2020ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದ ಕುಬೇರಪ್ಪ ಅವರು ಈ ಬಾರಿಯೂ ತಮಗೆ ಟಿಕೆಟ್‌ ನೀಡಬೇಕು. ಈ ಬಾರಿ ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದು ಕ್ಷೇತ್ರದ 24 ಶಾಸಕರ ಪೈಕಿ 17 ಕಾಂಗ್ರೆಸ್‌ ಶಾಸಕರಿದ್ದು ಗೆಲುವು ಸಾಧಿಸಬಹುದು ಎಂದು ಅಂದುಕೊಂಡಿದ್ದರು.

ಹುಬ್ಬಳ್ಳಿ:

ಪಶ್ಚಿಮ ಪದವೀಧರ ಕ್ಷೇತ್ರದಿಂದ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಟಿಕೆಟ್‌ ಸಿಗದೇ ಅಸಮಾಧಾನಗೊಂಡು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಆರ್‌.ಎಂ. ಕುಬೇರಪ್ಪ ಅವರ ಮನವೊಲಿಸುವಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಯಶಸ್ವಿಯಾಗಿದ್ದಾರೆ.

ಚುನಾವಣಾ ಕಣದಿಂದ ಹಿಂದಕ್ಕೆ ಸರಿಯಲು ಕುಬೇರಪ್ಪ ಒಪ್ಪಿದ್ದು, ಅ. 9ರಂದು ನಾಮಪತ್ರ ಹಿಂಪಡೆಯುವುದಾಗಿ ಕುಬೇರಪ್ಪ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

2020ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದ ಕುಬೇರಪ್ಪ ಅವರು ಈ ಬಾರಿಯೂ ತಮಗೆ ಟಿಕೆಟ್‌ ನೀಡಬೇಕು. ಈ ಬಾರಿ ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದು ಕ್ಷೇತ್ರದ 24 ಶಾಸಕರ ಪೈಕಿ 17 ಕಾಂಗ್ರೆಸ್‌ ಶಾಸಕರಿದ್ದು ಗೆಲುವು ಸಾಧಿಸಬಹುದು ಎಂದು ಅಂದುಕೊಂಡಿದ್ದರು. ಆದರೆ, ಪಕ್ಷವು ಮೋಹನ ಲಿಂಬಿಕಾಯಿ ಅವರಿಗೆ ಟಿಕೆಟ್‌ ನೀಡಿದೆ. ಇದರಿಂದ ಮುನಿಸಿಕೊಂಡಿದ್ದ ಕುಬೇರಪ್ಪ ಬಂಡಾಯ ಅಭ್ಯರ್ಥಿಯಾಗಿ ಅ.6ರಂದು ನಾಮಪತ್ರ ಸಲ್ಲಿಸಿದ್ದರು. ಗುರುವಾರ ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಅವರು ಕುಬೇರಪ್ಪ ಅವರೊಂದಿಗೆ ಮಾತುಕತೆ ನಡೆಸಿ ನಾಮಪತ್ರ ಹಿಂಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ನಿಮಗೆ ಅನ್ಯಾಯವಾಗಿರುವುದು ಪಕ್ಷದ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದ್ದರಿಂದ ಕುಬೇರಪ್ಪ ಅವರು ಶುಕ್ರವಾರ ನಾಮಪತ್ರ ಹಿಂಪಡೆಯಲಿದ್ದಾರೆ.

ಕೈ ಅಭ್ಯರ್ಥಿ ನಿಶ್ಚಿಂತೆ:

ಕುಬೇರಪ್ಪ ಅವರು ನಾಮಪತ್ರ ಸಲ್ಲಿಸಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿಯ ಮತ ಕಸಿದುಕೊಳ್ಳುತ್ತಾರೆ ಎಂಬ ಆತಂಕ ಮೂಡಿತ್ತು. ಇದೀಗ ಅವರು ನಾಮಪತ್ರ ಹಿಂಪಡೆಯುತ್ತಿರುವುದರಿಂದ ಮೋಹನ ಲಿಂಬಿಕಾಯಿ ಹಾಗೂ ಮುಖಂಡರು ನಿರಾಳರಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷರೊಂದಿಗೆ ನಡೆದ ಸಭೆಯಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ರುದ್ರಪ್ಪ ಲಮಾಣಿ, ಹಾವೇರಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಂ. ಹಿರೇಮಠ, ಸಂಜೀವಕುಮಾರ ನೀರಲಗಿ ಸೇರಿದಂತೆ ಹಲವರಿದ್ದರು.

ನನಗೆ ಆಗಿರುವ ಅನ್ಯಾಯದ ಕುರಿತು ಕೆಪಿಸಿಸಿ ಅಧ್ಯಕ್ಷರಿಗೆ ವಿವರಿಸಿದ್ದೇನೆ. ಸರಿಪಡಿಸಿ ಸೂಕ್ತ ಸ್ಥಾನಮಾನದ ಭರವಸೆ ನೀಡಿದ್ದರಿಂದ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಶುಕ್ರವಾರ ಹಿಂಪಡೆದು ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ.

ಆರ್‌.ಎಂ. ಕುಬೇರಪ್ಪ, ಕಾಂಗ್ರೆಸ್‌ ಮುಖಂಡ