ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರಿಡಲು ಒತ್ತಾಯ

| Published : Jan 01 2025, 01:00 AM IST

ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರಿಡಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಫೆರಿಫೆರಲ್ ಕ್ಯಾನ್ಸರ್ ಕೇಂದ್ರ ಕಟ್ಟಡ ನಿರ್ಮಾಣ ಪ್ರಗತಿ, ನೆಫ್ರೊ- ಯುರಾಲಜಿ 100 ಹಾಸಿಗೆಯ ಆಸ್ಪತ್ರೆ ಟೆಂಡರ್ ಹಂತದಲ್ಲಿ, ನಿಮ್ಹಾನ್ಸ್ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ದಾಸಪ್ಪ ವೃತ್ತದಿಂದ ರಾಯಲ್ ಇನ್ ಹೊಟೇಲ್‌ ವರೆಗಿನ ರಸ್ತೆಯನ್ನು ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಶರೀಫ್ ಅವರಿಗೆ ಕಾಂಗ್ರೆಸ್ ನಿಯೋಗವು ಮಂಗಳವಾರ ಮನವಿ ಸಲ್ಲಿಸಿತು.

ಈ ವೇಳೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾತನಾಡಿ, ಶಾಸಕ ಕೆ. ಹರೀಶ್‌ ಗೌಡ ಅವರು ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರಿಡುವಂತೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದಾರೆ. ಮನವಿಯನ್ನು ಪರಿಗಣಿಸಿ ಡಿ.17 ರಂದು ಸಾರ್ವಜನಿಕ ಆಕ್ಷೇಪಣೆಗಳಿಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಸಿದ್ದರಾಮಯ್ಯ ಹೆಸರು ನಾಮಕರಣಕ್ಕೆ ಉದ್ದೇಶಿಸಿರುವ ರಸ್ತೆಯಲ್ಲಿ 12 ಆಸ್ಪತ್ರೆಗಳ ನಿರ್ಮಾಣಕ್ಕೆ ಸಿದ್ದರಾಮಯ್ಯ ಕಾರಣರಾಗಿದ್ದಾರೆ ಎಂದರು.

ಟ್ರಾಮಾ ಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪಿಕೆಟಿಬಿ, ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ, ಜಿಲ್ಲಾಸ್ಪತ್ರೆ, ಸರ್ಕಾರಿ ಪ್ರವೃತ್ತಿ ಮತ್ತು ಯೋಗಾ ಮಹಾವಿದ್ಯಾಲಯ ಆಸ್ಪತ್ರೆ, ಸರ್ಕಾರಿ ಹೈಟೆಕ್ ಪಂಚಕರ್ಮ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಚರಕ ಆಯುರ್ವೇದ ಸ್ನಾತಕೋತ್ತರ ಕೇಂದ್ರ ಆಸ್ಪತ್ರೆಗಳಿವೆ. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಫೆರಿಫೆರಲ್ ಕ್ಯಾನ್ಸರ್ ಕೇಂದ್ರ ಕಟ್ಟಡ ನಿರ್ಮಾಣ ಪ್ರಗತಿ, ನೆಫ್ರೊ- ಯುರಾಲಜಿ 100 ಹಾಸಿಗೆಯ ಆಸ್ಪತ್ರೆ ಟೆಂಡರ್ ಹಂತದಲ್ಲಿ, ನಿಮ್ಹಾನ್ಸ್ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಆಸ್ಪತ್ರೆಗಳನ್ನು ಸಿದ್ದರಾಮಯ್ಯ ನಿರ್ಮಾಣ ಮಾಡದಿದ್ದರೆ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನರು ಪ್ರಾಣ ಬಿಡುತ್ತಿದ್ದರು. ಅವರ ಹೆಸರನ್ನು ರಸ್ತೆಗಾಗಲೀ, ಇತರೆ ಸ್ಥಳಗಳಿಗಾಗಲೀ ಇಡಬೇಕೆಂಬುದು ಬಯಸಿದವರಲ್ಲ. ಅವರ ಕೊಡುಗೆಯನ್ನು ಮೆಚ್ಚಿ ಜನರು ಬಯಸಿರುವುದರಿಂದ ಶಾಸಕರು ಮನವಿಯನ್ನು ಕೊಟ್ಟಿದ್ದಾರೆ ಎಂದರು.

