ಕೊಟ್ಟೂರು: ತಾಲೂಕಿನ ಕನ್ನನಾಯಕನಕಟ್ಟೆ ಗ್ರಾಮದ ಯುವತಿ ಉಗಾಂಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಅಲ್ಲಿನ ರಾಯಭಾರಿ ಕಚೇರಿಯವರು ಇಲ್ಲಿಯ ವಿದೇಶಾಂಗ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಬಿಂದು (24) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು, ಒಂದು ವರ್ಷದ ಹಿಂದೆ ಕೂಡ್ಲಿಗಿಯ ಯುವಕ ಚಂದ್ರಶೇಖರನೊಂದಿಗೆ ಮದುವೆಯಾಗಿದ್ದಳು. ಯುವಕ ಉಗಾಂಡದಲ್ಲಿನ ರೆಡ್ಡಿಸ್ ಟೆಕ್ನಿಕಲ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂದು ಹೇಳಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಬಿಂದು ಈತನೊಂದಿಗೆ ಉಗಾಂಡ ದೇಶದಲ್ಲಿ ಗೃಹಿಣಿಯಾಗಿದ್ದಳು ಎಂದು ಗೊತ್ತಾಗಿದೆ.

ಬಿಂದು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಅಲ್ಲಿಂದ ಮಹಿಳೆಯ ಶವ ತರಲು ಅಧಿಕಾರಿಗಳೊಂದಿಗೆ ಸಂಬಂಧಿಕರೊಂದಿಗೆ ಸಂಪರ್ಕಿಸಿದ್ದಾರೆ. ಸಹಾಯಸ್ತ ನೀಡಿ ಸಹಕರಿಸಿದ್ದಾರೆ.

ಉಗಾಂಡದಲ್ಲಿನ ರಾಯಭಾರಿಯೊಂದಿಗೆ ಸಮನ್ವಯ ಸಾಧಿಸಿದ ತರಳಬಾಳು ಶ್ರೀಗಳ ಸಹಾಯಸ್ತದಿಂದಾಗಿ ಮಹಿಳೆ ಬಿಂದುಳ ಪಾರ್ಥಿವ ಶರೀರ ನಾಳೆ ಬೆಳಗ್ಗೆ ಬೆಂಗಳೂರಿಗೆ ಬರಲಿದೆ ಎಂದು ತಿಳಿದು ಬಂದಿದೆ. ಸಂಜೆ ಹೊತ್ತಿಗೆ ಪಾರ್ಥಿವ ಶರೀರ ಕೂಡ್ಲಿಗಿಗೆ ಬರಲಿದ್ದು ನಂತರ ಕನ್ನನಾಯಕನಕಟ್ಟೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರೆವೇರಿಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ- ಬೈಕ್ ಸವಾರನ ಸಾವು


ಸಂಡೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸಾವರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬುಧವಾರ ತಾಲ್ಲೂಕಿನ ತೋರಣಗಲ್ಲು ಬೈಪಾಸ್ ಬಳಿಯಲ್ಲಿ ಜರುಗಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಕಂಪ್ಲಿ ತಾಲ್ಲೂಕಿನ ಹೊನ್ನಾಳಿ ಗ್ರಾಮದ ನಿವಾಸಿ ಯರಿಸ್ವಾಮಿ (20) ಎಂದು ಗುರುತಿಸಲಾಗಿದೆ. ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.