂಟು ಮಾಡದು ಬದಲಾಗಿ ಅದು ನೆಲದ ದುರ್ಭಿಕ್ಷೆ, ಅಶಾಂತಿ, ಕ್ಷಾಮ ಡಾಮರಗಳಿಗೆ ಕಾರಣವಾಗುತ್ತವೆ. ಸದ್ಯ ನಡೆಯುತ್ತಿರುವ ಬೆಳವಣಿಗೆಯಿಂದ ಅಕ್ಷರಶಃ ಆಘಾತಗೊಂಡಿರುವ ಹಿಂದು ಸಮಾಜ ಗೋವಂಶದ ರಕ್ಷಣೆಗೆ ತಕ್ಷಣ ಧಾವಿಸಬೇಕಾಗಿದೆ. ಗೋಹತ್ಯೆ ಗೋವುಗಳ ಮೇಲಿನ ಕ್ರೂರ ಪೈಶಾಚಿಕ ದೌರ್ಜನ್ಯಗಳ ಅಂತ್ಯವಾಗಲೇ ಬೇಕು. ಗೋವುಗಳಿಗೆ ನೆಮ್ಮದಿಯ ಸುರಕ್ಷಿತ ಬದುಕು ಲಭಿಸಬೇಕು. ಆದರೆ ಶಾಸನಗಳಿಂದ ಗೋವುಗಳಿಗೆ ನ್ಯಾಯ ಒದಗಿಸುವ ಸ್ಥಿತಿಯಲ್ಲಿ ನಾವಿಲ್ಲ. ಆದ್ದರಿಂದ ಭಗವಂತನಿಗೇ ಶರಣಾಗಬೇಕಾಗಿದೆ ಎಂದವರು ಹೇಳಿದ್ದಾರೆ.ಪ್ರತೀ ಮನೆ ಮನೆಗಳಲ್ಲಿ ಒಂದು ವಾರ ಪರ್ಯಂತ ಎಲ್ಲರೂ ಒಟ್ಟಾಗಿ ದೇವರ ಮುಂದೆ ದೀಪ ಇರಿಸಿ ವಿಷ್ಣುಸಹಸ್ರನಾಮ ಅಥವಾ ಶಿವಪಂಚಾಕ್ಷರ ಜಪವನ್ನು ಪಠಿಸಬೇಕು. ಜ.25ರಂದು ಒಂದು ದಿನ ಪ್ರತಿಯೊಬ್ಬರೂ ಉಪವಾಸ ವ್ರತವನ್ನು ನಡೆಸಬೇಕು. 29ರಂದು ಆಯಾ ಊರಿನ ಮಠ ಮಂದಿರ ದೇವಸ್ಥಾನಗಳಲ್ಲಿ ವಿಷ್ಣು ಸಹಸ್ರನಾಮ ಯಜ್ಞ ಅಥವಾ ಪಂಚಾಕ್ಷರ ಯಜ್ಞವನ್ನು ನಡೆಸಿ ಅಭಿಯಾನವನ್ನು ಸಂಪನ್ನಗೊಳಿಸಬೇಕು. ಈ ಅಭಿಯಾನಕ್ಕೆ ನಾಡಿನ ಸಮಸ್ತ ಮಠಾಧೀಶರು, ಸಾಧು ಸಂತರು, ಭಜನಾ ಮಂದಿರಗಳು, ಪಾರಾಯಣ ಮಂಡಳಿಗಳು, ವಿವಿಧ ಜಾತಿ ಸಂಘಟನೆಗಳು, ಹಿಂದು ಸಂಘಟನೆಗಳು ಸಹಭಾಗಿಗಳಾಗಬೇಕು. ಎಲ್ಲ ಮಠಾಧೀಶರು ತಮ್ಮ ಅಭಿಮಾನಿಗಳು, ಭಕ್ತರು, ಶಿಷ್ಯರಿಗೆ ಈ ಬಗೆ ಒಂದು ಕರೆಕೊಡಬೇಕು ಎಂದು ಶ್ರೀಗಳು ಅಪೇಕ್ಷಿಸಿದ್ದಾರೆ.ಈ ಅಭಿಯಾನಕ್ಕೆ ನಾಡಿನ ಅನೇಕ ಮಠಾಧೀಶರು ಭಾವನಾತ್ಮಕವಾಗಿ ಸ್ಪಂದಿಸಿ, ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಗೋವುಗಳ ಮೇಲಿನ ಹಿಂಸೆ ಇದೇ ರೀತಿ ಮುಂದುವರಿದರೇ ನಾಡಿನ ಸಂತರೆಲ್ಲರೂ ಒಂದೆಡೆ ಸೇರಿ ಉಪವಾಸ ವ್ರತ ನಡೆಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಈ ವಿಷಯವನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯಿಸಬಾರದು ಎಂದು ಶ್ರೀಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.