ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಟ್ಟಮುಡಿಯಲ್ಲಿ ಮರ್ಕಝುಲ್ ಹಿದಾಯ ಸಂಸ್ಥೆಯಿಂದ ನಿರ್ಮಿಸಲಾಗಿರುವ 6 ಕೋಟಿ ವೆಚ್ಚದ ಮರ್ಕಝ್ ಹಿದಾಯ ಹಲೀಮ ಅಲ್‌ಕಿಂದಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಹಾಗೂ ಹೆಣ್ಣು ಮಕ್ಕಳ ವಸತಿಗೃಹದ ಉದ್ಘಾಟನಾ ಸಮಾರಂಭ ಗುರುವಾರ ನಡೆಯಲಿದೆ. ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕರಾದ ಎಂ.ಎ.ಮಹಮ್ಮದ್ ಹಾಜಿ ಕುಂಜಿಲ , ಮಧ್ಯಾಹ್ನ 12 ಗಂಟೆಗೆ ಆಧ್ಯಾತ್ಮಿಕ ನಾಯಕ, ಗ್ರಾಂಡ್ ಮುಫಿಗಳೂ ಆದ ಶೇಕ್ ಅಬೂಬಕರ್ ಅಹಮ್ಮದ್ (ಎ.ಪಿ.ಉಸ್ತಾದ್)ರವರ ಸಾನಿಧ್ಯದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಥಮ ದರ್ಜೆ ಕಾಲೇಜನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.ಪ್ರಥಮ ದರ್ಜೆ ಕಾಲೇಜಿನ ಹೆಣ್ಣು ಮಕ್ಕಳ ವಸತಿ ಗೃಹ ‘ಪರ್ಲ್ ಪೆವಿಲಿಯನ್’ನ್ನು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಉದ್ಘಾಟನೆ ಮಾಡಲಿದ್ದಾರೆ. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜ್, ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್, ಯುವಜನ ಮತ್ತು ಕ್ರೀಡಾ ಹಾಗೂ ಪರಿಶಿಷ್ಟ ಬುಡಕಟ್ಟು ಪಂಗಡಗಳ ಅಭಿವೃದ್ಧಿ ಸಚಿವ ಬಿ.ನಾಗೇಂದ್ರ, ವಿಧಾನಪರಿಷತ ಮುಖ್ಯ ಸಚೇತರಕಾರದ ಸಲೀಂ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಎಂಎಲ್‌ಸಿ ಬಿ.ಎಂ.ಫಾರೂಕ್, ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಅಶೋಕ್ ಎಸ್.ಆಲೂರು, ಕುಲ ಸಚಿವ ಡಾ.ಸೀನಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 12 ಗಂಟೆಯ ಮುಂಚೆ ಬರುವ ವಾಹನಗಳಿಗೆ ಮರ್ಕಝ್ ಶಾಲೆಯ ಆಟದ ಮೈದಾನದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.ನಂತರ ಬರುವ ವಾಹನಗಳಿಗೆ ಕೊಟ್ಟಮುಡಿ ಜಂಕ್ಷನ್ ಬಳಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಸಮಾರಂಭದ ನಂತರ ಸಂಜೆ ಲತೀಫ್ ಸಖಾಫಿ ಅವರ ನೇತೃತ್ವದಲ್ಲಿ ಮದನಿಯಂ ಕಾರ್ಯಕ್ರಮ ನಡೆಯಲಿದೆ ಎಂದರು.1500 ವಿದ್ಯಾರ್ಥಿಗಳಿಗೆ ಶಿಕ್ಷಣ: ಮರ್ಕಝುಲ್ ಹಿದಾಯ ಸಂಸ್ಥೆಯ ಅಧೀನದಲ್ಲಿ ಕೊಟ್ಟಮುಡಿ ಮತ್ತು ಸಿದ್ದಾಪುರದ ಬಾಡಗ ಬಾಣಂಗಾಲ ಗ್ರಾಮದ ಶಾಲೆಗಳು ಹುಂಡಿಯಲ್ಲಿ ಎರಡು ಪಬ್ಲಿಕ್ ಕಾರ್ಯಚರಿಸುತ್ತಿದೆ. ಸಂಸ್ಥೆಯ ಅಧೀನದಲ್ಲಿ ಸುಮಾರು 15000 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಪಬ್ಲಿಕ್ ಶಾಲೆ, ಪೂರ್ವ ಪ್ರಾಥಮಿಕ ಹಂತದಿಂದ 10ನೇ ತರಗತಿಯವರೆಗೆ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲದೆ, ಪದವಿ ಪೂರ್ವ ಮತ್ತು ಪದವಿ ಸೇರಿ ಸುಮಾರು 500 ವಿದ್ಯಾರ್ಥಿಗಳೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪದವಿ ಕಾಲೇಜು ಈಗಾಗಲೆ ಆರಂಭವಾಗಿದ್ದು, ಇದರಲ್ಲಿ ಬಿಎ, ಬಿಕಾಂ, ಬಿಎಸ್ಸಿ ಮತ್ತು ಬಿಸಿಎ ವಿಷಯದ ಶಿಕ್ಷಣವನ್ನು ನೀಡಲಾಗುತ್ತಿದೆ. ಸಂಸ್ಥೆಯ ಮೂಲಕ ಸುಮಾರು 200 ವಿದ್ಯಾರ್ಥಿಗಳಿಗೆ ಉಚಿತ ವಸತಿ, ಸಮವಸ್ತ್ರ, ಊಟದೊಂದಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.ಸಂಸ್ಥೆಯ ಉಪಾಧ್ಯಕ್ಷರಾದ ಮೊಹಿದ್ದೀನ್ ಕುಟ್ಟಿ ಹಾಜಿ ಕೊಳಕೇರಿ, ಖಜಾಂಚಿ ಕೆ.ಎ. ಅಬ್ದುಲ್ಲ ಕೊಟ್ಟಮುಡಿ, ಕಾರ್ಯದರ್ಶಿ ಪಿ.ಎ. ಯೂಸುಫ್ ಹಾಜಿ ಕೊಂಡಂಗೇರಿ ಹಾಗೂ ಆಡಳಿತ ಅಧಿಕಾರಿ ಎಂ.ಬಿ.ಹಮೀದ್ ಕಬಡಗೇರಿ ಸುದ್ದಿಗೋಷ್ಠಿಯಲ್ಲಿದ್ದರು.