ಸಾರಾಂಶ
ಧಾರವಾಡ:
ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಭಾನುವಾರ ಕೆಪಿಎಸ್‌ಇ ವತಿಯಿಂದ ಗೆಜೆಟೆಡ್ ಪ್ರೊಬೇಷನರಿ ಗ್ರುಪ್ ಪರೀಕ್ಷೆ ಶಾಂತಿಯುತವಾಗಿ ನಡೆದವು.ಇತ್ತೀಚೆಗೆ ಕೆಪಿಎಸ್‌ಇ ವತಿಯಿಂದ ೩೮೪ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು ಭಾನುವಾರ ಪರೀಕ್ಷೆ ನಡೆಯಿತು. ಬೆಳಗ್ಗೆ ೧೦ರಿಂದ ೧೨ರ ವರೆಗೆ ಸಾಮಾನ್ಯ ಜ್ಞಾನ ಹಾಗೂ ಮಧ್ಯಾಹ್ನ ೨ರಿಂದ ೪ರ ವರೆಗೆ ಸಾಮಾನ್ಯ ಜ್ಞಾನ ವಿಷಯದ ಕುರಿತು ಪರೀಕ್ಷೆ ನಡೆದವು.ಜಿಲ್ಲೆಯ ಕಿಟೆಲ್ ವಿಜ್ಞಾನ ಕಾಲೇಜು, ಸರ್ಕಾರಿ ಪ್ರೌಢಶಾಲೆ, ವಿದ್ಯಾರಣ್ಯ ಪಿಯು ಕಾಲೇಜು, ಅಂಜುಮನ್ ಪ್ರೌಢಶಾಲೆ, ಮಲ್ಲಸಜ್ಜನ ಆಂಗ್ಲ ಮಾಧ್ಯಮ ಶಾಲೆ ಹೀಗೆ ಸುಮಾರು ೨೯ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಧ್ಯೆ ಪರೀಕ್ಷೆ ನಡೆಸಲಾಯಿತು.೮೯೬೫ ಅಭ್ಯರ್ಥಿಗಳು ಗೈರು:ಜಿಲ್ಲೆಯಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಹಂತದಲ್ಲಿ ನಡೆದ ಪರೀಕ್ಷೆಯಲ್ಲಿ ೮೯೬೫ ಅಭ್ಯರ್ಥಿಗಳು ಗೈರು ಉಳಿದಿದ್ದಾರೆ. ಮುಂಜಾನೆ ೧೦ರಿಂದ ೧೨ರ ವರೆಗೆ ನಡೆದ ಪರೀಕ್ಷೆಗೆ ೯೫೨೨ ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದರೆ ೫೦೫೦ ಅಭ್ಯರ್ಥಿಗಳು ಹಾಜರಾಗಿದ್ದು, ೪೪೭೨ ಅಭ್ಯರ್ಥಿಗಳು ಗೈರಾಗಿದ್ದರು. ಅದೇ ರೀತಿ ಮಧ್ಯಾಹ್ನ ೨ರಿಂದ ೪ರ ವರೆಗೆ ನಡೆದ ಪರೀಕ್ಷೆಗೆ ೯೫೨೨ ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದು, ೫೦೨೯ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರೆ, ೪೪೯೩ ಅಭ್ಯರ್ಥಿಗಳು ಗೈರಾಗಿದ್ದರು.ಸೂಕ್ತ ಪೊಲೀಸ್ ಬಂದೋಬಸ್ತ್:ಜಿಲ್ಲೆಯ ೨೯ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.