ಪರೀಕ್ಷೆಗಳನ್ನು ಪ್ರಾಮಾಣಿಕವಾಗಿ ನಡೆಸಲು ಕೆಪಿಎಸ್ಸಿ ವಿಫಲ: ವಿಪ ಸದಸ್ಯ ಎಸ್‌.ವಿ.ಸಂಕನೂರ

| Published : Jun 18 2025, 11:48 PM IST

ಪರೀಕ್ಷೆಗಳನ್ನು ಪ್ರಾಮಾಣಿಕವಾಗಿ ನಡೆಸಲು ಕೆಪಿಎಸ್ಸಿ ವಿಫಲ: ವಿಪ ಸದಸ್ಯ ಎಸ್‌.ವಿ.ಸಂಕನೂರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಉನ್ನತ ಅಧಿಕಾರಿಗಳ ಆಯ್ಕೆ ಪರೀಕ್ಷೆ ನಡೆಸುವ ಕೆಪಿಎಸ್ಸಿ ಇಂದು ಪರೀಕ್ಷೆಗಳನ್ನು ಪ್ರಾಮಾಣಿಕವಾಗಿ ನಡೆಸಲು ವಿಫಲವಾಗಿದೆ

ಕುಮಟಾ: ರಾಜ್ಯದಲ್ಲಿ ಉನ್ನತ ಅಧಿಕಾರಿಗಳ ಆಯ್ಕೆ ಪರೀಕ್ಷೆ ನಡೆಸುವ ಕೆಪಿಎಸ್ಸಿ ಇಂದು ಪರೀಕ್ಷೆಗಳನ್ನು ಪ್ರಾಮಾಣಿಕವಾಗಿ ನಡೆಸಲು ವಿಫಲವಾಗಿದೆ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಇಲ್ಲಿನ ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಈ ಬಗ್ಗೆ ಸದನದಲ್ಲಿ ಚರ್ಚಿಸಿ ಕೆಲವು ಮಾರ್ಪಾಟು ತಂದಿದ್ದೇವೆ. ರಾಜ್ಯದಲ್ಲಿ ಖಾಲಿ ಇರುವ ೨,೬೦,೦೦೦ ಸರ್ಕಾರಿ ಉದ್ಯೋಗ ತುಂಬುವಂತೆ ಸರ್ಕಾರದ ನಿರಂತರ ಒತ್ತಡ ಹೇರುತ್ತಿದ್ದೇನೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಮತ್ತಿತರ ಹೆಚ್ಚಿನ ಸೌಲಭ್ಯ ಇಲ್ಲದಿರುವುದರಿಂದ ಖಾಸಗಿ ಬೃಹತ್ ಉದ್ಯಮಗಳು ಇಲ್ಲಿ ಬರಲು ಮನಸ್ಸು ಮಾಡುತ್ತಿಲ್ಲ. ಆದರೂ ಮುಂದಿನ ೫-೬ ತಿಂಗಳೊಳಗೆ ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆಸುತ್ತೇನೆ ಎಂದರು.

ಡಾ.ಎ.ವಿ. ಬಾಳಿಗಾ ಕಾಲೇಜು ಉತ್ತರಕನ್ನಡ ಜಿಲ್ಲೆಯ ಮೊದಲ ಪದವಿ ಕಾಲೇಜಾಗಿದ್ದು, ೭೬ ವರ್ಷ ಕಳೆದಿದೆ. ವಿದ್ಯಾರ್ಥಿ ಜೀವನದ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಕೂಡ ಮಹತ್ವದ್ದಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ವಾಣಿಜ್ಯ ವಿದ್ಯಾಭ್ಯಾಸದ ಮಹತ್ವ ಹೆಚ್ಚಿದೆ. ಕಲೆ ಹಾಗೂ ವಿಜ್ಞಾನಕ್ಕೂ ಮಹತ್ವ ಇದೆ. ಆದರೆ ಅಂಕಿಅಂಶಗಳ ಪ್ರಕಾರ ವಾಣಿಜ್ಯ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.

ವಿದ್ಯಾರ್ಥಿ ಜೀವನದಲ್ಲಿ ಸಮಯದ ಮಹತ್ವ ಅರಿತು ಉತ್ತಮ ವಿದ್ಯಾಭ್ಯಾಸದ ಜತೆಗೆ ಜ್ಞಾನ, ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸ್ವಾಮಿ ವಿವೇಕಾನಂದರ ಮಾತಿನಂತೆ ವಿದ್ಯಾರ್ಥಿಗಳು ಶಿಸ್ತು, ಶೃದ್ಧೆ, ಸಮರ್ಪಣೆ, ಸಂಕಲ್ಪ ನಿಯಮಗಳನ್ನು ಅಳವಡಿಸಿಕೊಂಡಾಗ ಗುರಿ ತಲುಪಲು ಸಾಧ್ಯ. ವಿನಯ, ಶ್ರದ್ಧೆ, ಪ್ರಾಮಾಣಿಕತೆ, ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಇರಬೇಕಾದ ಮುಖ್ಯಗುಣಗಳು, ವಿದ್ಯಾರ್ಥಿಯ ಸಾಧನೆಗೆ ಶ್ರೀಮಂತಿಕೆ ಬೇಕಾಗಿಲ್ಲ. ಬಡತನದಲ್ಲಿ ಬೆಳೆದ ಎ.ಪಿ.ಜೆ ಅಬ್ದುಲ್ ಕಲಾಂ, ಡಾ.ಅಂಬೇಡ್ಕರ್ ಮುಂತಾದವರು ಇದಕ್ಕೆ ಉದಾಹರಣೆಯಾಗಿದ್ದಾರೆ ಎಂದರು.

ಕೆನರಾ ಕಾಲೇಜು ಸೊಸೈಟಿ ಕಾರ್ಯಾಧ್ಯಕ್ಷ ಹನುಮಂತ ಶಾನಭಾಗ, ಎಸ್.ಪಿ. ಎಂ.ನಾರಾಯಣ ಮಾತನಾಡಿದರು. ಸೊಸೈಟಿ ಉಪಾಧ್ಯಕ್ಷ ಡಿ.ಎಂ. ಕಾಮತ, ಪದವಿ ವಿಭಾಗದ ಪ್ರಾಚಾರ್ಯ ಡಾ. ಎನ್.ಡಿ. ನಾಯ್ಕ, ಪದವಿ ಪೂರ್ವ ವಿಭಾಗದ ಪ್ರಾಚಾರ್ಯೆ ನಿರ್ಮಲಾ ಪ್ರಭು, ಸಿಪಿಐ ಯೋಗೇಶ ಇನ್ನಿತರರು ಇದ್ದರು.

ಯೂನಿಯನ್ ಮುಖ್ಯಸ್ಥ ಡಾ.ಅರವಿಂದ ನಾಯಕ, ಯೂನಿಯನ್ ಕಾರ್ಯದರ್ಶಿಗಳಾದ ಶಿವಪ್ರಸಾದ ನಾಯಕ, ಶ್ರೀಲತಾ ಕಿಣಿ, ನಮನ ಕವರಿ, ಬಿ.ಎಲ್.ಸೃಜನ್, ರಂಜಿತಾ ಪಡವಲ್ಕರ್, ಶ್ರೀನಿಧಿ ನಾಯಕ ಇದ್ದರು.