ಸಚಿವ ಸಂಪುಟ ವಿಸ್ತರಣೆ ನಂತರ ಭುಗಿಲೆದ್ದಿರುವ ಶಾಸಕರ ಅಸಮಾಧಾನ ತಣಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಬುಧವಾರ ಹಲವು ಶಾಸಕರೊಂದಿಗೆ ಸರಣಿ ಸಭೆ ನಡೆಸಿದರು. ಜತೆಗೆ ಹಿರಿಯ ಶಾಸಕರ ಮನೆಗೆ ತೆರಳಿ ಸಮಾಧಾನಪಡಿಸುವ ಕೆಲಸ ಮಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಚಿವ ಸಂಪುಟ ವಿಸ್ತರಣೆ ನಂತರ ಭುಗಿಲೆದ್ದಿರುವ ಶಾಸಕರ ಅಸಮಾಧಾನ ತಣಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಬುಧವಾರ ಹಲವು ಶಾಸಕರೊಂದಿಗೆ ಸರಣಿ ಸಭೆ ನಡೆಸಿದರು. ಜತೆಗೆ ಹಿರಿಯ ಶಾಸಕರ ಮನೆಗೆ ತೆರಳಿ ಸಮಾಧಾನಪಡಿಸುವ ಕೆಲಸ ಮಾಡಿದರು.ಸಚಿವ ಸ್ಥಾನ ದೊರೆಯದೆ ಪಕ್ಷ ಮತ್ತು ನಾಯಕರ ವಿರುದ್ಧ ಸಚಿವಾಕಾಂಕ್ಷಿ ಶಾಸಕರ ಮುನಿಸು ಹೆಚ್ಚಾಗಿದ್ದು, ಅದನ್ನು ಕಡಿಮೆ ಮಾಡಲು ಬಿ.ಕೆ.ಹರಿಪ್ರಸಾದ್ ಬುಧವಾರವೂ ತಮ್ಮ ಪ್ರಯತ್ನ ಮುಂದುವರಿಸಿದರು. ಬುಧವಾರ ಬೆಳಗ್ಗೆಯಿಂದಲೇ ಶಾಸಕರ ಅಹವಾಲು ಕೇಳಿ, ಭರವಸೆಗಳನ್ನು ನೀಡುವ ಕೆಲಸ ಮಾಡಿದರು. ಮಾಜಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಸದಾಶಿವನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದರು. ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಹಂಪನಗೌಡ ಬಾದರ್ಲಿ ಸೇರಿ ಇನ್ನಿತರ ಶಾಸಕರನ್ನು ಕೆಪಿಸಿಸಿ ಕಚೇರಿಗೆ ಕರೆಸಿ ಚರ್ಚೆ ನಡೆಸಿದರು.
ದುಡುಕು ನಿರ್ಧಾರ ಬೇಡ:ಈ ವೇಳೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಅನ್ಯಾಯವಾಗಿರುವ ಬಗ್ಗೆ ನಾರಾಯಣಸ್ವಾಮಿ ಪ್ರಸ್ತಾಪಿಸಿದ್ದು, ಮುಂದಿನ ತೀರ್ಮಾನವನ್ನು ಇತರ ಅಸಮಾಧಾನಿತ ಶಾಸಕರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಅದಕ್ಕೆ ಹರಿಪ್ರಸಾದ್, ಯಾವುದೇ ದುಡುಕು ನಿರ್ಧಾರ ಕೈಗೊಳ್ಳಬೇಡಿ. ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ. ತಾಳ್ಮೆಯಿಂದಿರಿ, ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಭರವಸೆ ನೀಡಿದರು.