ನಮಗೆ ತಿಳಿದಿರುವ ಹಾಗೆ ಈ ರಸ್ತೆಗೆ ಯಾವ ಹೆಸರೂ ನಾಮಕರಣ ಮಾಡಿರುವುದಿಲ್ಲ. ಈ ರಸ್ತೆಯನ್ನು ವಿವಿಧ ಹೆಸರುಗಳಲ್ಲಿ ಕರೆಯುತ್ತಿರುವುದು ವಾಡಿಕೆಯಾಗಿದೆ. ಈ ಹಿಂದೆ ಕೆಲವರು ಪ್ರಿನ್ಸೆಸ್ ರಸ್ತೆ ಎಂದು ಹೆಸರಿಡಲು ಮನವಿ ಸಲ್ಲಿಸಿದ್ದರೂ ಅಂದಿನ ಬಿಜೆಪಿ ಸರ್ಕಾರ ಪ್ರಿನ್ಸೆಸ್ ರಸ್ತೆ ಎಂದು ಹೆಸರಿಡಲು ನಿರಾಕರಿಸಿತ್ತು. ಕೆಲವರು ಸಿದ್ದರಾಮಯ್ಯನವರ ಹೆಸರನ್ನು ಇಡಬಾರದೆಂದು ವಾದಿಸುತ್ತಿರುವ ಬಗ್ಗೆ ಯಾವ ಕಾರಣಕ್ಕೂ ಮಾನ್ಯತೆ ನೀಡಬಾರದು ಹಾಗೂ ಮೈಸೂರಿನ ಜನರ ಇಚ್ಛೆಯಂತೆ ಈ ರಸ್ತೆಗೆ ಸಿದ್ದರಾಮಯ್ಯ ಮಾರ್ಗ ಎಂದು ಅತಿ ಶೀಘ್ರವಾಗಿ ನಾಮಕರಣ ಮಾಡುವಂತೆ ಅವರು ಮನವಿ ಮಾಡಿದರು.

ಈ ವೇಳೆ ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮಾಜಿ ಮೇಯರ್ ಗಳಾದ ಬಿ.ಎಲ್. ಭೈರಪ್ಪ, ಆರೀಫ್ ಹುಸೇನ್, ಟಿ.ಬಿ. ಚಿಕ್ಕಣ್ಣ, ಮೋದಾಮಣಿ, ಪುಷ್ಪಾಲತಾ ಚಿಕ್ಕಣ್ಣ, ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಸೈಯದ್ ಹುಸೇನ್, ಕೆಪಿಸಿಸಿ ಕಾರ್ಯದರ್ಶಿ ಎನ್. ಭಾಸ್ಕರ್, ಮಾಧ್ಯಮ ವಕ್ತಾರ ಕೆ. ಮಹೇಶ್ ಮೊದಲಾದವರು ಇದ್ದರು.

-----

ಬಾಕ್ಸ್...

ದಾಖಲಾತಿಯಲ್ಲಿ ಪ್ರಿನ್ಸೆಸ್ ಹೆಸರಿಲ್ಲ- ಪಾಲಿಕೆ ಆಯುಕ್ತ

1999 ರಿಂದ 2024 ರವರೆಗಿನ ಎಲ್ಲಾ ಕಡತ ಪರಿಶೀಲನೆ ನಡೆಸಲಾಗಿದೆ. ಈಗ 1964 ರಿಂದ 1999 ರವರೆಗಿನ ಕಡತ ಪರಿಶೀಲನೆ ಮಾಡುತ್ತಿದ್ದೇವೆ. ಅದು ಕೂಡ ಬಹುತೇಕ ಮುಕ್ತಾಯವಾಗಿದೆ. ಈವರೆಗೂ ಪರಿಶೀಲನೆ ಮಾಡಿರುವ ಕಡತಗಳಲ್ಲಿ ಎಲ್ಲಿಯೂ ಪ್ರಿನ್ಸೆಸ್ ಹೆಸರು ಪ್ರಸ್ತಾಪ ಆಗಿಲ್ಲ. ಜೊತೆಗೆ ಕೆಆರ್‌ ಎಸ್ ರಸ್ತೆಗೆ ಅಧಿಕೃತವಾಗಿ ಯಾವ ಹೆಸರೂ ಇಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಶರೀಫ್ ತಿಳಿಸಿದರು.

ಪಾಲಿಕೆಯ 9 ವಲಯಗಳ ಸಹಾಯಕ ಆಯುಕ್ತರಿಂದ ಮಾಹಿತಿ ಪಡೆದಿದ್ದೇನೆ. ಅವರು ಕೂಡ ಪ್ರಿನ್ಸೆಸ್ ಹೆಸರು ಇದೆ ಎಂಬುದಕ್ಕೆ ಯಾವ ಅಧಿಕೃತ ದಾಖಲೆ ಇಲ್ಲ ಎಂದು ಹೇಳಿದ್ದಾರೆ. ನಮ್ಮ ವ್ಯಾಪ್ತಿಯ ದಾಖಲೆ ಪರಿಶೀಲನೆ ಬಹುತೇಕ ಮುಕ್ತಾಯವಾಗಿದ್ದು, ಗೆಜೆಟಿಯರ್‌ ನಲ್ಲಿ ಆ ಹೆಸರು ಇದಿಯೋ, ಇಲ್ಲವೋ ಎಂಬುದು ನನಗೆ ಮಾಹಿತಿ ಇಲ್ಲ. ಆ ದಾಖಲೆ ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ. ಪಾಲಿಕೆಯ ಕೌನ್ಸಿಲ್ ವ್ಯಾಪ್ತಿಯಲ್ಲಿ ಪ್ರಿನ್ಸೆಸ್ ಹೆಸರಂತೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.