ಕೊಟ್ಟುಕತ್ತಿರ ಯಶೋಧ ಪ್ರಕಾಶ್‌ ರಚಿತ ‘ಮುಖಾಮುಖಿ’ ಕೃತಿ ಬಿಡುಗಡೆ

| Published : Jan 22 2025, 12:31 AM IST

ಕೊಟ್ಟುಕತ್ತಿರ ಯಶೋಧ ಪ್ರಕಾಶ್‌ ರಚಿತ ‘ಮುಖಾಮುಖಿ’ ಕೃತಿ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ನಿರ್ಮಾಪಕಿ, ಲೇಖಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ರಚಿಸಿ, ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ಕನ್ನಡ ಪುಸ್ತಕ ‘ಮುಖಾಮುಖಿ’ ಬಿಡುಗಡೆ ಸಮಾರಂಭ ನಗರದ ಪತ್ರಿಕಾ ಭವನದಲ್ಲಿ ನೆರವೇರಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಸ್ತುತ ದಿನಗಳಲ್ಲಿ ಮಹಿಳಾ ಲೇಖಕಿಯರು ತಮ್ಮ ಬರಹದ ಮೂಲಕ ಸಮಾಜದ ಕಣ್ಣು ತೆರೆಸುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ನಿರ್ಮಾಪಕಿ, ಲೇಖಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ರಚಿಸಿ, ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ಕನ್ನಡ ಪುಸ್ತಕ ‘ಮುಖಾಮುಖಿ’ಯನ್ನು ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪುಸ್ತಕಗಳನ್ನು ಓದಿ ಹೆಚ್ಚು ಜ್ಞಾನಾರ್ಜನೆ ಹೊಂದಿದರೆ ಉನ್ನತ ಸ್ಥಾನಕ್ಕೇರಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಾಹಿತ್ಯದಲ್ಲಿ ಅಡಗಿರುವ ಸಾರಾಂಶ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಡಿಕೇರಿ ಕೊಡವ ಸಮಾಜದ ಮಾಜಿ ಉಪಾಧ್ಯಕ್ಷೆ ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ನಿವೃತ್ತ ಉಪನ್ಯಾಸಕಿ ಕಲಿಯಂಡ ಸರಸ್ವತಿ ಚಂಗಪ್ಪ ಮಾತನಾಡಿ, ಪುಸ್ತಕಗಳು ಗುಣಮಟ್ಟದಿಂದ ಕೂಡಿರಬೇಕು ಮತ್ತು ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದೇವೆ ಎಂಬುವುದನ್ನು ನಿಖರವಾಗಿ ಪ್ರತಿಬಿಂಬಿಸಬೇಕು. ಪುಸ್ತಕದಲ್ಲಿ ಶುದ್ಧ ಭಾಷೆಯನ್ನು ಬಳಸಬೇಕು. ಭಾಷೆಯಲ್ಲಿ ಸೌಂದರ್ಯವಿದೆ ಅದನ್ನು ಅನುಭವಿಸಲು ಬರಹಗಾರರು ಅವಕಾಶ ಕಲ್ಪಿಸಬೇಕು ಎಂದರು.

ಬರವಣಿಗೆ ಉತ್ತಮ ರೀತಿಯಲ್ಲಿದ್ದರೆ ಪುಸ್ತಕ ಓದುಗರ ಸಂಖ್ಯೆಯು ಹೆಚ್ಚಾಗಲಿದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳು ಓದುವ ಹವ್ಯಾಸವನ್ನು ಕಡಿಮೆ ಮಾಡಿದ್ದು, ಉತ್ತಮ ಬರಹಗಳು ಬಂದಲ್ಲಿ ಮಕ್ಕಳು ಕೂಡ ಓದುವ ಆಸಕ್ತಿ ಬೆಳೆಸಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆ‌ರ್.ಸವಿತಾ ರೈ ಮಾತನಾಡಿ, ಇಂದು ಸಾಹಿತ್ಯಾಭಿರುಚಿ ಮೂಡಿಸುವ ಅಗತ್ಯವಿದೆ ಎಂದರು.

ಲೇಖಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಮಾತನಾಡಿ, ನಮ್ಮನ್ನೇ ನಾವು ಗೆಲ್ಲಲಾಗುವುದಿಲ್ಲ ಎನ್ನುವ ಸತ್ಯವನ್ನು ಯಾರೂ ಅರ್ಥ ಮಾಡಿಕೊಳ್ಳುವುದೇ ಇಲ್ಲ. ಮನೋರೋಗಕ್ಕೆ ಒಳಗಾದ ವ್ಯಕ್ತಿಯ ಕುರಿತು ಈ ಕೃತಿ ಬರೆಯಲಾಗಿದ್ದು, ಜೀವನದ ಹಲವು ಮಜಲುಗಳನ್ನು ತೋರಿಸಲಾಗಿದೆ. ಜೀವನದ ಜಂಜಾಟದಲ್ಲಿ ಕಳೆದು ಹೋಗುವ ನಮಗೆ ಪ್ರತಿ ಮುಂಜಾನೆಗೂ ಒಂದು ಉದ್ದೇಶವಿರಬೇಕು ಎನ್ನುವುದನ್ನು ತಿಳಿಸಲು ಪುಸ್ತಕದ ಮೂಲಕ ಪ್ರಯತ್ನಿಸಿರುವುದಾಗಿ ತಿಳಿಸಿದರು.

ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ (ಮಾಸ್ಟರ್ಸ್) ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಹಾಗೂ ಕೊಡವ ಮಕ್ಕಡ ಕೂಟದ ನಿರ್ದೇಶಕಿ ಬೊಳ್ಳಜಿರ ಯಮುನಾ ಅಯ್ಯಪ್ಪ ಇದ್ದರು.