ಸುಪ್ರೀಂಕೋರ್ಟ್‌ಗೆ ಕೆಪಿಸಿಸಿ ಮಹಿಳಾ ಘಟಕ ಕೃತಜ್ಞತೆ

| Published : Jan 10 2024, 01:45 AM IST

ಸಾರಾಂಶ

ಬಿಲ್ಕಿಸ್‌ ‍ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ ಆದೇಶ ರದ್ದುಗೊಳಿಸಿದ ಕ್ರಮಕ್ಕೆ ಅಭಿನಂದನೆ

- ಬಿಲ್ಕಿಸ್‌ ‍ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ ಆದೇಶ ರದ್ದುಗೊಳಿಸಿದ ಕ್ರಮಕ್ಕೆ ಅಭಿನಂದನೆ----

ಕನ್ನಡಪ್ರಭ ವಾರ್ತೆ ಮೈಸೂರು

ಗುಜರಾತಿನ ಬಿಲ್ಕಿಸ್‌ ‍ಬಾನು ಅತ್ಯಾಚಾರ ಪ್ರಕರಣದಲ್ಲಿ ಸನ್ನಡತೆಯ ಆಧಾರದ ಮೇಲೆ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್‌ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್ ಗೆ ದೇಶದ ಮಹಿಳೆಯರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಡಾ. ಪುಷ್ಪಾ ಅಮರನಾಥ್‌ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಲ್ಕಿಸ್‌ ‍ಬಾನು ಪ್ರಕರಣದ 20 ವರ್ಷಗಳ ಸತತ ಹೋರಾಟಕ್ಕೆ ಮತ್ತೆ ನ್ಯಾಯ ಸಿಕ್ಕಿದೆ. ಸುಪ್ರೀಂಕೋರ್ಟ್ ತೀರ್ಪಿನ ಮೂಲಕ ಯಾವುದೇ ಧರ್ಮ, ಜಾತಿಯಾದರು ಎಲ್ಲರೂ ಸಮಾನರು. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದೆ. ನ್ಯಾಯಾಂಗ ಅನ್ಯಾಯಕ್ಕೆ ಒಳಗಾದವರ ಪರ ಇದೆ ಎಂಬುದನ್ನು ಈ ತೀರ್ಪು ದೃಢಪಡಿಸಿದೆ ಎಂದು ಹೇಳಿದರು.

ಗುಜರಾತ್‌ ನಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಬಿಲ್ಕಿಸ್‌‍ ಬಾನು ಪ್ರಕರಣ ನಡೆಯಿತು. ಗುಜರಾತ್‌ ಸರ್ಕಾರವೇ ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿತು. ಈ ತೀರ್ಮಾನ ತಪ್ಪೆಂದು ನ್ಯಾಯಾಲಯ ಚಾಟಿ ಬೀಸಿದೆ ಎಂದರು.

ಬಿಜೆಪಿ ಯಾವತ್ತೂ ಮಹಿಳೆಯರ ಪರವಾಗಿಲ್ಲ. ಬೇಟಿ ಪಡಾವೋ ಬೇಟಿ ಬಚಾವೋ ಹೇಳಿಕೆಗೆ ಸೀಮಿತವಾಗಿದೆ. ಕುಸ್ತಿ ಪಟು ಸಾಕ್ಷಿ ಮಲ್ಲಿಕ್‌ ಯಾಕೇ ತಮ್ಮ ಪದಕವನ್ನು ರಸ್ತೆಯಲ್ಲಿ ಇಟ್ಟು ಹೋದರು? ಮಹಿಳೆಯರಿಗೆ ನ್ಯಾಯ ಕೊಡಲು ಸೋತ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಅತ್ಯಾಚಾರ ಮಾಡಿದವರು ಬಿಡುಗಡೆಯಾದಾಗ ಹಾರ ಹಾಕಿ ಸ್ವಾಗತಿಸುವುದು ಗುಜರಾತ್‌ ಮಾದರಿಯೇ? ಇವರಿಗೆ ಮತ್ತೊಮೆ ಅಧಿಕಾರ ಕೊಟ್ಟರೆ ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಾರೆ ಎಂದು ಅವರು ಟೀಕಿಸಿದರು.

