ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದ ಕೊಟ್ಟೂರು

| Published : Mar 06 2024, 02:16 AM IST

ಸಾರಾಂಶ

ದೀಡ್‌ ನಮಸ್ಕಾರ ಸೇವೆಯನ್ನು ಮಕ್ಕಳಿಂದ ಹಿಡಿದು ಹಿರಿಯರು ಸ್ವಾಮಿಯ ದ್ವಾರ ಬಾಗಿಲಿನಿಂದ ಸರದಿ ಸಾಲಿನಂತೆ ಕೈಗೊಂಡರು.

ಕೊಟ್ಟೂರು: ಸರ್ವ ಜನಾಂಗದ ಆರಾಧ್ಯ ದೈವ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಹರಕೆ ಹೊತ್ತ ಎಲ್ಲ ಜನಾಂಗದ ಭಕ್ತರು ರಥೋತ್ಸವದ ಮರುದಿನವಾದ ಮಂಗಳವಾರ ಬೆಳಗ್ಗೆ 5 ಗಂಟೆಯಿಂದಲೇ ನಿರಂತರವಾಗಿ ತಂಡೋಪತಂಡವಾಗಿ ದೀಡ್ ನಮಸ್ಕಾರ ಸೇವೆಯನ್ನು ಸಲ್ಲಿಸುವ ಮೂಲಕ ಭಕ್ತಿ ನಮಸ್ಕರಿಸಿದರು.

ದೀಡ್‌ ನಮಸ್ಕಾರ ಸೇವೆಯನ್ನು ಮಕ್ಕಳಿಂದ ಹಿಡಿದು ಹಿರಿಯರು ಸ್ವಾಮಿಯ ದ್ವಾರ ಬಾಗಿಲಿನಿಂದ ಸರದಿ ಸಾಲಿನಂತೆ ಕೈಗೊಂಡರು. ಸಾವಿರಾರು ಭಕ್ತರು ಈಬಗೆ ಸೇವಾ ಕೈಂಕರ್ಯ ಸಲ್ಲಿಸಿದರು.

ರಥದ ಸ್ಥಳದಲ್ಲಿ ಬಿದ್ದಿದ್ದ ಬಾಳೆಹಣ್ಣು, ಹೂವುಗಳನ್ನು ಭಕ್ತರು ಸ್ವಾಮಿಯ ಆಶೀರ್ವಾದ ಎಂದು ಭಾವಿಸಿಕೊಂಡು ತಮ್ಮ ಬ್ಯಾಗಿನೊಳಗೆ ಶೇಖರಿಸಿಕೊಂಡರು. ಹೀಗೆ ಶೇಖರಿಸಿದ ಬಾಳೆಹಣ್ಣು ರಥದ ಸ್ಥಳದಲ್ಲಿನ ವಸ್ತುಗಳನ್ನು ತಮ್ಮ ತಮ್ಮ ಮನೆಗಳಿಗೆ ಮತ್ತು ಹೊಲಗಳಲ್ಲಿ ಹಂಚಿದರೆ ಯಾವುದೇ ಕಷ್ಟ ಬರಲಾರದು ಎಂಬ ಅಪಾರ ನಂಬಿಕೆ ಭಾವನೆಯಿಂದ ಈ ಆಶೀರ್ವಾದ ರೂಪದ ಹಣ್ಣು, ಹೂವುಗಳನ್ನು ಭಕ್ತರು ಪಡೆದುಕೊಂಡರು.

ಸ್ವಾಮಿಯ ರಥ ಸಾಗಿದ ಸ್ಥಳಗಳಲ್ಲಿ ಕೆಲ ಭಕ್ತರು ಪೂಜೆ ಸಲ್ಲಿಸಿ ಕರ್ಪೂರ ಬೆಳಗಿ ನಮಿಸಿದರು. ಒಟ್ಟಾರೆ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಭಕ್ತಿಯ ಪರಾಕಾಷ್ಠೆ ತೋರಿದ್ದರಿಂದ ಪಟ್ಟಣದ ದೇವಸ್ಥಾನದ ರಸ್ತೆ ಈ ಸೇವೆಯಿಂದ ಮಿಂದೆದ್ದದಂತೆ ಭಾಸವಾಯಿತು.