ಪತ್ರಿಕೆಗಳು ಸಮಾಜದ ಆಗು ಹೋಗುಗಳನ್ನು ತಿಳಿಸುವ ಕನ್ನಡಿಯಾಗಿದ್ದು, ಪತ್ರಿಕೆಗಳನ್ನು ಓದುವುದರಿಂದ ಶ್ರೇಷ್ಠ ಜ್ಞಾನ ಲಭಿಸುತ್ತದೆ.
ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಭಟ್ಕಳಪಟ್ಟಣದ ಶ್ರೀ ಗುರು ವಿದ್ಯಾಧಿರಾಜ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸಾಹಿತಿ ಹಾಗೂ ರಾಜ್ಯ ಜಾನಪದ ಅಕಾಡೆಮಿಯ ಸದಸ್ಯ ಡಾ. ಜಮೀರುಲ್ಲಾ ಷರೀಫ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪತ್ರಿಕೆಗಳು ಸಮಾಜದ ಆಗು ಹೋಗುಗಳನ್ನು ತಿಳಿಸುವ ಕನ್ನಡಿಯಾಗಿದ್ದು, ಪತ್ರಿಕೆಗಳನ್ನು ಓದುವುದರಿಂದ ಶ್ರೇಷ್ಠ ಜ್ಞಾನ ಲಭಿಸುತ್ತದೆ. ಪತ್ರಿಕೆಗಳಲ್ಲಿ ಎಲ್ಲಾ ವಿಷಯಗಳೂ ಇರುವುದರಿಂದ ಪುಸ್ತಕಗಳಿಗಿಂತ ಇದರಲ್ಲಿ ಹೆಚ್ಚು ಜ್ಞಾನ ಸಿಗುತ್ತದೆ. ಪತ್ರಕರ್ತರು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಸರಿಯಾದ ಭದ್ರತೆ ಇಲ್ಲ. ಪತ್ರಕರ್ತರು ಕುಟುಂಬದ ಕಾಳಜಿಯೊಂದಿಗೆ ಕೆಲಸ ಮಾಡಬೇಕು. ಪತ್ರಕರ್ತರು ಸತ್ಯ ಶೋಧಕರಾಗಿದ್ದಾರೆ. ಭಟ್ಕಳದಲ್ಲಿ ಪತ್ರಕರ್ತರು ಉತ್ತಮವಾಗಿ ತಮ್ಮ ಕಾರ್ಯ ನಿಭಾಯಿಸುತ್ತಿರುವುದು ಶ್ಲಾಘನೀಯ ಎಂದರು.ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಹೆಚ್ಚಯ ಪತ್ರಿಕೆ ಓದಬೇಕು. ಪತ್ರಿಕೆ ಓದುವುದರಿಂದ ನಿಮಗೆ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಇದರಿಂದ ನಿಮಗೆ ಭವಿಷ್ಯದಲ್ಲಿ ಅನುಕೂಲ ಆಗುತ್ತದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಾರುತಿ ನಾಯ್ಕ ಮಾತನಾಡಿ, ಪತ್ರಿಕೆಗಳು ಸಮಾಜದಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ ಎಂದರು. ಇನ್ನೋರ್ವ ಅತಿಥಿಯಾಗಿದ್ದ ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಮಾತನಾಡಿ, ಸಾಮಾಜಿಕ ಜಾಲತಾಣದ ಅಬ್ಬರದಲ್ಲೂ ಪತ್ರಿಕೆಗಳು ತನ್ನ ಮಹತ್ವ ಉಳಿಸಿಕೊಂಡಿದೆ. ಪತ್ರಿಕೆಗಳಲ್ಲಿ ಬಂದ ಸುದ್ದಿ ದಾಖಲೆಯಾಗಿ ಇಟ್ಟುಕೊಳ್ಳಬಹುದಾಗಿದೆ ಎಂದರು.ಇನ್ನೋರ್ವ ಅತಿಥಿ ವಿದ್ಯಾಧಿರಾಜ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ವೀರೇಂದ್ರ ಶ್ಯಾನಭಾಗ ಮಾತನಾಡಿದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತರಾದ ಯೋಗ ಗುರು ಗೋವಿಂದ ದೇವಡಿಗ ಮತ್ತು ಪತ್ರಿಕಾ ಎಜೆಂಟರಾದ ಮಂಜುನಾಥ ದೇವಡಿಗ ಮಾತನಾಡಿದರು. ಪತ್ರಕರ್ತ ಮನಮೋಹನ ನಾಯ್ಕ ಸ್ವಾಗತಿಸಿದರೆ, ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಈಶ್ವರ ನಾಯ್ಕ ನಿರೂಪಿಸಿದರು. ಪತ್ರಕರ್ತ ರಾಮಚಂದ್ರ ಕಿಣಿ ವಂದಿಸಿದರು. ಪತ್ರಿಕಾ ದಿನಾಚರಣೆಯ ಪ್ರಯುಕ್ತ ಯೋಗ ಗುರು ಗೋವಿಂದ ಗುರೂಜಿ ಮತ್ತು ಪತ್ರಿಕಾ ಎಜೆಂಟರಾದ ಮಂಜುನಾಥ ದೇವಡಿಗರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಕಸಾಪ ತಾಲ್ಲೂಕು ಅಧ್ಯಕ್ಷ ಗಂಗಾಧರ ನಾಯ್ಕ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶೈಲೇಶ ವೈದ್ಯ, ಪತ್ರಕರ್ತರಾದ ವಿಷ್ಣು ದೇವಡಿಗ, ಎಂ.ಆರ್. ಮಾನ್ವಿ, ಸತೀಶಕುಮಾರ ನಾಯ್ಕ, ಅತೀಕುರೆಹಮಾನ ಶಾಬಂದ್ರಿ, ಲೋಕೇಶ ನಾಯ್ಕ, ಫಯಾಜ್ ಮುಲ್ಲಾ ಮುಂತಾದವರಿದ್ದರು.