ರಾಷ್ಟ್ರಪತಿಯನ್ನು ಆಹ್ವಾನಿಸಿ

ಕೇಂದ್ರದ ಬಿಜೆಪಿ ಸರ್ಕಾರ ರಾಮನ ದೇವಸ್ಥಾನ ಉದ್ಘಾಟನೆಯಲ್ಲಿ ಮುಳುಗಿದೆ. ನಾವೆಲ್ಲರೂ ರಾಮನ ಭಕ್ತರು, ರಾಮ ನಾಡಿನಲ್ಲಿ ಸ್ತ್ರೀಯರಿಗೆ ಕ್ಷೇಮ, ಸಮಾನತೆ ಇರಬೇಕೆಂದು ಬಯಸುತ್ತೇವೆ. ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಮ ಮಂದಿರ ಉದ್ಘಾಟನೆ ಆಹ್ವಾನ ನೀಡಲಾಗಿದೆಯೇ? ಯಾಕೇ ನೀಡಿಲ್ಲ. ಈಗಲಾದರೂ ಆಹ್ವಾನಿಸಿ ಮಹಿಳೆಯರೆಲ್ಲರಿಗೂ ಖುಷಿ ತರಬೇಕು. ಸಂಸತ್ತು ಉದ್ಘಾಟನೆಗೆ ರಾಷ್ಟ್ರಪತಿಯನ್ನು ಆಹ್ವಾನಿಸದಿದ್ದು ತಪ್ಪು ಎಂದು ಅವರು ಖಂಡಿಸಿದರು.

ನಿಜವಾದ ರಾಮ ಭಕ್ತ ಸಿದ್ದರಾಮಯ್ಯ ಅವರಿಗೆ ದೇವಸ್ಥಾನ ಉದ್ಘಾಟನೆಗೆ ಅವರಿಗೆ ಆಹ್ವಾನ ಕೊಟ್ಟಿಲ್ಲ. ಅವರ ಹೆಸರಿನಲ್ಲಿಯೇ ರಾಮ ಇದ್ದಾನೆ. ರಾಮ ರಾಜ್ಯದ ಕನಸನ್ನು ನನಸು ಮಾಡುತ್ತಿದ್ದಾರೆ. ಶ್ರೀರಾಮ ರಾಜಕೀಯಕ್ಕೆ ಅಲ್ಲ. ಎಲ್ಲರನ್ನೂ ಒಳಗೊಂಡಂತೆ ದೇಗುಲ ಉದ್ಘಾಟನೆಯಾಗಲಿ ಎಂದು ಅವರು ಒತ್ತಾಯಿಸಿದರು.

ಮಾಜಿ ಮೇಯರ್ ಗಳಾದ ಮೋದಾಮಣಿ, ರಾಜೇಶ್ವರಿ, ಪುಷ್ಪಲತಾ ಚಿಕ್ಕಣ್ಣ, ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಮುಖಂಡರಾದ ಲತಾ ಮೋಹನ್‌, ರಾಧಾಮಣಿ, ಸುಶೀಲಾ, ಇಂದಿರಾ, ಚಂದ್ರಕಲಾ, ಭವ್ಯ, ಗಾಯತ್ರಿ ಮೊದಲಾದವರು ಇದ್ದರು.

---

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೊಡುವಂತೆ ಪಕ್ಷದ ಹೈಕಮಾಂಡ್‌ ಗೆ ಮನವಿ ಮಾಡಿದ್ದೇನೆ. 15 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. 2018, 2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗಲಿಲ್ಲ. ಸ್ಥಳೀಯ ಸಂಸ್ಥೆಗೂ ಅವಕಾಶ ದೊರೆಯಲಿಲ್ಲ. ಹೀಗಾಗಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಮಾಡಿಕೊಟ್ಟರೆ ಸಂಸತ್ತಿನಲ್ಲಿ ಜನ ಸಾಮಾನ್ಯರು, ರೈತರ ದನಿಯಾಗುತ್ತೇನೆ.

- ಡಾ. ಪುಷ್ಪಾ ಅಮರನಾಥ್, ಅಧ್ಯಕ್ಷೆ, ಕೆಪಿಸಿಸಿ ಮಹಿಳಾ ಘಟಕ