ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭಾರೀ ಮಳೆಯಿಂದಾಗಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೀರು ತುಂಬಿ ಕೆರೆಯಂತೆ ಮಾರ್ಪಟ್ಟು ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡಿದ ಘಟನೆ ಶನಿವಾರ ಸಂಜೆ ನಡೆಯಿತು.ಪಟ್ಟಣದ ಬಸ್ ನಿಲ್ದಾಣದಲ್ಲಿ ಹಲವು ವರ್ಷಗಳಿಂದ ಭಾರೀ ಮಳೆ ಸುರಿದಾಗಲೆಲ್ಲ ಈ ಗೋಳು ತಪ್ಪಿದ್ದಲ್ಲ. ಮಳೆಯಿಂದಾಗಿ ನಿಲ್ದಾಣದೊಳಗಿನ ಪಾರ್ಕಿಂಗ್ ಸ್ಥಳಕ್ಕೂ ನೀರು ನುಗ್ಗಿ ವಾಹನಗಳು ಜಲಾಘಾತಕ್ಕೆ ಒಳಗಾಗಿದ್ದವು.
ಬಸ್ ನಿಲ್ದಾಣದ ಆವರಣಕ್ಕೆ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಬಸ್ಸುಗಳು ಒಳಗಡೆ ಹೋಗಲಾಗದೆ ಮುಖ್ಯ ರಸ್ತೆಯಲ್ಲೇ ಜನರನ್ನು ಇಳಿಸಿ ವಾಪಸ್ ತೆರಳುತ್ತಿದ್ದವು. ಇದರಿಂದ ಜನರು ಬಸ್ ಹತ್ತಲು ಇಳಿಯಲು ಪರದಾಡುವಂತಾಯಿತು.1990ರ ದಶಕದಲ್ಲಿ ಪುರಸಭೆಗೆ ಸೇರಿದ ಸಾರ್ವಜನಿಕ ಪಾರ್ಕ್ ಜಾಗದಲ್ಲಿ ಖಾಸಗಿ ಬಸ್ ನಿಲ್ದಾಣ, ವಾಣಿಜ್ಯ ಮಳಿಗೆಗಳು ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಕೆರೆ ಪ್ರದೇಶದಲ್ಲಿ ಸಾರಿಗೆ ಸಂಸ್ಥೆ ಅವೈಜ್ಞಾನಿಕವಾಗಿ ಬಸ್ ನಿಲ್ದಾಣ ನಿರ್ಮಿಸಿದ್ದರಿಂದ ಜೋರು ಮಳೆ ಬಂದಾಗಲೆಲ್ಲಾ ಬಸ್ ನಿಲ್ದಾಣ ಕೆರೆಯಾಗಿ ಪರಿವರ್ತನೆಯಾಗಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಬಸ್ ನಿಲ್ದಾಣ ನಿರ್ಮಾಣವಾದ ನಂತರ ಕ್ಷೇತ್ರದಿಂದ ಹಲವರು ಶಾಸಕರಾಗಿ, ವಿಧಾನ ಸಭೆ ಸ್ಪೀಕರ್ ಹುದ್ದೆ ಹಾಗೂ ಸಚಿವ ಸ್ಥಾನವನ್ನೂ ಅಲಂಕರಿಸಿ ನಿರ್ಗಮಿಸಿದ್ದಾರೆ. ಆದರೆ, ಯಾವುದೇ ಜನಪ್ರತಿನಿಧಿಯಾಗಲೀ ಅಥವಾ ಸಾರಿಗೆ ಸಂಸ್ಥೆ ಅಧಿಕಾರಿಗಳಾಗಲೀ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲಿಲ್ಲ.ಬಸ್ ನಿಲ್ದಾಣ ಮಳೆ ನೀರು ತುಂಬಿ ಕೆರೆಯಾದಾಗ ಕ್ಷೇತ್ರದ ಜನಪ್ರತಿನಿಧಿಗಳು ಮತ್ತು ಸಂಸ್ಥೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಹೋಗುತ್ತಿದ್ದಾರೆಯೇ ವಿನಹಃ ನೀರು ಬಸ್ ನಿಲ್ದಾಣದೊಳಕ್ಕೆ ಹರಿದು ಬರುವುದನ್ನು ತಡೆಯಲು ಯಾವುದೇ ಪರಿಹಾರ ಮಾರ್ಗಗಳನ್ನು ಕಂಡುಕೊಂಡಿಲ್ಲ.
ಬಸ್ ನಿಲ್ದಾಣ ಪುಟ್ಟ ಕೆರೆ ಅಂಗಳದಲ್ಲಿ ನಿರ್ಮಾಣಗೊಂಡಿದ್ದರಿಂದ ನಿಲ್ದಾಣದ ಪಕ್ಕದಲ್ಲಿ ಹರಿದು ಬರುವ ಹಳ್ಳದ ನೀರು ಕೆಳ ಭಾಗಕ್ಕೆ ಸುಲಲಿತವಾಗಿ ಹೋಗುವಂತೆ ರಾಜಕಾಲುವೆ ನಿರ್ಮಿಸಬೇಕು. ಹಳ್ಳದ ಮೇಲುಭಾಗದಿಂದ ಆಗಿರುವ ಒತ್ತುವರಿ ತೆರೆವುಗೊಳಿಸಬೇಕಿದೆ.ನಿಲ್ದಾಣದ ಒಳಗೆ ನಿರ್ಮಿಸಿರುವ ಚರಂಡಿಯಿಂದ ಪಕ್ಕದ ಹಳ್ಳಕ್ಕೆ ನೀರು ಸರಾಗವಾಗಿ ಹರಿಯಲು ಸಾರಿಗೆ ಸಂಸ್ಥೆ ಕ್ರಮ ವಹಿಸಬೇಕು. ಮಳೆಗಾಲದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದ ಪರಿಣಾಮ ಜೋರು ಮಳೆಯಾದರೆ ಸಾಕು ನಿಲ್ದಾಣ ಜಲಾವೃತ್ತವಾಗಿ ಕೆರೆಯಾಗಿ ಪರಿವರ್ತನೆಯಾಗುತ್ತಿದೆ.
ಬಸ್ ನಿಲ್ದಾಣಕ್ಕೆ ಮಳೆ ನೀರು ಹರಿದು ಬರದಂತೆ ಮೇಲ್ಬಾಗದ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು. ನಿಲ್ದಾಣದೊಳಗಿನ ಚರಂಡಿಯನ್ನು ಕಾಲ ಕಾಲಕ್ಕೆ ಶುಚಿಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ದಾರಿ ಮಾಡಬೇಕು. ನಿಲ್ದಾಣದೊಳಗೆ ಪ್ರಯಾಣಿಕರ ಸುರಕ್ಷತೆಗೆ ಗಮನ ಹರಿಸುವಂತೆ ಪಟ್ಟಣದ ನಾಗರೀಕ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.