ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸುಗ್ಗಿ ಸಂಕ್ರಾಂತಿ ಹಬ್ಬವನ್ನು ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಹಬ್ಬದ ಅಂಗವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ದೇವಾಲಯ ಪ್ರದಾನ ಅರ್ಚಕರು ಮತ್ತು ಭಕ್ತರು ಸೇರಿ ದೇವಾಲಯಗಳನ್ನು ವಿಶೇಷ ತಳಿರು ತೋರಣ ಮತ್ತು ಹೂವುಗಳಿಂದ ಅಲಂಕರಿಸಿದರು. ಭಕ್ತರ ದೈವ ದರ್ಶನಕ್ಕೆ ಅಗತ್ಯ ಸೌಲಭ್ಯ ಒದಗಿಸಿದ್ದರು. ಮುಂಜಾನೆ 5 ಗಂಟೆ ವೇಳೆಗೆ ಭಕ್ತರು ದೇವಾಲಯಗಳಿಗೆ ಆಗಮಿಸಿ ಭಗವಂತನ ದರ್ಶನ ಪಡೆದು ಕೃತಾರ್ಥರಾದರು.
ಪಟ್ಟಣದ ಭ್ರಮರಾಂಭ ಮಲ್ಲಿಕಾರ್ಜುನ ದೇವಾಲಯ, ಬಸವನಗುಡಿ, ನಾಗಮಂಗಲ ರಸ್ತೆಯಲ್ಲಿರುವ ಆಂಜನೇಯನ ದೇವಾಲಯ, ಚೌಡೇಶ್ವರಿ ದೇವಾಲಯ, ಗಣಪತಿ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಭಕ್ತಿ ಭಾವ ಪ್ರದರ್ಶಿಸಿದರು.ಪುರಸಭಾ ವ್ಯಾಪ್ತಿಯ ಹೊಸಹೊಳಲಿನ ಲಕ್ಷ್ಮೀನಾರಾಯಣ ದೇವಾಲಯ, ಕೋಟೆ ಭೈರವೇಶ್ವರ ದೇವಾಲಯ, ವರಾಹನಾಥ ಕಲ್ಲಹಳ್ಳಿಯ ಭೂ ವರಾಹನಾಥ ದೇವಾಲಯ, ತ್ರಿವೇಣಿ ಸಂಗಮದ ಸಂಗಮೇಶ್ವರ ದೇವಾಲಯ, ಅಕ್ಕಿಹೆಬ್ಬಾಳಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಸೋಮೇಶ್ವರ ದೇವಾಲಯ, ಹರಿಹರಪುರದ ಹರಿಹರೇಶ್ವರ ಮತ್ತು ಚನ್ನಕೇಶವ ದೇವಾಲಯ, ಬೂಕನಕೆರೆಯ ಗೋಗಾಲಮ್ಮ, ಗವೀಮಠದ ಸ್ವತಂತ್ರ ಸಿದ್ದಲಿಂಗೇಶ್ವರವ ದೇವಾಲಯ, ಪುರ ಗ್ರಾಮದ ಮಹದೇಶ್ವರ ದೇವಾಲಯ, ಅಘಲಯ ಗ್ರಾಮದ ಮಲ್ಲಿಕಾರ್ಜುನ ದೇವಾಲಯ, ಅಗ್ರಹಾರಬಾಚಹಳ್ಳಿಯ ಹುಣಸೇಶ್ವರ ದೇವಾಲಯ, ಸಾಸಲಿನ ಶಂಭುಲಿಂಗೇಶ್ವರ, ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇವಾಲಯ ಸೇರಿದಂತೆ ತಾಲೂಕಿನ ಉದ್ದಗಲಕ್ಕೂ ವಿವಿಧ ಗ್ರಾಮಗಳಲ್ಲಿರುವ ದೇವಾಲಯಗಳಲ್ಲಿ ಸಂಕ್ರಂತಿ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.
ಹೊಸ ವಸ್ತ್ರ ಧರಿಸಿದ ಮಕ್ಕಳು ಮತ್ತು ಹೆಂಗೆಳೆಯರು ಮನೆ ಮನೆಗೆ ತೆರಳಿ ಎಳ್ಳು ಬೆಲ್ಲ ಬೀರಿ ಸಂಕ್ರಾತಿಯ ಶುಭಾಷಯಗಳನ್ನು ಹಂಚಿಕೊಂಡು ಸಂಭ್ರಮಿಸಿದರು.