ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಕಳೆದ ಐದು ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಮೂವರು ಮಹಾನ್ ನಾಯಕರು ನಿಲ್ಲಿಸಿದ್ದ ಕೃಷಿಭಾಗ್ಯ ಯೋಜನೆಯನ್ನು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಜಾರಿಗೊಳಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ಅಂಚೆಭೂವನಹಳ್ಳಿಯಲ್ಲಿ ಜಿಪಂ, ತಾಪಂ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ನರೇಗಾ ಯೋಜನೆ ಕೃಷಿ ಕವಚ ಕಾರ್ಯಕ್ರಮದಡಿ ಕಂದಕ ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸುತ್ತಿದ್ದ ಕೃಷಿ ಹೊಂಡಗಳಿಂದ ಗ್ರಾಮೀಣ ಪ್ರದೇಶದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತಿತ್ತು. ಆದರೆ, ಕಳೆದ 2018 ರಿಂದ 2024ರವರೆಗೆ ಮುಖ್ಯಮಂತ್ರಿಗಳಾಗಿದ್ದ ಮಹಾನ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಹೋರಾಟಗಾರ ಬಿ.ಎಸ್.ಯಡಿಯೂರಪ್ಪ ಹಾಗೂ ಅತಿ ಬುದ್ಧಿವಂತ ಬಸವರಾಜಬೊಮ್ಮಾಯಿ ಈ ಮೂವರೂ ಈಯೋಜನೆಯನ್ನೇ ನಿಲ್ಲಿಸಿದರು ಎಂದು ದೂರಿದರು.ಈ ಹಿಂದೆ ನೂರು ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದ್ದ ಕೃಷಿ ಭಾಗ್ಯ ಯೋಜನೆಯನ್ನು ರಾಜ್ಯದ ಎಲ್ಲಾ ತಾಲೂಕುಗಳಿಗೂ ಜಾರಿಗೊಳಿಸಲಾಗಿದೆ. ರೈತರು ಈ ಯೋಜನೆಯಡಿ ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದರು.
ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆ ಗುರಿಸಾಧನೆಯಲ್ಲಿ ಮಂಡ್ಯ ಜಿಲ್ಲೆ 27 ಸ್ಥಾನದಲ್ಲಿತ್ತು. ಈ ವರ್ಷ ಆರಂಭದಿಂದಲೇ ನರೇಗಾ ಯೋಜನೆಯಡಿ ಪ್ರತಿ ಗ್ರಾಪಂ ವ್ಯಾಪ್ತಿರಸ್ತೆ, ಚರಂಡಿ, ರೈತರ ಜಮೀನಿನಲ್ಲಿ ಬದು ನಿರ್ಮಾಣ ಸೇರಿದಂತೆ ವೈಯುಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಏನಾದರೂ ಮಾಡಿ 10ನೇ ಸ್ಥಾನದೊಳಗಿರಲು ಪ್ರಯತ್ನಿಸಬೇಕೆಂದು ಅಧಿಕಾರಿಗಳಿಗೆ ಟಾಸ್ಕ್ ನೀಡಿರುವುದಾಗಿ ತಿಳಿಸಿದರು.ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡರೆ ಶೇ.90ರಷ್ಟು ಸಬ್ಸಿಡಿ ಸಿಗಲಿದೆ. ರೈತರಿಗೆ ಅನುಕೂಲ ಮಾಡಿಕೊಡಲು ಎಷ್ಟು ಸಾಧ್ಯವೋ ಅಷ್ಟು ಕಾನೂನು ಮಾರ್ಪಾಟು ಮಾಡಲಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ 600 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿತ್ತು. ಈಗ ಅದರ ಪ್ರಮಾಣವನ್ನು ಮತ್ತಷ್ಟು ಹೆಚ್ಚು ಮಾಡಬಹುದಾಗಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಅಶೋಕ್ ಮಾತನಾಡಿ, ಭೂಮಿಯಲ್ಲಿ ಒಂದು ಇಂಚು ಉತ್ಪಾದನೆಯಾಗಲು 500 ರಿಂದ 2ಸಾವಿರ ವರ್ಷ ಬೇಕು. ಪ್ರತಿವರ್ಷ ಮಳೆಯಿಂದ ಒಂದು ಹೆಕ್ಟೇರ್ ಕೃಷಿ ಭೂಮಿಯಿಂದ 10 ಟನ್‌ನಷ್ಟು ಮಣ್ಣು ಕೊಚ್ಚಿಹೋಗುತ್ತದೆ. ಇದರಿಂದ ಯಾವುದೇ ಬೆಳೆಯ ಬೇರಿನಲ್ಲಿರಬೇಕಾದ ಫಲವತ್ತಾದ ಮೇಲ್ಮೈ ಮಣ್ಣು ಕೊಚ್ಚಿಹೋದರೆ ಇಳುವರಿ ಪ್ರಮಾಣ ಕಡಿಮೆಯಾಗುತ್ತದೆ. ಜಮೀನಿನಲ್ಲಿ ಕಂದಕ ಬದು ನಿರ್ಮಿಸಿಕೊಂಡರೆ ನೀರನ್ನೂ ಕೂಡ ಇಂಗಿಸುವ ಜೊತೆಗೆ ಫಲವತ್ತಾದ ಮಣ್ಣನ್ನು ಭೂಮಿ ಉಳಿಸಿಕೊಂಡು ಬೆಳೆಯಲ್ಲೂ ಸಹ ಅಧಿಕ ಇಳುವರಿ ಕಾಣಬಹುದು. ರೈತರು ಕೃಷಿ ಕವಚ ಕಾರ್ಯಕ್ರಮದ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ತಾಪಂ ಇಒ ಸತೀಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ತಾಪಂ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ, ಅಂಚೆಚಿಟ್ಟನಹಳ್ಳಿ ಗ್ರಾಪಂ ಅಧ್ಯಕ್ಷೆ ರೂಪಾದೇವಿ, ಉಪಾಧ್ಯಕ್ಷೆ ಗಾಯತ್ರಿ, ಸದಸ್ಯ ಕಾಳೇಗೌಡ, ಪಿಡಿಒ ರೂಪಶ್ರೀ, ಪುರಸಭೆ ಸದಸ್ಯ ಸಂಪತ್‌ಕುಮಾರ್, ಮುಖಂಡರಾದ ತ್ಯಾಪೇನಹಳ್ಳಿ ಶ್ರೀನಿವಾಸ್, ದೇವರಾಜು ಸೇರಿದಂತೆ ಹಲವರು ಇದ್ದರು.