ಪಕ್ಷಕ್ಕೆ ಮೋಸ ಮಾಡುವವರ ಬಗ್ಗೆ ಕೆಪಿಸಿಸಿ ಗಮನಕ್ಕೆ: ಶಾಸಕಿ ಲತಾ

| Published : Oct 17 2025, 01:02 AM IST

ಸಾರಾಂಶ

ಟಿಎಪಿಸಿಎಂಎಸ್ ಚುನಾವಣೆ ಸಂಬಂಧ ಸಾಮಾಜಿಕ ನ್ಯಾಯದಡಿ ನಮ್ಮ ಬಳಿ ಬಂದ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ.

ಹರಪನಹಳ್ಳಿ: ಕಾಂಗ್ರೆಸ್ ಪಕ್ಷದಲ್ಲಿದ್ದು ಪಕ್ಷಕ್ಕೆ ಪದೇ ಪದೇ ಮೋಸ ಮಾಡುವವವರನ್ನು ಪಕ್ಷ ಸಹಿಸುವುದಿಲ್ಲ ಅಂತಹವರ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.ಪಟ್ಟಣದ ಟಿಎಪಿಎಂಎಸ್ ಕಛೇರಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಟಿಎಪಿಸಿಎಂಎಸ್ ಚುನಾವಣೆ ಸಂಬಂಧ ಸಾಮಾಜಿಕ ನ್ಯಾಯದಡಿ ನಮ್ಮ ಬಳಿ ಬಂದ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಇನ್ನು ಕೆಲವರು ನಮ್ಮ ಬಳಿ ಬಂದು ಅವಕಾಶ ಕೇಳಿಲ್ಲ. ಅವರಿಗೆ ಬೇರೆ ಕಡೆ ಅಪ್ಪಣೆ ಸಿಕ್ಕಿರಬಹುದು. ಆ ಕಾರಣಕ್ಕೆ ಅವರು ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾದರೆ ಮಾಡಲಿ ಯಾರೇ ಆಗಲಿ ಕಾಂಗ್ರೆಸ್ ಪಕ್ಷದ ಚೌಕಟ್ಟಿನಲ್ಲಿ ಸ್ಪರ್ಧೆ ಮಾಡಬೇಕೆಂಬುದು ಪಕ್ಷದ ನಿಲುವು ಆಗಿದೆ ಎಂದರು.

ಅಧಿಕೃತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲಿಸುವುದು ಬಿಟ್ಟು ಪ್ರತ್ಯೇಕ ಗುಂಪುಗಾರಿಕೆ ಮಾಡಿಕೊಂಡು ಸ್ಪರ್ಧೆ ಮಾಡುತ್ತಾರೆ ಎಂದರೆ ಅಂತಹವರ ಬಗ್ಗೆ ಕ್ರಮವಹಿಸಲು ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರ ಮೂಲಕ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು ಎಂದರು.

ಟಿಎಪಿಸಿಎಂಎಸ್ ಚುನಾವಣೆಯಲ್ಲಿ 14 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಎಲ್ಲಾ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಪಕ್ಷದಲ್ಲಿ ಇದೇ ರೀತಿ ಮೋಸ ಮಾಡುತ್ತಾ ಹೋದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಆದ ಪರಿಸ್ಥಿತಿನೇ 2028ರ ಸಂದರ್ಭದಲ್ಲಿ ಮರುಕಳಿಸಬಹುದು ಎಂದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ವಿ.ಅಂಜಿನಪ್ಪ, ಕುಬೇರಗೌಡ ಮುಖಂಡರು ಇದ್ದರು.