ಕ್ಷೇತ್ರದ ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ ಶ್ರೀಸಾಮಾನ್ಯರ ಸುಲಿಗೆ ನಡೆಯುತ್ತಿದೆ. ಇದರ ಬಗ್ಗೆ ಮಾತನಾಡದ ಶಾಸಕರು ಪಾರದರ್ಶಕವಾಗಿ ನಡೆಯುತ್ತಿರುವ ಹಾಲು ಶಿಥಿಲೀಕರಣ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿ ನೌಕರ ವರ್ಗದ ತೇಜೋವಧೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಹಾಲು ಶಿಥಲೀಕರಣದಲ್ಲಿ ಎಲ್ಲವೂ ಪಾರದರ್ಶಕವಾಗಿದ್ದರೂ ಕ್ಷೇತ್ರದ ಶಾಸಕರು ಮತ್ತು ಅವರ ಬೆಂಬಲಿಗರು ಅನಗತ್ಯ ಆರೋಪಗಳನ್ನು ಮಾಡಿ ಕರ್ತವ್ಯ ನಿರತ ಸಿಬ್ಬಂದಿ ಮತ್ತು ಕೆಲ ಡೇರಿ ಕಾರ್ಯದರ್ಶಿಗಳ ತೇಜೋವಧೆ ಮಾಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ತಾಲೂಕಿನ ಇಬ್ಬರು ಮನ್ಮುಲ್ ನಿರ್ದೇಶಕರು ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗೋಷ್ಠಿ ನೆಪದಲ್ಲಿ ಬಹಿರಂಗ ಸಭೆ ನಡೆಸಿದ ಮನ್ಮುಲ್ ನಿರ್ದೇಶಕರಾದ ಡಾಲು ರವಿ ಮತ್ತು ಎಂಬಿ.ಹರೀಶ್ ಅವರುಗಳು ಶಾಸಕ ಎಚ್.ಟಿ.ಮಂಜು ವಿರುದ್ಧ ಮುಗಿಬಿದ್ದರು.

ನಿದೇಶಕ ಡಾಲು ರವಿ ಮಾತನಾಡಿ, ಕ್ಷೇತ್ರದ ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ ಶ್ರೀಸಾಮಾನ್ಯರ ಸುಲಿಗೆ ನಡೆಯುತ್ತಿದೆ. ಇದರ ಬಗ್ಗೆ ಮಾತನಾಡದ ಶಾಸಕರು ಪಾರದರ್ಶಕವಾಗಿ ನಡೆಯುತ್ತಿರುವ ಹಾಲು ಶಿಥಿಲೀಕರಣ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿ ನೌಕರ ವರ್ಗದ ತೇಜೋವಧೆ ಮಾಡಿದ್ದಾರೆ ಎಂದು ದೂರಿದರು.

ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದಾರೆ. ಡೈರಿಗಳ ಅಭಿವೃದ್ಧಿ ಮತ್ತು ಸುಧಾರಣೆಗಾಗಿ ಸಂಘದ ಪ್ರತಿನಿಧಿಗಳು ನಮ್ಮನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ. ಶಾಸಕರಾಗಿದ್ದೂ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ನಿಮಗೆ ಸೋಲಿನ ರುಚಿ ತೋರಿಸಲಾಗಿದೆ. ಮನ್ಮುಲ್ ಚುನಾವಣೆ ಸೋಲಿನಿಂದ ಹತಾಶವಾಗಿರುವ ನೀವು ನನ್ನನ್ನು ಟಾರ್ಗೆಟ್ ಮಾಡಿ ಹಾಲು ಶಿಥಿಲೀಕರಣ ಘಟಕದ ಆವರಣದಲ್ಲಿ ಪ್ರತಿಭಟನೆ ಮಾಡಿದ್ದೀರಿ ಎಂದು ಆರೋಪಿಸಿದರು.

