ಸಾರಾಂಶ
- ಚನ್ನಗಿರಿ ಪಟ್ಟಣದಲ್ಲಿ ಪಾದಯಾತ್ರಿಗಳಿಗೆ ಬೀಳ್ಕೊಡುಗೆ ಸಮಾರಂಭ- - - ಚನ್ನಗಿರಿ: ಸಮಾಜದಲ್ಲಿನ ಅಂಕುಡೊಂಕುಗಳ ಕಳೆದು, ಮೇಲು-ಕೀಳು ತಾರತಮ್ಯಗಳ ಎಣಿಸದೇ ಸರ್ವ ಭಕ್ತರಿಗೂ ಬೇಡಿದ್ದನ್ನು ನೀಡುವ ಈಶ್ವರನ ಅವತಾರವೇ ಕೊಟ್ಟೂರು ಬಸವೇಶ್ವರರಾಗಿದ್ದಾರೆ. ಅವರ ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಸೇರುವುದು ಕೊಟ್ಟೂರೇಶ್ವರನ ಪವಾಡ ಫಲವಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಕನೂರು ಎಂ.ಬಿ.ನಾಗರಾಜ್ ಹೇಳಿದರು.
ಪಟ್ಟಣದ ಶ್ರೀ ವಿಠಲ ರುಕ್ಕುಮ್ಮಾಯಿ ಸಮುದಾಯ ಭವನದಲ್ಲಿ 26ನೇ ವರ್ಷದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಪಾದಯಾತ್ರೆ ಹಾಗೂ ಮಹಾರಥೋತ್ಸವ ಅಂಗವಾಗಿ ಪಾದಯಾತ್ರಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಕೊಟ್ಟೂರು ಯಾತ್ರಿಗಳು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಪಾದಯಾತ್ರೆ ಕೈಗೊಂಡರೆ ಆ ಸಂಕಲ್ಪ ಈಡೇರಲಿದೆ ಎಂದರು.ಸಾಮಾಜಿಕ, ಧರ್ಮಜಾಗೃತಿಗಾಗಿ 16ನೇ ಶತಮಾನದಲ್ಲಿ ಜನಿಸಿದ ಪವಾಡ ಪುರುಷ ಕೊಟ್ಟೂರೇಶ್ವರ. ನಾಡಿನ ಬಹುಕೋಟಿ ಭಕ್ತರ ಆರಾಧ್ಯದೈವ. ಕೊಟ್ಟೂರೇಶ್ವರ ರಥೋತ್ಸವದಲ್ಲಿ ಭಾಗಿಯಾಗಲು ಪಾದಯಾತ್ರೆ ಕೈಗೊಂಡಿರುವ ಭಕ್ತರಿಗೆ ಮನಃಶುದ್ಧಿಯಾಗುವ ಜೊತೆಗೆ ದೈಹಿಕ ಶುದ್ಧಿಯೂ ಆಗಲಿದೆ. ಪಾದಯಾತ್ರೆಯಿಂದ ಶರೀರ ಸುಸ್ಥಿತಿಗೆ ಬರುವ ಜೊತೆಗೆ, ಉಸಿರಾಟ ಕ್ರಿಯೆ, ಮನಸ್ಸು, ಆಧ್ಯಾತ್ಮಿಕ ಚಿಂತನೆ ಬೆಳೆಯಲು ಸಹಕಾರವಾಗಿದೆ ಎಂದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸ್ಥಳೀಯ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ, ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮೀಜಿ ವಹಿಸಿ, ಆಶೀರ್ವಚನ ನೀಡಿದರು.ಅಧ್ಯಕ್ಷತೆಯನ್ನು ಪಾದಯಾತ್ರೆ ಸಮಿತಿ ಅಧ್ಯಕ್ಷ ಕೋರಿ ಬಸವರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಾಂತೇಶ ಶಾಸ್ತ್ರಿ, ಕೋರಿ ದೀಪಕ್, ಸಿ.ಎಂ. ಗುರುಸಿದ್ದಯ್ಯ, ವೀರಶೈವ ಸಮಾಜ ಗೌರವ ಅಧ್ಯಕ್ಷ ರಾಜಶೇಖರಯ್ಯ, ನೀಲಕಂಠಯ್ಯ ಶಾಸ್ತ್ರಿ, ಟೆಕ್ಸ್‌ಟೈಲ್ ರವಿ, ಸಾಗರದ ಶಿವಲಿಂಗಪ್ಪ, ಭಕ್ತರು ಹಾಜರಿದ್ದರು.
- - --18ಕೆಸಿಎನ್‌ಜಿ2.ಜೆಪಿಜಿ: ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಭಕ್ತರ ಪಾದಯಾತ್ರಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಮಠಾಧೀಶರು ನೆರವೇರಿಸಿದರು.