ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿ ನಿರ್ವಹಣೆಯಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್.ಐಡಿಎಲ್) ವು ಹಿಂದೆ ಬಿದ್ದಿದೆ ಎಂದು ತಾಪಂ ಆಡಳಿತಾಧಿಕಾರಿ ಸಿದ್ಧಗಂಗಮ್ಮ ನಿಯಮಿತದ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಕೆಆರ್.ಐಡಿಎಲ್ ಕೈಗೊಂಡಿರುವ ಕಾಮಗಾರಿ ವರದಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ನಿಮಗೆ ನಿರ್ವಹಿಸಿದ ಕಾಮಗಾರಿಯನ್ನು 10 ರಿಂದ 12 ವರ್ಷಗಳಾದರೂ ಸಂಪೂರ್ಣಗೊಳಿಸಿಲ್ಲ. ಪ್ರತಿ ಸಭೆಯಲ್ಲೂ ಸಮಸ್ಯೆ ಇದೆ ಎನ್ನುತ್ತೀರಿ ಎಂದು ಎಇಇ ಕೀರ್ತನ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗುತ್ತಿದ್ದೀರಿ. 2012-13ರಲ್ಲಿ ಆರಂಭಗೊಂಡಿರುವ ಹೊಸವಾರಂಚಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಇದೀಗ ಹೆಚ್ಚುವರಿ 5 ಲಕ್ಷ ರು. ಅನುದಾನ ಕೋರುತ್ತಿದ್ದೀರಲ್ಲ ಸರಿಯೇ? ನಿವೇಶನದ ಸಮಸ್ಯೆ, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳೊಂದಿಗೆ ಅಥವಾ ಹಿರಿಯ ಅಧಿಕಾರಿಗಳೊಂದಿಗೆ ಸತತ ಫಾಲೋ ಅಪ್ ಇದ್ದಲ್ಲಿ ಇಂತಹ ಸಮಸ್ಯೆ ಉಳಿಯಲು ಸಾಧ್ಯವಿಲ್ಲ. ಅದನ್ನು ನೀವು ಮಾಡುತ್ತಿಲ್ಲ. ಮುಂದಿನ 15 ದಿನಗಳೊಳಗೆ ಎಷ್ಟು ಬಾಕಿ ಕಾಮಗಾರಿ ಪೂರ್ಣಗೊಳಿಸುತ್ತೀರಿ ತಿಳಿಸಿ. ಈ ಕುರಿತು ಸಿಇಒಗೆ ನಾನು ಮಾಹಿತಿ ನೀಡಲಿದ್ದೇನೆ ಎಂದರು.ನೀವು ಕಾಮಗಾರಿ ನಿರ್ವಹಿಸುವಲ್ಲಿ ವಿಫಲರಾಗಿರುವ ಕಾರಣ ತಾಲೂಕಿನಲ್ಲಿ ನಿರ್ಮಿತಿ ಕೇಂದ್ರವು ಹನಗೋಡು, ಧರ್ಮಾಪುರ ಮುಂತಾದ ಕಡೆಗಳಲ್ಲಿ ನಿರ್ಮಾಣ ಕಾಮಗಾರಿಯನ್ನು ಪಡೆದುಕೊಂಡಿದೆ. ಸರ್ಕಾರದಿಂದ ಮುಂಗಡವಾಗಿ ಪಡೆದಿರುವ ಹಣಕ್ಕೆ ನೀವು ಬಡ್ಡಿ ಕೊಡಬೇಕಾದೀತು ನೆನಪಿರಲಿ ಎಂದು ಎಚ್ಚರಿಸಿದರು.
ಎಇಇ ಕೀರ್ತನ್ ಮಾತನಾಡಿ, ಅನುದಾನದ ಲಭ್ಯತೆಯನ್ನು ಆಧರಿಸಿ ಕಾಮಗಾರಿ ಸಂಪೂರ್ಣಗೊಳಿಸಬೇಕಿದೆ. ಅನುದಾನ ಮಂಜೂರಾಗುವ ಸಾಧ್ಯತೆ ಇದೆ. ಶೀಘ್ರ ಕಾಮಗಾರಿ ಸಂಪನ್ನಗೊಳಿಸಲಾಗುವುದೆಂದರು.ಸೆಸ್ಕ್ ಹುಣಸೂರು ಉಪವಿಭಾಗದ ಎಇಇ ಜಗದೀಶ್ ಮಾತನಾಡಿ, ಕೇಂದ್ರ ಸರ್ಕಾರ ಆದಿವಾಸಿ ಗಿರಿಜನರಿಗಾಗಿ ಪಿಎನ್ ಜನ್ ಮನ್ ಯೋಜನೆ ಜಾರಿಗೊಳಿಸಿದ್ದು, ಪ್ರತಿಮನೆಗೆ ವಿದ್ಯುತ್ ಸಂಪರ್ಕ ಉಚಿತವಾಗಿ ಮಾಡಿಕೊಡಲಾಗುವುದು. ಅಲ್ಲದೇ ರಾಜ್ಯ ಸರ್ಕಾರದ ನಿಮಯದಂತೆ ತಿಂಗಳಿಗೆ 58 ಯೂನಿಟ್ ವಿದ್ಯುತ್ ಉಚಿತವಾಗಿ ಪೂರೈಸಲಾಗುವುದು. ಉಪವಿಭಾಗ ವ್ಯಾಪ್ತಿಯಲ್ಲಿ 4 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಪಂ ಯೋಜನಾಧಿಕಾರಿ ರಾಜೇಶ್ ಮಾತನಾಡಿ, ನಾಗಪುರ ಪುನರ್ವಸತಿ ಕೇಂದ್ರದ ಕೆಲವು ನಿವಾಸಿಗಳು ತಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲವೆಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದು, ಫಲಾನುಭವಿಗಳ ಪಟ್ಟಿಯನ್ನು ತಾಪಂಗೆ ನೀಡಿರೆಂದು ಸೂಚಿಸಿದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲ್ ಕುಮಾರ ಮಾತನಾಡಿದರು.
ತಾಪಂ ಇಒ ಕೆ. ಹೊಂಗಯ್ಯ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.