ನಾನು ಮೂರು ಬಾರಿ ಮನ್ಮುಲ್ ನಿರ್ದೇಶಕನಾಗಿ ಆಯ್ಕೆಯಾಗಿದ್ದೇನೆ. ಕಳೆದ ಅವಧಿಯಲ್ಲಿ ನೀವು ಮನ್ಮುಲ್ ನಿರ್ದೇಶಕರಾಗಿದ್ದಿರಿ. ನಿಮ್ಮ ಅವಧಿಯಲ್ಲಿ ನಡೆದ ಹಾಲು-ನೀರು ಹಗರಣದ ಬಗ್ಗೆ ತನಿಖೆಗೆ ಒತ್ತಾಯಿಸಿ. ಈ ಹಿಂದೆ ನೀವು ಮನ್ಮುಲ್ ನೇಮಕಾತಿ ಸಮಿತಿ ಸದಸ್ಯರಾಗಿದ್ದಿರಿ. ನೇಮಕಾತಿಯಲ್ಲಿ ಲೋಪವಾಗಿದ್ದರೆ ಅದರ ಬಗ್ಗೆ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.

ಈಗ ಹಾಲಿನ ಪುಡಿ ಹಗರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಈಗಾಗಲೇ 11 ಜನರ ಬಂಧನವಾಗಿದೆ. ಹಗರಣದ ಮತ್ತಷ್ಟು ಜನ ಪೊಲೀಸರ ತನಿಖೆಯಲ್ಲಿ ಬಯಲಿಗೆ ಬರಲಿದ್ದಾರೆ. ವಿವಿಧ ಹಾಲಿನ ಡೈರಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಸಭೆ ಮುಂದೆ ನಿಲ್ಲಿಸಿ ತಮಗೆ ಶಾಸಕರಿಂದ ಉಂಟಾಗುತ್ತಿರುವ ಅಡಚಣೆಗಳ ಬಗ್ಗೆ ಮಾತನಾಡಿಸಿದರು.

ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಮಾತನಾಡಿ, ಶಾಸಕ ಎಚ್.ಟಿ.ಮಂಜು ಹಾಲು ಶಿಥಿಲೀಕರಣ ಘಟಕದಲ್ಲಿ ನೌಕರರಿಂದ ಕಿರುಕುಳದ ಹೆಸರಿನಲ್ಲಿ ಚಳವಳಿ ಸಂಘಟಿಸಿ ಅದನ್ನು ಡಾಲು ರವಿ ಅವರನ್ನು ವೈಯಕ್ತಿಕವಾಗಿ ನಿಂದಿಸಲು ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಡೈರಿ ವಿಚಾರದಲ್ಲಿ ಶಾಸಕರು ತೀಟೆ ರಾಜಕಾರಣ ಮಾಡುತ್ತಿದ್ದಾರೆ. ಡೈರಿಗಳಲ್ಲಿ ನ್ಯಾವ್ಯಾರು ರಾಜಕಾರಣ ಮಾಡುತ್ತಿಲ್ಲ. ಬಂದ ಸವಲತ್ತುಗಳನ್ನು ಎಲ್ಲಾ ಡೈರಿಗಳಿಗೂ ಸಮಾನವಾಗಿ ಹಂಚಿಕೆ ಮಾಡುತ್ತಿದ್ದೇವೆ. ಶಾಸಕರು ತಮ್ಮ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿಲ್ಲವೆ ಎಂದು ಪ್ರಶ್ನಿಸಿದರು.

ಮನ್ಮುಲ್ ಹಾಲಿನ ಪುಡಿ ಹಗರಣದ ಬಗ್ಗೆ ನಮಗೆ ವಿಷಾಧವಿದೆ. ಈ ಹಗರಣದಲ್ಲಿ ನ್ಯಾವ್ಯಾರೂ ಭಾಗಿಯಾಗಿಲ್ಲ. ಹಾಲಿನ ಪುಡಿ ಹಗರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದರು.

ಈ ವೇಳೆ ಟಿಎಪಿಸಿಎಂಎಸ್ ನಿರ್ದೇಶಕ ಎಂ.ಪಿ.ಲೋಕೇಶ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಕಬ್ಬಲಗೆರೆಪುರ ಪುಟ್ಟಸ್ವಾಮಿ, ಮುಖಂಡರಾದ ಅಗ್ರಹಾರಬಾಚಹಳ್ಳಿ ನಾಗೇಶ್, ಕಾಂತರಾಜು, ಸಾರಂಗಿ ವಿಶ್ವನಾಥ್, ಹಾದನೂರು ಪರಮೇಶ್, ಅಂಬಿಗರಹಳ್ಳಿ ಶಿವರಾಂ, ಗೂಡೇಹೊಸಹಳ್ಳಿ ಉದಯಕುಮಾರ್ ಸೇರಿದಂತೆ ಹಲವರು ಇದ್ದರು.