ನಗರದ ೧೪ನೇ ವಾರ್ಡ್ ವ್ಯಾಪ್ತಿಯ ಕಂಚಾಘಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಪಿಸಿಸಿ ಸದಸ್ಯ ವಿ.ಯೋಗೇಶ್ ಸ್ವಂತ ವೆಚ್ಚದಲ್ಲಿ ನೂತನ ಶೌಚಗೃಹವನ್ನು ನಿರ್ಮಿಸಿ ಶಾಲೆಗೆ ಸಮರ್ಪಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ೧೪ನೇ ವಾರ್ಡ್ ವ್ಯಾಪ್ತಿಯ ಕಂಚಾಘಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಪಿಸಿಸಿ ಸದಸ್ಯ ವಿ.ಯೋಗೇಶ್ ಸ್ವಂತ ವೆಚ್ಚದಲ್ಲಿ ನೂತನ ಶೌಚಗೃಹವನ್ನು ನಿರ್ಮಿಸಿ ಶಾಲೆಗೆ ಸಮರ್ಪಿಸಿದರು.ಶಾಲಾ ಸಿಬ್ಬಂದಿ ಹಾಗೂ ಪೋಷಕರ ಒತ್ತಾಸೆಯ ಮೇರೆಗೆ ಯೋಗೇಶ್ ಅವರು ತಮ್ಮ ತಾಯಿ ಶಾರದಮ್ಮ ಹಾಗೂ ಕುಟುಂಬ ಸದಸ್ಯರೊಂದಿಗೆ ಶಾಲೆಗೆ ಆಗಮಿಸಿ ಶೌಚಗೃಹದ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯೋಗೇಶ್ ಯಾವುದೇ ಮಗು ಮೂಲಸೌಕರ್ಯಗಳ ಕೊರತೆಯಿಂದ ಶಿಕ್ಷಣದಿಂದ ವಂಚಿತವಾಗಬಾರದು. ಶಾಲೆಯ ಮಹತ್ವ ಹಾಗೂ ಅಲ್ಲಿ ಕಲಿಯುವ ವಿದ್ಯೆ ಸಮಾಜದ ಭವಿಷ್ಯವನ್ನು ರೂಪಿಸುತ್ತದೆ. ಮಕ್ಕಳಿಗೆ ಅನುಕೂಲಕರವಾದ ವ್ಯವಸ್ಥೆ ಕಲ್ಪಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.ಯೋಗೇಶ್ ಅವರ ತಾಯಿ ಶಾರದಮ್ಮ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮಧ್ಯಮ ಹಾಗೂ ಬಡ ವರ್ಗದ ಮಕ್ಕಳು ಶಿಕ್ಷಣಕ್ಕಾಗಿ ಬರುತ್ತಾರೆ. ಅವರಿಗೆ ಸೌಲಭ್ಯ ಕಲ್ಪಿಸುವುದು ಮಾನವೀಯ ಕರ್ತವ್ಯ. ಹಣ ಮತ್ತು ಅಧಿಕಾರ ಶಾಶ್ವತವಲ್ಲ. ಭಗವಂತನ ಆಶೀರ್ವಾದದಿಂದ ಶೋಷಿತ ಹಾಗೂ ನಿರಾಶ್ರಿತ ವರ್ಗದವರಿಗೆ ಸಹಾಯ ಮಾಡುವುದು ನಮ್ಮ ಕುಟುಂಬದ ಧ್ಯೇಯ ಎಂದರು.ಈ ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ, ಪೋಷಕರು, ಕಾಂತರಾಜು ಮಲ್ಲೇನಹಳ್ಳಿ, ಶಂಕರ್ ಸೇರಿದಂತೆ ವಿದ್ಯಾನಗರದ ಬಾಲ ಗಣಪತಿ ಗೆಳೆಯರು ಉಪಸ್ಥಿತರಿದ್ದರು.