ಸಾರಾಂಶ
ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಲು ಸಿಎ ನಿವೇಶನ ಹಂಚಿಕೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬವನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ರಮೇಶ್ ಬಾಬು ಕಿಡಿ ಕಾರಿದ್ದಾರೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಲು ಸಿಎ ನಿವೇಶನ ಹಂಚಿಕೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬವನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ರಮೇಶ್ ಬಾಬು ಕಿಡಿ ಕಾರಿದ್ದಾರೆ.ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಸಿಎ ಸೈಟ್ ಅನ್ನು ನಿಯಮಾನುಸಾರ ಹಂಚಿಕೆ ಮಾಡಲಾಗಿದೆ. ನಿಯಮಗಳನ್ನು ತಿಳಿದುಕೊಳ್ಳದೆ ಖರ್ಗೆ ಅವರ ಕುಟುಂಬಕ್ಕೆ ಮಸಿ ಬಳಿಯಲು ಲೆಹರ್ ಸಿಂಗ್ ಆರೋಪ ಮಾಡುತ್ತಿದ್ದಾರೆ. 2010, 2016 ರಲ್ಲಿ ಎಂಎಲ್‌ಸಿ ಆಗಿದ್ದಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರ ಹಾಗೂ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವಾಗ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಎಷ್ಟು ಆಸ್ತಿಯನ್ನು ನಮೂದಿಸಿದ್ದಾರೆ ಎಂದು ಸಾರ್ವಜನಿಕವಾಗಿ ಬಹಿರಂಗಪಡಿಸಲಿ. 2010ರಲ್ಲಿ 12 ರಿಂದ 13 ಕೋಟಿ ರು. ಘೋಷಿತ ಆಸ್ತಿ ಇತ್ತು. ಈಗ 70 ರಿಂದ 72 ಕೋಟಿ ರು. ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ ಎಂದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ, ಯಾವ ಸಂಘ-ಸಂಸ್ಥೆಗಳಿಗೆ ರಾಜ್ಯದಲ್ಲಿ ಎಲ್ಲೆಲ್ಲಿ, ಎಷ್ಟು ಎಕರೆ ಸಿಎ ನಿವೇಶನಗಳು ಮಂಜೂರಾಗಿವೆ ಎಂಬುದನ್ನು ಸಿಂಗ್ ಅವರೇ ರಾಜ್ಯಪಾಲರಿಗೆ ತಿಳಿಸಿ ತನಿಖೆ ಮಾಡಿಸಲಿ. ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಹತ್ತಿಪ್ಪತ್ತು ಸಂಸ್ಥೆಗಳಿಗೆ ಕಾನೂನು ಬಾಹಿರವಾಗಿ ನಿವೇಶನಗಳನ್ನು ನೀಡಲಾಗಿದೆ. ಈ ಅಕ್ರಮದ ಹೊಣೆಯನ್ನು ಅವರೇ ಹೊರಬೇಕಾಗಿದೆ ಎಂದರು.