ಸಾರಾಂಶ
ಕಳೆದ ವಿಧಾನಸಭಾ ಚುನಾವಣಾ ಹೊತ್ತಲ್ಲಿ ಟಿಕೆಟ್ ಸಿಗಲಿಲ್ಲವೆಂದು ಕುಸಿತಗೊಂಡ ಜಗದೀಶ್ ಶೆಟ್ಟರ್ ಅವರು ತಮ್ಮ ಕೋಪವನ್ನು ಬದಿಗಿರಿಸಿ ಪಕ್ಷದ ಪರವಾಗಿ ಕೆಲಸ ಮಾಡಬಹುದಾಗಿತ್ತು. ತಮಗೆ ಹಲವಾರು ಹುದ್ದೆಯನ್ನು ನೀಡಿದ ಬಿಜೆಪಿ ಬಿಡುವ ಬದಲಿಗೆ ಉಳಿಯಬಹುದಾಗಿತ್ತು.
- ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್
ಕನ್ನಡಪ್ರಭ ವಾರ್ತೆ ಮೈಸೂರುರಾಜಕಾರಣದಲ್ಲಿ ಅಧಿಕಾರಕ್ಕಾಗಿ ಪಕ್ಷ ತೊರೆಯುವ ವಿಚಾರ ಸರ್ವೆ ಸಾಮಾನ್ಯವಾದರೂ ಒಬ್ಯ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಯಾದ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದು, ಅವರ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಟೀಕಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣಾ ಹೊತ್ತಲ್ಲಿ ಟಿಕೆಟ್ ಸಿಗಲಿಲ್ಲವೆಂದು ಕುಸಿತಗೊಂಡ ಜಗದೀಶ್ ಶೆಟ್ಟರ್ ಅವರು ತಮ್ಮ ಕೋಪವನ್ನು ಬದಿಗಿರಿಸಿ ಪಕ್ಷದ ಪರವಾಗಿ ಕೆಲಸ ಮಾಡಬಹುದಾಗಿತ್ತು. ತಮಗೆ ಹಲವಾರು ಹುದ್ದೆಯನ್ನು ನೀಡಿದ ಬಿಜೆಪಿ ಬಿಡುವ ಬದಲಿಗೆ ಉಳಿಯಬಹುದಾಗಿತ್ತು. ಆದರೆ ಕಾಂಗ್ರೆಸ್ ಸೇರಿಕೊಂಡು ಚುನಾವಣೆಯಲ್ಲಿ ನಿಂತು ಪರಾಭವಗೊಂಡರು. ಹೀಗಿದ್ದರೂ ಕಾಂಗ್ರೆಸ್ ಹೈಕಮಾಂಡ್ ಅವರ ಹಿರಿತನ, ಅನುಭವಕ್ಕೆ ಧಕ್ಕೆ ಆಗದಂತೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಗೌರವದಿಂದ ನಡೆಸಿಕೊಂಡಿತ್ತು. ಹೀಗಿದ್ದರೂ ಕಾಂಗ್ರೆಸ್ ತೊರೆದು ಮರಳಿ ಬಿಜೆಪಿ ಸೇರಿದ್ದು, ಅವರ ವ್ಯಕ್ತಿತ್ವಕ್ಕೆ ಅವರೇ ಮಸಿ ಬಳಿದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಒಬ್ಬ ಹಿರಿಯ ನಾಯಕನಿಗೆ ಕೊಡಬೇಕಾದ ಮನ್ನಣೆ ನೀಡಿದೆ. ಮುಂದಿನ ದಿನಗಳಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವ ಕೆಲಸ ಮಾಡುತ್ತಿತ್ತು. ಅದರೆ ಏಕಾಏಕಿ ರಾಜೀನಾಮೆ ನೀಡಿ ಹೊರ ನಡೆದ ಕ್ರಮ ಖಂಡನೀಯ ಎಂದು ಹೇಳಿದ್ದಾರೆ.ಸಚಿವರಾಗಿ, ಮುಖ್ಯಮಂತ್ರಿ, ವಿಧಾನಸಭಾ ಅಧ್ಯಕ್ಷರಾಗಿ, ಪ್ರತಿಪಕ್ಷದ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಅವರು ಇತರ ರಾಜಕಾರಣಿಗಳಿಗೆ ಮೇಲ್ಪಂಕ್ತಿಯನ್ನು ಹಾಕಿಕೊಡಬೇಕಿತ್ತು, ಮಾದರಿಯಾಗಬೇಕಿತ್ತು. ಅದರ ಬದಲಿಗೆ ಈ ರೀತಿ ಕೇವಲ ಒಂಬತ್ತು ತಿಂಗಳಲ್ಲಿ ಪಕ್ಷ ತೊರೆದು ಹೋದರು. ಇದರ ಬದಲಿಗೆ ಬಿಜೆಪಿಯಲ್ಲೇ ಉಳಿಯಬಹುದಾಗಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಪಕ್ಷ ತೊರೆದ ಕಾರಣ ಯಾವ ಆತಂಕ ಇಲ್ಲ, ನಿರಾಶೆಯೂ ಇಲ್ಲ. ವೈಯಕ್ತಿಕವಾಗಿ ಒಬ್ಬ ನಾಯಕರೆನ್ನಿಸಿಕೊಂಡವರ ನಡೆ ಸರಿ ಕಾಣಲಿಲ್ಲ ಎಂದು ಅವರು ಹೇಳಿದ್ದಾರೆ.