ಸಂಜೆ ವೇಳೆಗೆ ಹಿರಿಯ ಶಾಸಕರ ಮನೆಗೆ ಖುದ್ದು ಭೇಟಿ ನೀಡಿದ ಹರಿಪ್ರಸಾದ್ ಸಮಾಲೋಚನೆ ನಡೆಸಿದರು. ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ಟಿ.ಬಿ.ಜಯಚಂದ್ರ, ಅಶೋಕ್ ಪಟ್ಟಣ್ ಅವರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ, ಹೈಕಮಾಂಡ್ ನಿರ್ಧಾರಗಳ ಕುರಿತು ಮಾಹಿತಿ ನೀಡಿ ಸಮಾಧಾನಪಡಿಸಲು ಪ್ರಯತ್ನಿಸಿದರು.ಇದಕ್ಕೂ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಕೆಲ ಸಂದರ್ಭದಲ್ಲಿ ಈ ರೀತಿಯ ವಾತಾವರಣ ನಿರ್ಮಾಣವಾಗುತ್ತದೆ. ಪಕ್ಷ ಎಲ್ಲರಿಗೂ ಮುಖ್ಯ. ಎಲ್ಲರೂ ತಾಳ್ಮೆಯಿಂದಿರಬೇಕು. ಅಸಮಾಧಾನವೆಲ್ಲ ಶಮನವಾಗುತ್ತದೆ. ಸಚಿವರ ಆಯ್ಕೆಯಲ್ಲಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ನಿರ್ಧರಿಸಲಾಗಿರುತ್ತದೆ. ಸಾಮಾಜಿಕ ನ್ಯಾಯ, ಅವಕಾಶ ವಂಚಿತರಿಗೆ ಅವಕಾಶ ನೀಡುವ ಉದ್ದೇಶದೊಂದಿಗೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಪೌರಕಾರ್ಮಿಕರ ಮಗನಿಗೂ ಸಚಿವ ಸ್ಥಾನ ನೀಡಿ ಇತಿಹಾಸ ಸೃಷ್ಟಿಸಿದ್ದೇವೆ ಎಂದರು.
ನಿಗಮ-ಮಂಡಳಿ ಸ್ಥಾನ ಕೇಳಿದ್ದಾರೆ:ನಮ್ಮಲ್ಲಿ 140 ಶಾಸಕರಿದ್ದು, 33 ಮಂದಿ ಸಚಿವರಾಗಿದ್ದಾರೆ. ಹೀಗಾಗಿ ಬಹುತೇಕ ಹಿರಿಯರಿಗೆ ಸಚಿವ ಸ್ಥಾನ ಕೈತಪ್ಪಿದೆ. ಕೆಲವರು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಬೇಕು ಎಂದಿದ್ದಾರೆ. ಸಚಿವರಾದರೆ ಮಾತ್ರ ಜನರ ಕೆಲಸ ಮಾಡಬಹುದು ಎಂಬ ಅನಿಸಿಕೆ ಬಿಟ್ಟು, ನಿಗಮ-ಮಂಡಳಿಗಳಲ್ಲೂ ಕೆಲಸ ಮಾಡಬಹುದು. ಬಸನಗೌಡ ದದ್ದಲ್ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಪಕ್ಷದಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಎಲ್ಲರಿಗೂ ಶಕ್ತಿ ತುಂಬುತ್ತೇವೆ. ಯಾರನ್ನೂ ನಾವು ಕೈಬಿಡುವುದಿಲ್ಲ ಎಂದು ಹೇಳಿದರು.
ಹಣ ನೀಡಿ ಸಚಿವ ಸ್ಥಾನ ಪಡೆಯಲಾಗಿದೆ ಎಂದು ವಿರೋಧ ಪಕ್ಷದ ಟೀಕೆಗೆ ಪ್ರತಿಕ್ರಿಯಿಸಿ, ಈ ಹಿಂದೆ ಶಾಸಕರನ್ನು ಎಷ್ಟು ಸೂಟ್‌ಕೇಸ್ ನೀಡಿ ಮುಂಬೈಗೆ ಕರೆದುಕೊಂಡು ಹೋದರು ಎಂಬುದನ್ನು ಬಿಜೆಪಿ ಹೇಳಲಿ. ವಿರೋಧ ಪಕ್ಷದ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷರ ಪರಿಸ್ಥಿತಿ ಏನಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ. ಕೇಂದ್ರದಿಂದಾಗುತ್ತಿರುವ ಅನುದಾನ ತಾರತಮ್ಯದ ಬಗ್ಗೆ ಮಾತನಾಡದವರು, ಗಂಜಲ, ಸಗಣಿ ಬಗ್ಗೆ ಮಾತನಾಡುವವರು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.