ಕನ್ನಡಪ್ರಭ ವಾತೆ ಮುಂಡಗೋಡ
ಬೆಂಗಳೂರು ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಿಂದ ನೋಟಿಸ್ ಜಾರಿಯಾದ ಹಿನ್ನೆಲೆ ಇಂದಿರಾನಗರ ಹಾಗೂ ಆನಂದನಗರ ನಿವಾಸಿಗಳು ಬುಧವಾರ ಪಪಂಗೆ ಮುತ್ತಿಗೆ ಹಾಕಿ ಕಂದಾಯ ನಿರೀಕ್ಷಕ ಮಂಜುನಾಥ ಮುಚ್ಚಂಡಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಪಟ್ಟಣದ ಆನಂದ ನಗರ, ಇಂದಿರಾನಗರ, ಗಣೇಶ ನಗರ ಹಾಗೂ ಗಾಂಧಿನಗರ ಸೇರಿ ಸುಮಾರು ೮೦೦ಕ್ಕೂ ಹೆಚ್ಚು ಕುಟಂಬ ೬೦ ವರ್ಷಗಳಿಂದ ವಾಸವಿದ್ದಾರೆ. ಪಪಂಯಿಂದ ಮೂಲಭೂತ ಸೌಕರ್ಯ ಒದಗಿಸಿದೆ. ಬಡವರಿಗೆ ಸರ್ಕಾರದಿಂದ ಆಶ್ರಯ, ಅಂಬೇಡ್ಕರ್, ವಾಜಪೇಯಿ ಹೀಗೆ ಹಲವಾರು ವಸತಿ ಯೋಜನೆ ಅಡಿ ಮನೆಗಳನ್ನು ನಿರ್ಮಿಸಿಕೊಳ್ಳಲು ಸಹಾಯಧನ ಸೌಲಭ್ಯವನ್ನು ಒದಗಿಸಿದೆ. ಅದರಂತೆ ನಿವಾಸಿಗಳು ಸಹ ಪಪಂಗೆ ಮನೆ ಹಾಗೂ ನೀರಿನ ಕರ ಸೇರಿ ಎಲ್ಲ ಕರ ತುಂಬುತ್ತಾ ಬಂದಿದ್ದೇವೆ. ಆದರೆ ನಿಮ್ಮ ವೈಯಕ್ಷಕ ಹಿತಾಸಕ್ತಿಯಿಂದ ಈ ವಾರ್ಡ್‌ನ ಜನರ ನೆಮ್ಮದಿ ಹಾಳು ಮಾಡದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಒಬ್ಬ ಸರಕಾರಿ ನೌಕರನಾಗಿ ಇಲಾಖೆಯಿಂದ ಮಾಹಿತಿ ಪಡೆದು ವೈಯಕ್ತಿವಾಗಿ ದುರಪಯೋಗ ಪಡೆಯಲಾಗಿದೆ ಎಂದು ಆರೋಪಿಸಿದರು.
ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಿಂದ ೩೫ ಜನರಿಗೆ ನೋಟಿಸ್ ಬಂದಿದೆ. ಇನ್ನು ಹಲವಾರು ಜನರಿಗೆ ನೋಟಿಸ್ ಬರುವ ನಿರೀಕ್ಷೆ ಇದೆ. ಇದಕ್ಕೆ ನೀವೇ ನೇರ ಕಾರಣ. ಇವರಲ್ಲಿ ಹಲವಾರು ಜನರು ಬಡವರಿದ್ದಾರೆ. ಬೆಂಗಳೂರಿನ ನ್ಯಾಯಾಲಯಕ್ಕೆ ಹೋಗಿಬರಲು ಹಣದ ಸಮಸ್ಯೆ ಇದೆ. ಹೀಗಾಗಿ ಇದನ್ನು ನೀವೇ ಬಗೆಹರಿಸಬೇಕು. ಸದ್ಯ ವಕೀಲರನ್ನು ನೇಮಿಸಿ ಅದರ ಖರ್ಚು ವೆಚ್ಚವನ್ನು ನೀವೆ ಭಗೆಹರಿಸಬೇಕೆಂದು ಒತ್ತಾಯಿಸಿದರು. ನಂತರ ಮಾತನಾಡಿದ ಕಂದಾಯ ನಿರೀಕ್ಷಕ, ಹಿಂದಿನ ಮುಖ್ಯಾಧಿಕಾರಿಗಳ ಅವಧಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಪರಿಹಾರ ಕ್ರಮಕ್ಕೆ ೨೦ ದಿನಗಳ ಸಮಯಾವಕಾಶ ನೀಡಿ ಎಂದು ಮನವಿ ಮಾಡಿದರು. ಆದರೆ ಜನರು ಈ ಬಗ್ಗೆ ಲಿಖಿತವಾಗಿ ತಿಳಿಸಿದರೆ ಹೋಗುತ್ತೇವೆ ಎಂದು ಪಟ್ಟುಹಿಡಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಿಎಸ್ಐ ಜನರನ್ನು ಸಮಾಧಾನ ಪಡಿಸಿ ನಾಳೆ ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸೋಣ ಎಂದು ಜನರನ್ನು ಮನವೊಲಿಸಿದರು.